ದೀಪಾವಳಿ ಬಂಪರ್; ಉದ್ಯೋಗಿಗಳಿಗೆ 400 ಫ್ಲ್ಯಾಟ್, 1260 ಕಾರು ನೀಡಿದ ಸೂರತ್ ವಜ್ರದ ವ್ಯಾಪಾರಿ
ದೀಪಾವಳಿ ಹಬ್ಬದ ಅಂಗವಾಗಿ ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಸೂರತ್ ಮೂಲದ ವಜ್ರದ ವ್ಯಾಪಾರಿ ಕಾರು ಮತ್ತು ಬಂಗಲೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸೂರತ್ ಮೂಲದ ವಜ್ರದ ವ್ಯಾಪಾರಿ ಮಗದೊಮ್ಮೆ ಸುದ್ದಿಯಲ್ಲಿದ್ದು, ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಭರ್ಜರಿ ದೀಪಾವಳಿ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ವರ್ಷ ತಮ್ಮ ಸಂಸ್ಥೆಯು ವಾರ್ಷಿಕ ಗುರಿ ಮುಟ್ಟಿದ ಹಿನ್ನಲೆಯಲ್ಲಿ 200ರಷ್ಟು ಕಾರುಗಳನ್ನು ಉಡುಗೊರೆಯಾಗಿ ನೀಡಿರುವ ಸಾವ್ಜಿ ಧೋಲಾಕಿಯಾ ಈಗ ಮಗದೊಮ್ಮೆ ಹೃದಯ ವೈಶಾಲತೆಯನ್ನು ಮೆರೆದಿದ್ದಾರೆ.

ಹರೇ ಕೃಷ್ಣ ಡೈಮಂಡ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಮಾಲಿಕ ಸಾವ್ಜಿ ಧೋಲಾಕಿಯಾ 400ರಷ್ಟು ಫ್ಲ್ಯಾಟ್ ಮತ್ತು 1260 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ದೀಪಾವಳಿ ಹಬ್ಬದ ನಿಮಿತ್ತ ಪ್ರತಿ ವರ್ಷವೂ ಸಂಸ್ಥೆಯ ಲಾಭಾಂಶವನ್ನು ನೌಕರರ ಜೊತೆ ಹಂಚಿಕೊಳ್ಳುತ್ತಿರುವ ಧೋಲಾಕಿಯಾ, ಈ ಬಾರಿ ಬೋನಸ್ ನೀಡಲು ಬರೋಬ್ಬರಿ 51 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ.

ಡೈಮಂಡ್ ಮತ್ತು ಜವುಳಿ ವ್ಯಾಪಾರವನ್ನು ಮಾಡುತ್ತಿರುವ ಹರೇ ಕೃಷ್ಣ ಎಕ್ಸ್ ಪೋರ್ಟ್ ನಲ್ಲಿ 5500ರಷ್ಟು ನೌಕರರು ದುಡಿಯುತ್ತಿದ್ದು, ವಾರ್ಷಿಕವಾಗಿ 6600 ಕೋಟಿ ರುಪಾಯಿಗಳ ವಹಿವಾಟನ್ನು ಹೊಂದಿದೆ.

ಕಳೆದೊಂದು ವರ್ಷದಲ್ಲಿ ನೌಕರರು ತೋರಿದ ಉತ್ತಮ ಕೆಲಸ ನಿರ್ವಹಣೆಯ ಆಧಾರದಲ್ಲಿ ಉಡುಗೊರೆಗಳನ್ನು ನೀಡಲಾಗಿದೆ.

ಹರೇ ಕೃಷ್ಣ ಸಂಸ್ಥೆಯು ನೌಕರರಿಗೆ ಫ್ಲ್ಯಾಟ್ ಖರೀದಿಸಲು ಡೌನ್ ಪೇಮೆಂಟ್ ಮಾಡಲಿದೆ. ಅಲ್ಲದೆ ಐದು ವರ್ಷಗಳ ಹೋಮ್ ಲೋನ್ ಇಎಂಐ ಸೇವೆಯನ್ನು ಒದಗಿಸುತ್ತಿದೆ.

ಕಳೆದ ವರ್ಷವೂ ಇದೇ ರೀತಿಯಲ್ಲಿ ಸುದ್ದಿ ಮಾಡಿದ್ದ ಸಂಸ್ಧೆಯು 491 ಕಾರು ಹಾಗೂ 200ರಷ್ಟು ಫ್ಲ್ಯಾಟ್ ಗಳನ್ನು ದೀಪಾವಳಿ ಉಡುಗೊರೆ ರೂಪದಲ್ಲಿ ನೀಡಿತ್ತು.

ಎರಡು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಸಂಸ್ಥೆಯ 500ರಷ್ಟು ನೌಕರರಿಗೆ ಫಿಯೆಟ್ ಪುಂಟೊ ಇವೊ ಕಾರನ್ನು ಉಡುಗೊರೆಯಾಗಿ ನೀಡಿತ್ತು.

ಇದೀಗ ಹರೇ ಕೃಷ್ಣ ಡೈಮಂಡ್ ಎಕ್ಸ್ ಪೋರ್ಟ್ ಮಾಲಿಕ ಸಾವ್ಜಿ ಧೋಲಾಕಿಯಾ ಹೃದಯ ವೈಶಾಲತೆ ಎಲ್ಲೆಡೆ ಸುದ್ದಿಯಾಗಿತ್ತಿದ್ದು, ಇತರೆ ಸಂಸ್ಥೆಗಳಲ್ಲಿ ದುಡಿಯುವ ನೌಕರರು ಆಕರ್ಷಿತರಾಗಿದ್ದಾರೆ.

ವಾರ್ಷಿಕ ಗುರಿ ಮುಟ್ಟುವುದಕ್ಕಾಗಿ ನೌಕರರನ್ನು ಓವರ್ ಟೈಮ್ ದುಡಿಸಿಕೊಳ್ಳುತ್ತಿರುವ ಸಂಸ್ಥೆಗಳೇ ನಮ್ಮ ನಗರದಲ್ಲಿರುವಾಗ ಹರೇ ಕೃಷ್ಣಾದಂತಹ ಕಂಪನಿಗಳು ದೇಶದ ಹೆಮ್ಮೆಯಾಗಿ ಹೊರಹೊಮ್ಮಿದೆ.

2011ನೇ ಸಾಲಿನಿಂದ ದುಬಾರಿ ಉಡುಗೊರೆಗಳನ್ನು ನೀಡುತ್ತಾ ಬಂದಿರುವ ಸೂರತ್ ಮೂಲದ ಈ ಕೋಟ್ಯಾಧಿಪತಿ ಉದ್ಯಮಿ ಈ ಬಾರಿ 1716ರಷ್ಟು ನೌಕರರನ್ನು ಆಯ್ಕೆ ಮಾಡಿಕೊಂಡಿದ್ದರು.

ಕಾರಿಲ್ಲದವರಿಗೆ ಕಾರು ಮತ್ತು ಆಗಲೇ ಕಾರು ಹೊಂದಿರುವವರಿಗಾಗಿ ಫ್ಲ್ಯಾಟ್ ನೀಡಲಾಗುತ್ತಿದೆ ಎಂದು ಮಾಲಿಕ ಧೋಲಾಕಿಯಾ ವಿವರಿಸಿದ್ದಾರೆ.

ಸಂಸ್ಥೆಯ ವಾರ್ಷಿಕ ಮಹಾಸಭೆಯ ಬಳಿಕ ಅತ್ಯುತ್ತಮ ಕೆಲಸ ನಿರ್ವಹಿಸುವ ಉದ್ಯೋಗಿಗಳ ಹೆಸರನ್ನು ಬಹಿರಂಗಗೊಳಿಸಲಾಗಿದೆ.

ಮೂಲತ: ಗುಜರಾತ್ ನ ಅಮ್ರೇಜಿ ಜಿಲ್ಲೆಯವರಾಗಿರುವ ಧೋಲಾಕಿಯಾ ಚಿಕ್ಕವನಿಂದಲೇ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದು, ತಮ್ಮ ಮಾವನಿಂದ ಸಾಲ ಪಡೆಯುವ ಮೂಲಕ ವ್ಯಾಪಾರವನ್ನು ಆರಂಭಿಸಿದ್ದರು.

ಹಲವಾರು ಕನಸುಗಳನ್ನು ಕಟ್ಟಿಕೊಂಡು ಪ್ರತಿಯೊಬ್ಬರುವ ಸಂಸ್ಥೆಯನ್ನು ಸೇರಿಕೊಳ್ಳುತ್ತಾರೆ. ಅವರ ಕನಸುಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಸ್ಪಂದಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದವರು ಮನದಾಳದ ಮಾತನ್ನಾಡಿದ್ದಾರೆ.

ತಮ್ಮ ಮಗನಿಗೂ ಜೀವನದ ಕಷ್ಟಪಾಡುಗಳನ್ನು ತಿಳಿಸಿಕೊಡುವ ಇರಾದೆಯಲ್ಲಿರುವ ಧೋಲಾಕಿಯಾ, ಕಾರ್ಮಿಕ ಕೆಲಸಕ್ಕಾಗಿ ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಒಟ್ಟಿನಲ್ಲಿ ಈ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಹರೇ ಕೃಷ್ಣ ಸಂಸ್ಥೆಯ ಉದ್ಯೋಗಿ ಮತ್ತು ಕುಟುಂಬಗಳ ಬಾಳು ಬೆಳಗಾಗುವಂತಾಗಿದೆ.


Click it and Unblock the Notifications








