ದೆಹಲಿ-ಮುಂಬೈ 1384 ಕೀ.ಮೀ. ದೂರವನ್ನು 12 ತಾಸಿನಲ್ಲೇ ಕ್ರಮಿಸಿದ ಟಾಲ್ಗೊ
ಪ್ರಾಯೋಗಿಕ ಸಂಚಾರ ಪರೀಕ್ಷೆಯಲ್ಲಿರುವ ಸ್ಪೇನ್ ನ ಬಹುನಿರೀಕ್ಷಿತ ಟಾಲ್ಗೊ ರೈಲು ತನ್ನ ಅಂತಿಮ ಪ್ರಯತ್ನದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ ನಡುವಣ ದೂರವನ್ನು ಕೇವಲ 11 ಗಂಟೆ 48 ನಿಮಿಷಗಳಲ್ಲೇ ಕ್ರಮಿಸಿದೆ.
ದೆಹಲಿ-ಮುಂಬೈ ನಡುವಣ 1384 ಕೀ.ಮೀ. ದೂರವನ್ನು ಗಂಟೆಗೆ ಸರಾಸರಿ 150 ಕೀ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಟಾಲ್ಗೊ ರೈಲು ದೇಶದ ಶರವೇಗದ ರೈಲು ಎಂಬ ಕೀರ್ತಿಗೆ ಪಾತ್ರವಾಗಿದೆ.

ಶನಿವಾರ ಅಪರಾಹ್ನ 2.45 ವೇಳೆಗೆ ದೆಹಲಿಯಿಂದ ಹೊರಟ ಟಾಲ್ಗೊ ರೈಲು ಭಾನುವಾರ ಮಧ್ಯರಾತ್ರಿ 2.33ರ ವೇಳೆಗೆ ಮುಂಬೈ ನಿಲ್ದಾಣವನ್ನು ತಲುಪಿತ್ತು.

ಇದೇ ದೂರವನ್ನು ತಲುಪಲು ಗಂಟೆಗೆ 130 ಕೀ.ಮೀ. ವೇಗದಲ್ಲಿ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಗೆ 15 ತಾಸು ಹಾಗೂ 50 ನಿಮಿಷಗಳಷ್ಟು ಸಮಯ ಬೇಕಾಗುತ್ತದೆ.

ಇದಕ್ಕೂ ಮೊದಲು ಐದು ಬಾರಿ ಇದೇ ಹಾದಿಯಲ್ಲಿ ಗಂಟೆಗೆ 140 ಕೀ.ಮೀ. ವೇಗದಲ್ಲಿ ಟಾಲ್ಗೊ ರೈಲು ಪರೀಕ್ಷೆಯನ್ನು ಹಮ್ಮಿಕೊಂಡಿತ್ತು. ಈ ಹೈಸ್ಪೀಡ್ ರೈಲು ಕಡಿದಾದ ತಿರುವಿನಲ್ಲೂ ಅತ್ಯುತ್ತಮ ಆವೇಗವನ್ನು ಕಾಪಾಡಿಕೊಂಡಿದೆ.

ಸಾಂಪ್ರದಾಯಿಕ ರೈಲು ಬೋಗಿಗಿಂತಲೂ ಹಗುರವಾಗಿರುವ ಟಾಲ್ಗೊ ರೈಲುಗಳು ವೇಗವಾಗಿ ಗಮ್ಯಸ್ಥಾನವನ್ನು ತಲುಪಲಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಿರುವ ರೈಲ್ವೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸದೆ ರೈಲುಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಟಾಲ್ಗೊ ರೈಲುಗಳ ಪ್ರಾಯೋಗಿಕ ಸಂಚಾರ ಪ್ರಯೋಗ ನಡೆಸಲಾಗುತ್ತಿದೆ. ಬೋಗಿಗಳು ಹಗುರವಾಗಿರುವುದರಿಂದ ಇದನ್ನು ಎಳೆಯಲು ಕಡಿಮೆ ಶಕ್ತಿ ಸಾಕಾಗಲಿದ್ದು, ಶೇಕಡಾ 30ರಷ್ಟು ಇಂಧನ ಉಳಿತಾಯವಾಗಲಿದೆ.

ಒಂಬತ್ತು ಬೋಗಿಗಳ ಟಾಲ್ಗೊ ರೈಲಿನಲ್ಲಿ ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕಾರು, ನಾಲ್ಕು ಚೈರ್ ಕಾರು, ತಲಾ ಒಂದು ಕೆಫೆಟೇರಿಯಾ, ಪವರ್ ಕಾರ್, ಸಿಬ್ಬಂದಿ ಹಾಗೂ ಸಾಮಾನುಗಳಿನ್ನಡಲು ಟೈಲ್ ಎಂಡ್ ಕೋಚ್ ಗಳಿವೆ.
ಅಂದ ಹಾಗೆ 2016 ಎಪ್ರಿಲ್ 21ರಂದು ಟಾಲ್ಗೊ ರೈಲುಗಳು ಮುಂಬೈ ಬಂದರನ್ನು ತಲುಪಿತ್ತು.

ದೇಶದ ವೇಗದ ರೈಲುಗಳ ಪಟ್ಟಿ ಇಲ್ಲಿದೆ
ಟಾಲ್ಗೊ: ಗಂಟೆಗೆ 180 ಕೀ.ಮೀ. (ಪರೀಕ್ಷೆ ವೇಳೆಯಲ್ಲಿ ಸರಾಸರಿ 150ರಿಂದ 160 ಕೀ.ಮೀ.)
ಗತಿಮಾನ್ ಎಕ್ಸ್ ಪ್ರೆಸ್: : ಗಂಟೆಗೆ 160 ಕೀ.ಮೀ.
ಶತಾಬ್ದಿ: : ಗಂಟೆಗೆ 150 ಕೀ.ಮೀ.
ರಾಜಧಾನಿ ಎಕ್ಸ್ ಪ್ರೆಸ್: : ಗಂಟೆಗೆ 130 ಕೀ.ಮೀ.


Click it and Unblock the Notifications








