ಗಂಟೆಗೆ 180 ಕೀ.ಮೀ. ವೇಗ; ಸ್ಪೇನ್‌ನ 'ಟಾಲ್ಗೊ' ರೈಲು ದೇಶಕ್ಕೆ ನಂ.1
ಭಾರತದ ಅತಿ ವೇಗದ ರೈಲು ಎಂಬ ಕೀರ್ತಿಗೆ ಸ್ಪೇನ್ ಮೂಲದ 'ಟಾಲ್ಗೊ' ರೈಲು ಪಾತ್ರವಾಗಿದೆ. ಪ್ರಾಯೋಗಿಕ ಸಂಚಾರ ಪರೀಕ್ಷೆಯಲ್ಲಿ ಗಂಟೆಗೆ 180 ಕೀ.ಮೀ. ವೇಗವನ್ನು ಕಾಪಾಡಿಕೊಂಡಿರುವ ಟಾಲ್ಗೊ, ಇದುವರೆಗೆ ಅತಿ ವೇಗದ ರೈಲೆಂಬ ಖ್ಯಾತಿಗೆ ಪಾತ್ರವಾಗಿರುವ ಗತಿಮಾನ್ ಎಕ್ಸ್ ಪ್ರೆಸ್ ದಾಖಲೆಯನ್ನು ಅಳಿಸಿ ಹಾಕಿದೆ.
ಟಾಲ್ಗೊ ರೈಲಿನ ವಿಶಿಷ್ಟತೆಗಳನ್ನು ಅರಿಯಲು ಇಲ್ಲಿ ಕ್ಲಿಕ್ಕಿಸಿರಿ
ಟಾಲ್ಗೊ ರೈಲು ಹಂತ ಹಂತವಾಗಿ ದೇಶದ ವಿವಿಧ ಹಳಿಗಳಲ್ಲಿ ಪರೀಕ್ಷಾರ್ಥ ಸಂಚಾರ ಪ್ರಯೋಗವನ್ನು ನಡೆಸುತ್ತಿದೆ. ಮಥುರಾ ಮತ್ತು ಪಲ್ವಾಲ್ ನಡುವಣ 86 ಕೀ.ಮೀ. ದೂರವನ್ನು ಟಾಲ್ಗೊ ರೈಲು ಕೇವಲ 38 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಈ ಹಿಂದೆ ಗತಿಮಾನ್ ರೈಲು ಪ್ರತಿ ಗಂಟೆಗೆ 160 ಕೀ.ಮೀ. ವೇಗದಲ್ಲಿ ಸಂಚರಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.

ರೈಲ್ವೆ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಟಾಲ್ಗೊ ರೈಲುಗಳ ಪ್ರಾಯೋಗಿಕ ಸಂಚಾರ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದಕ್ಕೂ ಮೊದಲು ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಬರೇಲಿ ಮಾರ್ಗವಾಗಿ ಟಾಲ್ಗೊ ರೈಲು ಗಂಟೆಗೆ 115 ಕೀ.ಮೀ. ವೇಗವನ್ನು ಕಾಪಾಡಿಕೊಂಡಿತ್ತು.

ಎರಡನೇ ಹಂತದ ಪ್ರಾಯೋಗಿಕ ಸಂಚಾರವು ಜುಲೈ 09ರಂದು ಆರಂಭಗೊಂಡಿತ್ತು. ಮೊದಲ ದಿನದಲ್ಲಿ 120 ಕೀ.ಮೀ. ವೇಗವನ್ನು ಕಾಪಾಡಿಕೊಂಡಿರುವ ಟಾಲ್ಗೊ ರೈಲು ದಿನಂಪ್ರತಿ 10 ಕೀ.ಮೀ.ಗಳಂತೆ ವೇಗವನ್ನು ಹೆಚ್ಚಿಸಲಾಗಿತ್ತು.

ಈಗ ಮಥುರಾ ಮತ್ತು ಪಲ್ವಾಲ್ ನಡುವಣ ಹಾದಿಯಲ್ಲಿ ಸುಮಾರು 40 ದಿನಗಳ ಕಾಲ ಗಂಟೆಗೆ 180 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗುವುದು.

ಒಂಬತ್ತು ಬೋಗಿಗಳ ಟಾಲ್ಗೊ ರೈಲಿನಲ್ಲಿ ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕಾರು, ನಾಲ್ಕು ಚೈರ್ ಕಾರು, ತಲಾ ಒಂದು ಕೆಫೆಟೇರಿಯಾ, ಪವರ್ ಕಾರ್ ಮತ್ತು ಸಿಬ್ಬಂದಿ ಹಾಗೂ ಸಾಮಾನುಗಳಿನ್ನಿಡಲು ಟೈಲ್ ಎಂಡ್ ಕೋಚ್ ಗಳಿರಲಿದೆ.

ಟಾಲ್ಗೊ ವೇಗದ ರೈಲು ಯೋಜನೆಯಂತೆ ಮುಂಬೈ ಮತ್ತು ದೆಹಲಿ ನಡುವಣ 1200 ಕೀ.ಮೀ. ದೂರವನ್ನು ಕೇವಲ 12 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರಸ್ತುತ 17 ತಾಸುಗಳಷ್ಟು ಪ್ರಯಾಣಿಸಬೇಕಾಗಿದೆ. ಅಂದ ಹಾಗೆ ಈ ಎರಡು ಪ್ರಮುಖ ನಗರಗಳ ನಡುವೆ 200 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಯಲಿದೆ.

ಸ್ಪೇನ್ ಟಾಲ್ಗೊ ರೈಲಿನ ಒಂಬತ್ತು ಲಗ್ಷುರಿ ರೈಲುಗಳು ಸಮುದ್ರ ಹಾದಿ ಮುಖಾಂತರ ಭಾರತದ ಮುಂಬೈ ಬಂದರನ್ನು ತಲುಪಿದೆ. ಇದು ವಿಮಾನದಂತಹ ಐಷಾರಾಮಿ ಸೌಲಭ್ಯಗಳನ್ನು ರೈಲಿನಲ್ಲೇ ಒದಗಿಸಲಿದೆ.

ಹೈ ಸ್ಪೀಡ್ ರೈಲುಗಳನ್ನು ಭಾರತಕ್ಕೆ ಒದಗಿಸಲು ವಿಶೇಷ ಆಸಕ್ತಿ ವ್ಯಕ್ತಪಡಿಸಿರುವ ಸ್ಪೇನ್, ಪರೀಕ್ಷಾರ್ಥ ಪ್ರಯೋಗವನ್ನು ಸಂಪೂರ್ಣ ಉಚಿತವಾಗಿ ಹಮ್ಮಿಕೊಳ್ಳುತ್ತಿದೆ. ಅಲ್ಲದೆ ಭಾರತಕ್ಕೆ ರೈಲು ಬೋಗಿಗಳ ರಫ್ತು ವೆಚ್ಚವನ್ನು ಭರಿಸಿದೆ.

ಇಲ್ಲಿನ ಗಮನಾರ್ಹ ಅಂಶವೆಂದರೆ ಈಗಿರುವ ರೈಲ್ವೆ ಮೂಲ ಸೌಕರ್ಯಗಳಲ್ಲಿ ಹೆಚ್ಚಿನ ಸುಧಾರಣೆಯಿಲ್ಲದೆ ಟಾಲ್ಗೊ ರೈಲುಗಳು ಗಂಟೆಗೆ 160 ಕೀ.ಮೀ. ಗಳಿಂದ 200 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಈ ಎಲ್ಲ ಅಂಶಗಳು ಒಟ್ಟಾರೆ ನಿರ್ವಹಣಾ ವೆಚ್ಚ ಕಡಿತ ಮಾಡಲು ಭಾರತೀಯ ರೈಲ್ವೆಗೆ ಸಹಕಾರಿಯಾಗಲಿದೆ.

ಹಗುರ ಭಾರದ ಟಾಲ್ಗೊ ರೈಲುಗಳ ಓಡಾಟಕ್ಕೆ ಶೇಕಡಾ 30ರಷ್ಟು ಕಡಿಮೆ ವಿದ್ಯುತ್ ಸಾಕಾಗುವುದು. ಇದು ಒಟ್ಟಾರೆ ವಿದ್ಯುತ್ ಬಿಲ್ ಕಡಿತ ಮಾಡುವಲ್ಲೂ ಸಹಕಾರಿಯಾಗಲಿದೆ.


Click it and Unblock the Notifications








