ಆಕರ್ಷಕ ಲುಕ್: ಸೂಪರ್ ಕಾರಿನಂತೆ ಎಲ್ಲರ ಪ್ರೀತಿಯ 'Tata ಸುಮೊ' ಮಾಡಿಫೈ
ಭಾರತದಲ್ಲಿ ಟಾಟಾ ಸುಮೊ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, ಸರಿ ಸುಮಾರು 25 ವರ್ಷ ರಸ್ತೆಯಲ್ಲಿ ರಾಜನಾಗಿ ಮರೆದಿತ್ತು. ಈಗಲೂ ಬಹುತೇಕರು ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಸರ್ಕಾರಿ ಇಲಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸುಮೊವನ್ನು ಉಪಯೋಗಿಸುತ್ತಿವೆ. ಇದೀಗ, ಅದನ್ನು ರಗಡ್ ಲುಕ್ ಪಡೆದಿರುವ ಸೂಪರ್ ಆಫ್-ರೋಡ್ ಕಾರಿನಂತೆ ಮಾಡಿಫೈ ಮಾಡಲಾಗಿದೆ.
ಹಲವು ಮಂದಿಗೆ ಇದು ತಿಳಿದಿಲ್ಲ. ಟಾಟಾ ಮೋಟಾರ್ಸ್ ಭಾರತೀಯ ಸೇನೆಗಾಗಿ ಸುಮೊದ (Tata Sumo) ವಿಶೇಷ 4×4 (ಫೋರ್ ವೀಲ್ ಡ್ರೈವ್) ಆವೃತ್ತಿಗಳನ್ನು ನೀಡುತ್ತಿತ್ತು. ಇದೀಗ, ಅಂತಹದ್ದೇ ಸುಮೊವನ್ನು ಹರಾಜಿನಲ್ಲಿ ಪಡೆದ ವ್ಯಕ್ತಿಯೊಬ್ಬ ಆಕರ್ಷಕ ಆಫ್-ರೋಡ್ ಕಾರಿನಂತೆ ಮಾಡಿಫೈ ಮಾಡಿಸಿದ್ದು, ನೋಡುಗರನ್ನು ಸೆಳೆಯುತ್ತಿದೆ. ಹಲವು ಮಂದಿ, ಮಾರುತಿ ಸುಜುಕಿ ಜಿಮ್ನಿ ಹಾಗೂ ಮಹೀಂದ್ರಾ ಥಾರ್ ಗೆ ಪ್ರಬಲ ಪೈಪೋಟಿ ನೀಡುವಂತಿದೆ ಎಂದು ಹೇಳುತ್ತಿದ್ದಾರೆ.

ರಾಜಸ್ಥಾನದ ಗೋಡ್ವಾಡ್ ಸಫಾರಿ ಕ್ಯಾಂಪ್ ಮಾಲೀಕ ಪರೀಕ್ಷಿತ್ ಸಿಂಗ್ ದಿಯೋರಾ, ಮರುಭೂಮಿ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕೆ ಈ ರೀತಿಯಾಗಿ ಸುಮೊವನ್ನು ಬದಲಾಯಿಸಿದ್ದಾರೆ. ಆದರೆ, ಎಂಜಿನ್ ಆಯ್ಕೆಯಲ್ಲಿ ಯಾವುದೇ ಪರಿವರ್ತನೆ ಮಾಡಿಲ್ಲ. 90 Bhp ಗರಿಷ್ಠ ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸಲು ಸಾಮರ್ಥ್ಯವಿರುವ ಹಳೆಯ 2.0 ಲೀಟರ್ ಇಂಡೈರೆಕ್ಟ್ ಇಂಜೆಕ್ಷನ್ ಟರ್ಬೊಚಾರ್ಜ್ಡ್ ಇಂಟೆರ್ ಕೋಲ್ಡ್ ಡಿಸೇಲ್ ಎಂಜಿನ್ ಅನ್ನೇ ಹೊಂದಿದೆ.
ಈ ಸುಮೊದಲ್ಲಿ ಸ್ಟ್ಯಾಂಡರ್ಡ್ ಸಸ್ಪೆನ್ಷನ್, ಪವರ್ ಸ್ಟೀರಿಂಗ್ ಏರ್ ಕಂಡೀಷನ್ ಹಾಗೂ ಇಂಡಿಪೆಂಡೆಂಟ್ ಫ್ರಂಟ್ ಸಸ್ಪೆನ್ಷನ್ ಇದ್ದು, ಚಾಲಕ ಆರಾಮದಾಯವಾಗಿ ಡ್ರೈವ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಹಳೆಯ ಬಂಪರ್ ಬದಲಿಗೆ ಆಫ್-ರೋಡ್ ಲುಕ್ ಕೊಡಲು ಹೊಸದಾದ ಬಂಪರ್ ಅಳವಡಿಸಲಾಗಿದೆ. ದೊಡ್ಡದಾದ 33/12.5 R15 ಅಳತೆಯ ಟೈಯರ್ಸ್ ಹಾಗೂ 15 ಇಂಚಿನ ಅಲಾಯ್ ವೀಲ್ಸ್ ಹೊಂದಿದ್ದು, ಮತ್ತಷ್ಟು ಆಕರ್ಷಣಿವಾಗಿ ಕಾಣಲು ಟಾಟಾ ಟ್ರಕ್ ಗಳಲ್ಲಿ ಬಳಸುವ ವಿಂಗ್ ಮಿರರ್ ಉಪಯೋಗಿಸಲಾಗಿದೆ.

ಈ ಸುಮೊ ಫ್ರಂಟ್ ಆಕರ್ಷಕ LED ಹೆಡ್‌ಲ್ಯಾಂಪ್ಸ್ ಇದ್ದು, ರೇರ್ ನಲ್ಲಿಯೂ LED ಲೈಟ್ ಇದೆ. ಒಳಭಾಗವು ಅತ್ಯಾಧುನಿಕವಾಗಿ ಮಾಡಿಫೈ ಮಾಡಲಾಗಿದ್ದು, ಲೆದರ್ ಸೀಟ್ಸ್, ಸೆಂಟರ್ ಕನ್ಸೋಲ್ ಮತ್ತು ನ್ಯಾವಿಗೇಟರ್ ಲ್ಯಾಂಪ್ ಒಳಗೊಂಡಿದ್ದು, ನೋಡಲು ಸುಂದರವಾಗಿ ಕಾಣುತ್ತಿದೆ. ಜೊತೆಗೆ ಹಳೆಯ ಕಾರಾಗಿರುವುದರಿಂದ 9 ರಿಂದ 10 Kmpl ಮೈಲೇಜ್ ನೀಡುವ ಸಾಮರ್ಥ ಹೊಂದಿದೆ.
ಟಾಟಾದ ಈ ಸುಮೊ 1994ರಲ್ಲಿ ಬಿಡುಗಡೆಗೊಂಡು 2019ರವರೆಗೆ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿತ್ತು. ಈ ಮೂಲಕ ಸರಿ ಸುಮಾರು 25 ವರ್ಷ ರಸ್ತೆಗಳಲ್ಲಿ ರಾಜನಾಗಿ ಮೆರೆದಿತ್ತು. ದೇಶದಲ್ಲಿ ಕಟ್ಟುನಿಟ್ಟಾದ ಕ್ರ್ಯಾಶ್ ಟೆಸ್ಟ್ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸಲು ವಿಫಲವಾದ ಹಿನ್ನೆಲೆ, ಅದರ ಉತ್ಪಾದನೆಯನ್ನು ಕಂಪನಿ ಸ್ಥಗಿತಗೊಳಿಸಿತು ಎಂದು ಆಗಿನ ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಕಡೆಯದಾಗಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಾಟಾ ಸುಮೊ ಗೋಲ್ಡ್ ಬಗ್ಗೆ ಹೇಳುವುದಾದರೆ, ಇದು ರೂ.5.81 ಲಕ್ಷದಿಂದ ರೂ.8.97 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿತ್ತು. ಡೀಸೆಲ್ ಎಂಜಿನ್ ಆಯ್ಕೆಯೊಂದಿದ್ದ ಈ ಕಾರು, FWD (ಫ್ರಂಟ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿತ್ತು. ಜೊತೆಗೆ 14.07 - 15.3 kmpl ಮೈಲೇಜ್ ನೀಡುತ್ತಿತ್ತು.
ಇನ್ನು, ಸುಮೊವನ್ನು ಅದರ ಹಳೆಯ ನೋಟಕ್ಕೆ ಕೊಂಚವು ಚ್ಯುತಿ ಬರದಂತೆ ಮಾರ್ಪಾಡು ಮಾಡಲಾಗಿದೆ. ಇದು ರಾಜಸ್ತಾನದ ಮರುಭೂಮಿಯಲ್ಲಿ ಚಲಿಸಲು ಅತ್ಯುತ್ತಮವಾಗಿದೆ. ಪ್ರವಾಸಿಗರ ಆಕರ್ಷಣೆಯು ಆಗಿದೆ ಎಂದು ಹೇಳಬಹುದು. ಹಳೆದ ಕಾರಾಗಿರುವುದರಿಂದ ಮೈಲೇಜ್ ಕಡಿಮೆ ಇರಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೇ, ವಾಹನಗಳನ್ನು ಯಾವುದೇ ರೀತಿಯಲ್ಲಿ ಮಾರ್ಪಾಡು ಮಾಡುವುದು ವಾಸ್ತವವಾಗಿ ಕಾನೂನುಬಾಹಿರವಾಗಿದೆ.


Click it and Unblock the Notifications