ಸೆಮಿಕಂಡಕ್ಟರ್ ಪೂರೈಸಲು ಟಾಟಾದೊಂದಿಗೆ ಟೆಸ್ಲಾ ಒಪ್ಪಂದ.. ಕೆಲವೇ ದಿನದಲ್ಲಿ ಮೊದಲ ಶೋರೂಂ ಆರಂಭ?
ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಮಹತ್ವದ ಒಪ್ಪಂದವನ್ನು ಮಾಡಿಕೊಂಡಿವೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಟೆಸ್ಲಾದ ಜಾಗತಿಕ ಕಾರ್ಯಾಚರಣೆಗಳಿಗಾಗಿ ಸೆಮಿಕಂಡಕ್ಟರ್ ಚಿಪ್‌ಗಳನ್ನು ಪೂರೈಸಲು ಟಾಟಾ ಈ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ಅಮೆರಿಕದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿರುವ ಟೆಸ್ಲಾ, ಈಗಾಗಲೇ ಭಾರತದಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸುವ ಕಾರ್ಯದಲ್ಲಿ ನಿರತವಾಗಿದೆ. ನವದೆಹಲಿ ಅಥವಾ ಮುಂಬೈನಲ್ಲಿ ಶೋರೂಂ ಆರಂಭಿಸಲು ಸೂಕ್ತ ಜಾಗದ ಹುಡುಕಾಟಕನ್ನು ಕೂಡ ಶುರು ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 4 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾಹನ ಮಾರಾಟದಲ್ಲಿ ಕುಸಿತಕಂಡಿರುವ ಟೆಸ್ಲಾ, ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಶಾಲಗೊಳಿಸಲು ಪ್ರಯತ್ನಿಸುತ್ತಿದೆ.

ಭಾರತದಲ್ಲಿ ಟೆಸ್ಲಾ ಆರಂಭಿಸಲಿರುವ ಶೋರೂಂ, 280 - 465 ಚದರ ಮೀಟರ್ ನಷ್ಟು ದೊಡ್ಡದಿರಲಿದ್ದು, ಪ್ರತಿಯೊಂದು ನಗರದಲ್ಲೂ ಸರ್ವಿಸ್ ಸೆಂಟರ್ ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಾರುಗಳನ್ನು ಮಾರಾಟಗೊಳಿಸಲು ಟೆಸ್ಲಾ ಕಂಪನಿಯು ಜರ್ಮನಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಬಲ ಭಾಗದಲ್ಲಿ ಡ್ರೈವಿಂಗ್ ಸೀಟ್ ಹೊಂದಿರುವ ಕಾರುಗಳ ತಯಾರಿಕೆಯನ್ನು ಸಹ ಶುರು ಮಾಡಿದೆ ಎನ್ನಲಾಗಿದೆ.
ಭಾರತದಲ್ಲಿ ಕನಿಷ್ಠ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿ, ಕಾರ್ಖಾನೆಯನ್ನು ಆರಂಭಿಸುವ ವಾಹನ ತಯಾರಕ ಕಂಪನಿಗಳಿಗೆ ಎಲೆಕ್ಟ್ರಿಕ್ ವಾಹನಗಳ ಆಮದು ತೆರಿಗೆಯನ್ನು ಕೇಂದ್ರ ಸರ್ಕಾರ ಶೇಕಡ 100% ರಿಂದ ಶೇಕಡ 15%ಗೆ ಕಡಿತಗೊಳಿಸಿದೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಭಾನುವಾರ ದೇಶಕ್ಕೆ ಬರಲಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಬಂಡವಾಳ ಹೂಡಿಕೆ ಸಂಬಂಧ ದೊಡ್ಡ ಘೋಷಣೆ ಮಾಡುವ ನಿರೀಕ್ಷೆಯಿದೆ.

ಕಳೆದ ವರ್ಷದ ಜೂನ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಎಲೋನ್ ಮಸ್ಕ್ ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ಟೆಸ್ಲಾ ಅಧಿಕಾರಿಗಳು ಕಳೆದ ತಿಂಗಳು ಶೋರೂಂಗಾಗಿ ಸೂಕ್ತ ಸ್ಥಳದ ಹುಡುಕಾಟವನ್ನು ಶುರು ಮಾಡಿದ್ದು, ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೂ ಮಾತುಕತೆಯನ್ನು ನಡೆಸಿದ್ದಾರೆ. ಬಹುತೇಕ ಈ ವರ್ಷವೇ ಶೋರೂಂ ಆರಂಭವಾಗಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ.
ಟೆಸ್ಲಾ ಕಂಪನಿಯು ತನ್ನ ಪ್ರಮುಖ ಮಾರುಕಟ್ಟೆಗಳಾದ ಅಮೆರಿಕ ಮತ್ತು ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮಂದಗತಿಯ ಬೆಳವಣಿಗೆಯನ್ನು ಸಾಧಿಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಕಾರಣಕ್ಕೆ ಟೆಸ್ಲಾ ತನ್ನ ಚಿತ್ತವನ್ನು ಭಾರತದತ್ತ ನೆಟ್ಟಿದೆ. ಕಂಪನಿಯ ಕಾರುಗಳು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಬಹುತೇಕ ದೇಶೀಯ ಗ್ರಾಹಕರಿಗೆ ಇಷ್ಟವಾಗಬಹುದು.
ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿರುವ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ)ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಖರೀದಿಸುತ್ತಿದ್ದಾರೆ. ದೇಶದಲ್ಲಿ 2023ರಲ್ಲಿ ಒಟ್ಟು ಕಾರು ಮಾರಾಟದಲ್ಲಿ ಇವಿಗಳ ಪಾಲು ಶೇಕಡ 2% ಇದೆ. ಕೇಂದ್ರ ಸರ್ಕಾರವು 2030ರ ವೇಳೆಗೆ ಹೊಸ ಕಾರು ಮಾರಾಟದಲ್ಲಿ ಶೇಕಡ 30% ಎಲೆಕ್ಟ್ರಿಕ್ ಆಗಿರಬೇಕೆಂಬ ಆಶಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








