ಟಾಟಾ ಕಾರು ನಜ್ಜುಗುಜ್ಜು: ನನಗೇನೂ ಆಗಿಲ್ಲ... ಕಾರಿನಿಂದ ಎದ್ದುಬಂದು ವಿಡಿಯೋ ಮಾಡಿದ ಪುಣ್ಯಾತ್ಮ!
ಚಳಿಗಾಲದಲ್ಲಿ ಬಹುತೇಕ ಎಲ್ಲಾ ಹೆದ್ದಾರಿಗಳು ಮಂಜಿನಿಂದ ಕೂಡಿರುತ್ತವೆ. ಸ್ವಲ್ಪ ಯಾಮಾರಿದರು ಅಪಘಾತಗಳಾಗುತ್ತವೆ ಎಂಬುದಕ್ಕೆ ಈ ಹಿಂದೆಯೇ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಇತ್ತೀಚಿನ ಘಟನೆಯಲ್ಲಿ ಟಾಟಾ ಟಿಯಾಗೊ (Tata tiago) ಸಿಎನ್‌ಜಿ ಕಾರು, ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ. ಈ ದೃಶ್ಯಗಳನ್ನು ನೋಡಿದ್ರೆ ಖಂಡಿತ ಚಾಲಕ ಬದುಕಿರಲು ಸಾಧ್ಯವೆಲ್ಲವೆನಿಸುತ್ತದೆ. ಆದ್ರೆ ಅಚ್ಚರಿಗೊಳಿಸುವ ವಿಷಯವೇನೆಂದರೆ ಟಿಯಾಗೊ ಚಾಲಕ ಅಪಘಾತ ಸಂಭವಿಸಿದ ಕೂಡಲೇ ಅದನ್ನು ವಿವರಿಸುವ ವೀಡಿಯೊವನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಟಾಟಾ ಟಿಯಾಗೊ ಮಾಲೀಕ ಮೃತ್ಯುಂಜಯ್ ವತ್ಸ್ ಮೀರತ್‌ನಿಂದ ಶಾಮ್ಲಿಗೆ ಪ್ರಯಾಣಿಸುತ್ತಿದ್ದರು. ಫಾಸ್ಟ್ ಲೇನ್ ಮೂಲಕ ಸುಮಾರು 40 ಕಿ.ಮೀ ವೇಗದಲ್ಲಿ ಫ್ಲೈಓವರ್‌ನಿಂದ ಇಳಿಯುತ್ತಿದ್ದರು. ಮಂಜಿನಿಂದಾಗಿ ಇದ್ದಕ್ಕಿದ್ದಂತೆ ಟ್ರಕ್ ಮುಂಭಾಗದಲ್ಲಿ ಇರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಹೀಗಾಗಿ ಟಿಯಾಗೊ ಚಾಲಕನಿಗೆ ಅಪಘಾತವನ್ನು ತಪ್ಪಿಸಲು ಯಾವುದೇ ಮಾರ್ಗವಿರಲಿಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಅಲ್ಲದೇ ಇದು ಸರಣಿ ಅಪಘಾತಗಳಿಗೂ ಕಾರಣವಾಗಿದ್ದು, ಸ್ವಲ್ಪ ಸಮಯದ ನಂತರ ಹ್ಯುಂಡೈ ಔರಾ, ಮಾರುತಿ ಸ್ವಿಫ್ಟ್ ಕಾರುಗಳು ಕೂಡ ಅಪಘಾತಕ್ಕೆ ಒಳಗಾಗಿವೆ. ದೃಶ್ಯಗಳನ್ನು ಗಮನಿಸಿದರೆ, ಮೂರು ಕಾರುಗಳಲ್ಲಿ ಟಿಯಾಗೊಗೆ ತೀವ್ರ ಹಾನಿಯಾಗಿದೆ. ಆದರೂ, ಅದರಲ್ಲಿದ್ದ ಚಾಲಕ ದೊಡ್ಡ ಗಾಯಗಳಿಲ್ಲದೆ ಬದುಕುಳಿದಿದ್ದಾರೆ. ಕಾರಿನಿಂದ ಹೊರಬಂದ ಕೂಡಲೇ ಚಾಲಕ ವೀಡಿಯೊವನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಅಪಘಾತದಿಂದ ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದಕ್ಕೆ ಸಂತೋಷಪಟ್ಟಿದ್ದಾರೆ. ಟಾಟಾ ವಾಹನಗಳು ಮತ್ತು ಕಂಪನಿ ನೀಡುವ ಸುರಕ್ಷತೆಯ ಬಗ್ಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ. ಈ ಅಪಘಾತಕ್ಕೀಡಾದ ವಾಹನವು ಸಿಎನ್‌ಜಿ ಟಿಯಾಗೊ ಆಗಿದೆ ಎಂಬುದನ್ನು ಗಮನಿಸಬೇಕು. ಅಪಘಾತದಗಳಲ್ಲಿ ಸಿಎನ್‌ಜಿ ವಾಹನಗಳು ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ. ಆದರೆ ಈ ಅಪಘಾತದಲ್ಲಿ ಯಾವುದೇ ಅನಾಹುತ ಆಗದಿರುವುದು ವಿಶೇಷ.

ಸುರಕ್ಷತೆಯಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್: ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಟಿಯಾಗೊ ನಾಲ್ಕು-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಮೂಲೆ ಸ್ಥಿರತೆಯ ನಿಯಂತ್ರಣ (Cornering stability control)ವನ್ನು ಒಳಗೊಂಡಿದೆ.
ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಎಂಟ್ರಿ ಲೆವೆಲ್ ವೇರಿಯೆಂಟ್ ಬೆಲೆಯು 5 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ.7.65 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಟಿಯಾಗೊ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಹಾಗೆಯೇ ಸಿಎನ್‌ಜಿ ವೇರಿಯೆಂಟ್‌ಗಳು ಕೂಡ ಆಟೋಮ್ಯಾಟಿಕ್, ಮ್ಯಾನುವಲ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಮ್ಯಾನುವಲ್ ಪೆಟ್ರೋಲ್ ವೇರಿಯೆಂಟ್ 20.01 ಕಿ.ಮೀ ಮೈಲೇಜ್ ಕೊಡುತ್ತದೆ.
ಪೆಟ್ರೋಲ್ ಎಎಂಟಿ ವೇರಿಯೆಂಟ್ 19.43 ಕಿ.ಮೀ ಮೈಲೇಜ್ ಕೊಡುತ್ತದೆ. ಸಿಎನ್‌ಜಿ ಟಿಯಾಗೊ ಮ್ಯಾನುವಲ್ ವೇರಿಯೆಂಟ್‌ನಲ್ಲಿ 26.49 ಕಿ.ಮೀ / ಕೆ.ಜಿ ಮತ್ತು ಎಎಂಟಿಯೊಂದಿಗೆ 28.06 ಕಿ.ಮೀ / ಕೆಜಿ ಮೈಲೇಜ್ ಕೊಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಟಾಟಾ ಕಾರುಗಳ ಬಗ್ಗೆ ನಿಮ್ಮೆ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications