ಎಕ್ಸ್ಪ್ರೆಸ್ ವೇಯಲ್ಲಿ 110 km ವೇಗದಲ್ಲಿದ್ದ Tata ಕಾರು 8 ಬಾರಿ ಪಲ್ಟಿ: ತನ್ನನ್ನು ನಂಬಿದವರನ್ನು ಕೈಬಿಡಲಿಲ್ಲ!
ಭಾರತದಲ್ಲಿ ಹೊಸ ಕಾರು ಖರೀದಿಸುವವರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರಮುಖ ವಾಹನ ತಯಾರಕ ಕಂಪನಿಗಳಾದ ಟಾಟಾ ಹಾಗೂ ಮಹೀಂದ್ರಾ ಸೇಫ್ಟಿ ವಿಚಾರವಾಗಿ ಅತ್ಯುತ್ತಮ ಗುಣಮಟ್ಟ ಹೊಂದಿರುವ ಕಾರುಗಳನ್ನು ಉತ್ಪಾದಿಸುವುದಕ್ಕೆ ಹೆಸರುವಾಸಿಯಾಗಿವೆ. ಸದ್ಯ, ಎಕ್ಸ್ಪ್ರೆಸ್ ವೇಯಲ್ಲಿ ಟಾಟಾ ಕಾರು ಅಪಘಾತಕ್ಕೆ ಒಳಗಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಈ ಆಕ್ಸಿಡೆಂಟ್ ಉತ್ತರಖಂಡದ ಎಕ್ಸ್ಪ್ರೆಸ್ ವೇಯೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆದರೆ, ನಿಖರವಾದ ಸ್ಥಳದ ಬಗ್ಗೆ ಖಚಿತ ಮಾಹಿತಿಯಿಲ್ಲ. ಯೂಟ್ಯೂಬ್ ವಾಹಿನಿಯೊಂದರಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೇಳಿ-ಕೇಳಿ ಎಕ್ಸ್ಪ್ರೆಸ್ ವೇ ಆಗಿದ್ದರಿಂದ ಟಾಟಾ ಟಿಯಾಗೊ ಗಂಟೆಗೆ 100-110 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಕಾರಿನಲ್ಲಿದ್ದ ದಂಪತಿ ರಿಷಿಕೇಶದಿಂದ ಪ್ರಯಾಣ ಬೆಳೆಸಿದ್ದರು ಎಂದು ಹೇಳಲಾಗಿದೆ.

ಟಿಯಾಗೊ ಕಾರು, ಇದ್ದಕ್ಕಿದ್ದಂತೆ ರಸ್ತೆಯ ಬಲಭಾಗದಲ್ಲಿರುವ ಡಿವೈಡರ್‌ಗೆ ಡಿಕ್ಕಿ ಹೊಡಿದಿದ್ದು, ಫ್ರಂಟ್ ಆಕ್ಸಲ್ ಮುರಿದು ಹೋಗಿದೆ. ಚಾಲಕ ಏನಾಗಿದೆ ಎನ್ನುವಷ್ಟರಲ್ಲಿ ಬರೋಬ್ಬರಿ ಎಂಟು ಬಾರಿ ಕಾರು ಪಲ್ಟಿಯಾಗಿದೆ. ಡ್ರೈವರ್ ಸೈಡ್ ಗೆ ಹೆಚ್ಚಿನ ಡ್ಯಾಮೇಜ್ ಆಗಿದ್ದು, ರೂಫ್ ಹಾಗೂ ಡೋರ್ ಗಳಿಗೂ ಹಾನಿಯಾಗಿದೆ. ಅಪಘಾತಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಯೂಟ್ಯೂಬ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಆಕ್ಸಿಡೆಂಟ್ ಆದ ತಕ್ಷಣ ಸ್ಥಳೀಯರು ಸಹಾಯಕ್ಕೆ ತೆರಳುತ್ತಿರುವುದನ್ನು ಕಾಣಬಹುದು. ಅದೃಷ್ಟವಶಾತ್, ಕಾರಿನಲ್ಲಿದ್ದ ದಂಪತಿ ಸೀಟ್ ಬೆಲ್ಟ್ ಧರಿಸಿದ್ದರು. ಇದರಿಂದ ಕಾರು ಪಲ್ಟಿಯಾದರೂ ಪ್ರಾಯಪಯದಿಂದ ಪಾರಾಗಿದ್ದಾರೆ. ಈ ಅಪಘಾತವು ಚಾಲಕನ ತಪ್ಪಿನಿಂದ ಆಯಿತೇ ಇಲ್ಲವೇ ಬೇರೆ ಕಾರಣಗಳಿಗೆ ನಡೆಯಿತೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.
ಏನೇ ಆಗಲಿ.. ಈ ಪರಿಪ್ರಮಾಣದಲ್ಲಿ ಅಪಘಾತವಾದರೂ ಸಣ್ಣಪುಟ್ಟ ಗಾಯಗಳಾಗಿ ದಂಪತಿ ಸುಲಭವಾಗಿ ಸಾವಿನ ದವಡೆಯಿಂದ ಎಸ್ಕೇಪ್ ಆಗಿದ್ದಾರೆ. ಇದಕ್ಕೆ ಟಾಟಾದ ನಿರ್ಮಾಣ ಗುಣಮಟ್ಟವು ಕಾರಣವಾಗಿದೆ. ಅದರಲ್ಲೂ ಬೇರೆ ಕಂಪನಿ ಕಾರುಗಳಿಗೆ ಹೋಲಿಸಿದರೆ, ಟಿಯಾಗೊ ಕಡಿಮೆ ಬೆಲೆಯಲ್ಲಿ ದೊರೆಯುವ ಕಾರಾಗಿದ್ದು, ವಿಶ್ವಾರ್ಹತೆಗೆ ಹೆಸರುವಾಸಿಯಾಗಿದೆ. ಜೊತೆಗೆ ದೇಶದಲ್ಲಿ ಅತ್ಯುತ್ತಮ ಕಾರೆಂದು ಮನೆ ಮಾತಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಟಾಟಾ ಟಿಯಾಗೊ ಕಾರಿನ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದಾದರೆ, ಇದು ರೂ.5.60 ಲಕ್ಷದಿಂದ ರೂ.8.11 ಬೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ CNG ಆಯ್ಕೆಯಲ್ಲಿ ದೊರೆಯಲಿದ್ದು, 19.0 - 19.01 kmpl ಮೈಲೇಜ್ ನೀಡುತ್ತದೆ. ಅಷ್ಟೇ ಅಲ್ಲದೆ, ಟಿಯಾಗೊ ಎಲೆಕ್ಟ್ರಿಕ್ ಕಾರಿನ ರೂಪದಲ್ಲೂ ದೇಶೀಯ ಗ್ರಾಹಕರಿಗೆ ಸಿಗುತ್ತದೆ.
ಈ ಕಾರು, ಬೆಲೆಗೆ ತಕ್ಕಂತೆಯೇ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಪ್ರೊಜೆಕ್ಟರ್ ಹೆಡ್‌ಲೈಟ್ಸ್, 8 ಸ್ಪೀಕರ್ ಸೌಂಡ್ ಸಿಸ್ಟಮ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಪಡೆದಿದೆ. ಸುರಕ್ಷತೆಯ ಸಲುವಾಗಿ ಡ್ಯೂಯಲ್ ಫ್ರಂಟ್ ಏರ್ ಬಾಗ್ಸ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಮುನ್ನೆಚ್ಚರಿಕೆಗಳೇನು: ಯಾವುದೇ ರಾಷ್ಟ್ರೀಯ, ರಾಜ್ಯ ಹೆದ್ದಾರಿಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ದೊಡ್ಡ ಮಟ್ಟದ ಅಪಘಾತವನ್ನು ತಪ್ಪಿಸಬಹುದು. ಮುಖ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಕಡ್ಡಾಯ ಹೆಲ್ಮೆಟ್ ಧರಿಸಬೇಕು. ಕಾರುಗಳಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ವಾಹನ ಚಲಾಯಿಸುವಾಗ ಮದ್ಯಪಾನ, ಫೋನ್ ನಲ್ಲಿ ಮಾತನಾಡಬಾರದು. ರಸ್ತೆಯಲ್ಲಿ ಸೂಚಿಸಿದ ವೇಗಮಿತಿಯಲ್ಲಿ ಕಾರು ಅಥವಾ ಬೈಕ್ ಓಡಿಸಬೇಕು.


Click it and Unblock the Notifications