Elon Musk: ಕೇಂದ್ರ ಸಚಿವರಿಗೆ 'ಸಾರಿ' ಕೇಳಿದ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್: ಯಾಕೆ ಗೊತ್ತಾ?
ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಟೆಸ್ಲಾ ಕಂಪನಿಯ ಕಾರ್ಖಾನೆಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಇತ್ತೀಚೆಗೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ (Tesla) ಸಿಇಒ ಎಲೋನ್ ಮಸ್ಕ್ (Elon Musk) ಕ್ಷಮೆಯಾಚಿಸಿದ್ದಾರೆ.
ನಾಲ್ಕು ದಿನಗಳಿಂದ ಅಮೆರಿಕ ಪ್ರವಾಸದಲ್ಲಿರುವ ಸಚಿವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಟೆಸ್ಲಾ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದರು. 'ಟೆಸ್ಲಾದ ಉನ್ನತ ಹುದ್ದೆಯಲ್ಲಿ ಭಾರತದ ಎಂಜಿನಿಯರ್‌ಗಳು ಹಾಗೂ ಹಣಕಾಸು ವೃತ್ತಿಪರರು ಇರುವುದು ಸಂತೋಷ ತಂದಿದೆ. ವಾಹನ ಮಾರುಕಟ್ಟೆಗೆ ಟೆಸ್ಲಾ ನೀಡುತ್ತಿರುವ ಕೊಡುಗೆ ಶ್ಲಾಘನೀಯ' ಎಂದು ಹೇಳಿದ್ದರು.

ಈ ಬಗ್ಗೆ ಎಕ್ಸ್ (ಟ್ವಿಟರ್)ನಲ್ಲಿ ಪಿಯೂಷ್ ಗೋಯಲ್ ಅವರ ಪೋಸ್ಟ್‌ಗೆ ಉತ್ತರಿಸಿರುವ ಎಲೋನ್ ಮಸ್ಕ್ ಅವರು, 'ನೀವು ಫ್ರೀಮಾಂಟ್ ಫ್ಯಾಕ್ಟರಿಗೆ ಬಂದಿದ್ದು ಗೌರವದ ವಿಚಾರವಾಗಿದೆ. ಕ್ಯಾಲಿಫೋರ್ನಿಯಾಗೆ ಬಂದು ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಆದರೆ ನಂತರದ ದಿನಗಳಲ್ಲಿ ನಿಮ್ಮನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ, ಭಾರತದಲ್ಲಿ ಹೊಡಿಕೆ ಮಾಡುವ ಸಂಬಂಧ ಮಾತುಕತೆ ನಡೆಸಿದ್ದರು. ಆ ಬಗ್ಗೆ ಪ್ರತಿಕಿಯೆ ನೀಡಿದ್ದ ಎಲಾನ್ ಮಸ್ಕ್, 'ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದೇನೆ. ಶೀಘ್ರದಲ್ಲೇ ಟೆಸ್ಲಾ ಕಂಪನಿ ಭಾರತದಲ್ಲಿ ಕಾರ್ಯಾರಂಭ ಮಾಡುತ್ತದೆ. ಆದಷ್ಟು ಬೇಗ ದೊಡ್ಡ ಘೋಷಣೆ ಮಾಡುತ್ತೇನೆ' ಎಂದು ಹೇಳಿದ್ದರು.

ಈಗಾಗಲೇ, ಕರ್ನಾಟಕವು ಸೇರಿದಂತೆ ಹಲವು ರಾಜ್ಯಗಳು ಟೆಸ್ಲಾ ಕಂಪನಿಯನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಹಲವು ತಿಂಗಳ ಹಿಂದೆ, ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಎಲಾನ್ ಮಸ್ಕ್ ಅವರನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದರು. 'ಭಾರತದಲ್ಲಿ ಟೆಸ್ಲಾ ಕಂಪನಿ ಹೊಡಿಕೆ ಮಾಡಲು ಕರ್ನಾಟಕ ಅತ್ಯುತ್ತಮ ತಾಣವಾಗಿದೆ. ಟೆಸ್ಲಾ, ಸ್ಟಾರ್‌ಲಿಂಕ್ ಸೇರಿದಂತೆ ಮಸ್ಕ್ ಅವರ ಇತರೆ ಉದ್ಯಮಗಳ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ' ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, 2021 ರ ಜನವರಿ ತಿಂಗಳಲ್ಲಿ ಟೆಸ್ಲಾದ ಅಂಗಸಂಸ್ಥೆಯಾದ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ (Tesla India Motors and Energy Pvt) ಬೆಂಗಳೂರಿನಲ್ಲಿ ನೋಂದಾಯಿಸಿತ್ತು. ಇದನ್ನು ನೋಡಿದಾಗ ಬಹುತೇಕ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಗಲೇ 'ಟೆಸ್ಲಾ' ಆಸಕ್ತಿ ತೋರಿಸಿತ್ತು ಎಂದು ಹೇಳಬಹುದು.

ರಾಜಧಾನಿ ಬೆಂಗಳೂರು ಈಗಾಗಲೇ ಇವಿ (ಎಲೆಕ್ಟ್ರಿಕ್ ವಾಹನ) ಹಬ್ ಆಗಿದ್ದು, ದೇಶದ ಟಾಪ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಾದ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಹಾಗೂ ಸಿಂಪಲ್ ಎನರ್ಜಿ ಇಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿವೆ. ಜೊತೆಯಲ್ಲಿ ಅಲ್ಟ್ರಾವೈಲೆಟ್ ಹಾಗೂ ಪ್ರವೇಗ್ ಕೂಡ ನಮ್ಮ ಬೆಂಗಳೂರಿನ ಕಂಪನಿಗಳು ಎಂಬುದು ಗಮನಾರ್ಹ ಅಂಶವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








