Tesla: ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ 'ಟೆಸ್ಲಾ' ಗುಜರಾತ್ ಪಾಲು?
ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ(Tesla), ಮುಂದಿನ ವರ್ಷದ (2024) ಜನವರಿಯಲ್ಲಿ ಭಾರತಕ್ಕೆ ತನ್ನ ಚೊಚ್ಚಲ ಪ್ರವೇಶವನ್ನು ಮಾಡಲಿದೆ. ಸ್ವತಃ ಕಂಪನಿಯ ಸಿಇಒ ಎಲೋನ್ ಮಸ್ಕ್ (Elon Musk) ಅವರೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ನೀರಿಕ್ಷೆಯಿದೆ.
ಗುಜರಾತ್‌ನ ಗಾಂಧಿನಗರದಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಶೃಂಗಸಭೆ (Vibrant Gujarat Summit)ಯಲ್ಲಿ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಉತ್ಪಾದನಾ ಘಟಕ ಸ್ಥಾಪನೆ ಮಾಡುತ್ತಿರುವಾಗಿ ಪ್ರಕಟಿಸಬಹುದು ಎಂದು ಅಲ್ಲಿನ ವಿವಿಧ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕಾರ್ಯಕ್ರಮದಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಭಾಗವಹಿಸುವ ಸಾಧ್ಯತೆಯಿದೆ.

ಟೆಸ್ಲಾದ ತಯಾರಿಕ ಘಟಕದ ಆರಂಭಕ್ಕೆ ಭೂಮಿ ನೀಡುವ ಸಂಬಂಧ ಗುಜರಾತ್ ಸರ್ಕಾರ, ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿ, ಭಾರತದಲ್ಲಿ ಹೊಡಿಕೆ ಮಾಡುವ ಸಂಬಂಧ ಚರ್ಚೆ ಮಾಡಿದ್ದರು.
ಆ ಬಗ್ಗೆ ಪ್ರತಿಕಿಯೆ ನೀಡಿದ್ದ ಎಲಾನ್ ಮಸ್ಕ್, 'ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದೇನೆ. ಶೀಘ್ರದಲ್ಲೇ ಟೆಸ್ಲಾ ಕಂಪನಿ ಭಾರತದಲ್ಲಿ ಕಾರ್ಯಾರಂಭ ಮಾಡುತ್ತದೆ. ಆದಷ್ಟು ಬೇಗ ದೊಡ್ಡ ಘೋಷಣೆ ಮಾಡುತ್ತೇನೆ' ಎಂದು ತಿಳಿಸಿದ್ದರು. ನವೆಂಬರ್‌ನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಟೆಸ್ಲಾ ಕಂಪನಿಯ ಕಾರ್ಖಾನೆಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭೇಟಿ ನೀಡಿದ್ದರು.

ಭೇಟಿ ಕುರಿತು ಮಾತನಾಡಿದ್ದ ಗೋಯಲ್, 'ಟೆಸ್ಲಾದ ಉನ್ನತ ಹುದ್ದೆಯಲ್ಲಿ ಭಾರತದ ಎಂಜಿನಿಯರ್‌ಗಳು ಹಾಗೂ ಹಣಕಾಸು ವೃತ್ತಿಪರರು ಇರುವುದು ಸಂತೋಷ ತಂದಿದೆ. ವಾಹನ ಮಾರುಕಟ್ಟೆಗೆ ಟೆಸ್ಲಾ ನೀಡುತ್ತಿರುವ ಕೊಡುಗೆ ಶ್ಲಾಘನೀಯ' ಎಂದು ಹೇಳಿದ್ದರು. ಮೂಲಗಳ ಪ್ರಕಾರ, ಟೆಸ್ಲಾ ತನ್ನ ಉತ್ಪಾದನಾ ಘಟಕವನ್ನು ಗುಜರಾತ್‌ನ ಸಾನಂದ್‌ನಲ್ಲಿ ಸ್ಥಾಪಿಸುವ ನೀರಿಕ್ಷೆಯಿದೆ. ಈಗಾಗಲೇ, ಅಲ್ಲಿ ಟಾಟಾ ಮೋಟಾರ್ಸ್ (Tata Motors) ತನ್ನ ತಯಾರಕ ಘಟಕವನ್ನು ಹೊಂದಿದೆ.
ಗುಜರಾತ್, ಮಾರುತಿ ಸುಜುಕಿ (Maruti Suzuki) ಮತ್ತು ಎಂಜಿ ಮೋಟಾರ್ (MG Motor) ನಂತಹ ದೈತ್ಯ ಕಂಪನಿಗಳ ಫ್ಯಾಕ್ಟರಿಗಳಿಗೂ ತವರಾಗಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಹಲವಾರು ರಾಜ್ಯಗಳು, ತಮ್ಮಲ್ಲಿ ಹೂಡಿಕೆ ಮಾಡುವಂತೆ ಟೆಸ್ಲಾವನ್ನು ಆಹ್ವಾನಿಸಿದ್ದವು. ಆದರೆ, ಟೆಸ್ಲಾ ಗುಜರಾತ್ ರಾಜ್ಯಕ್ಕೆ ಹೋಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ಹೇಳಿವೆ. ಕೆಲವೇ ದಿನಗಳಲ್ಲಿ ಇದಕ್ಕೆ ಅಧಿಕೃತವಾಗಿ ತೆರೆಬೀಳಲಿದೆ.

ಹೆಚ್ಚಿನ ಆಮದು ಸುಂಕ (High Import Duties) ಕಾರಣ, ಟೆಸ್ಲಾ, ತನ್ನ ಯಾವುದೇ ಎಲೆಕ್ಟ್ರಿಕ್ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ. ಆದರೆ, ಎಲೆಕ್ಟ್ರಿಕ್ ವಾಹನ ಹಾಗೂ ಬ್ಯಾಟರಿ ತಂತ್ರಜ್ಞಾನ ಸಂಬಂಧ ಭಾರತವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವುದನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸಹ ಶ್ಲಾಘಿಸಿದ್ದರು. ಜಾಗತಿಕವಾಗಿ ಟೆಸ್ಲಾ ಮಾಡೆಲ್ 3, ಮಾಡೆಲ್ ಎಸ್, ಮಾಡೆಲ್ ವೈ ಮತ್ತು ಮಾಡೆಲ್ ಎಕ್ಸ್ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications