ಅಪ್ಪನಿಗೆ ರೂ.700 ಕೊಡು ಥಾರ್ ಖರೀದಿಸುತ್ತೇನೆ ಎಂದ ಪುಟ್ಟ ಹುಡುಗ: 'ದಿವಾಳಿಯಾಗುತ್ತೇನೆ'.. ಆನಂದ್ ಮಹೀಂದ್ರಾ
ದೇಶದ ಪ್ರಖ್ಯಾತ ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra), ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಒಂದಿಲ್ಲೊಂದು ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ವೈರಲ್ ಪೋಸ್ಟ್‌ವೊಂದಕ್ಕೆ ಆನಂದ್ ಮಹೀಂದ್ರಾ ಮಾಡಿರುವ ಕಾಮೆಂಟ್ ಎಲ್ಲೆಡೆ ಹರಿದಾಡುತ್ತಿದೆ.
ಹೊಸ ಮಹೀಂದ್ರಾ ಥಾರ್ (Mahindra Thar) ಎಸ್‌ಯುವಿಯನ್ನು ಶೋರೂಂಗೆ ಹೋಗಿ, ರೂ.700 ಕೊಟ್ಟು ಖರೀದಿಸೋಣ ಎಂದು ಸಣ್ಣ ಹುಡುಗನೊಬ್ಬ ತನ್ನ ತಂದೆಯನ್ನು ಕೇಳುವ ವಿಡಿಯೋ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದ 'ಚೀಕು' ಎಂಬ ಬಾಲಕ, ಎಕ್ಸ್‌ಯುವಿ700 ಹಾಗೂ ಥಾರ್ ಒಂದೇ ಕಾರು ಎಂದು ಭಾವಿಸಿದ್ದು, ಕಡಿಮೆ ದುಡ್ಡಿಗೆ ಥಾರ್ ಕೊಂಡುಕೊಳ್ಳಬಹುದು ಎಂದು ನಂಬಿದ್ದಾನೆ.

ಬಾಲಕನ ವಿಡಿಯೋ ಆನಂದ್ ಮಹೀಂದ್ರಾ ಅವರ ಗಮನಕ್ಕೂ ಬಂದಿದ್ದು, ಅವರು ಹುಡುಗನ ಕಾರು ಪ್ರೀತಿಯನ್ನು ಮೆಚ್ಚಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್)ನಲ್ಲಿ 'ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಚೀಕುವಿನ ವಿಡಿಯೋವನ್ನು ನನಗೆ ಕಳುಹಿಸಿದ್ದರು. ಅದನ್ನು ನಾನು ನೋಡಿದೆ. ಆ ಹುಡುಗನ ಕಾರು ಪ್ರೀತಿಯನ್ನು ಇಷ್ಟಪಡುತ್ತೇನೆ. ಆದರಿಲ್ಲಿ ಏಕೈಕ ಸಮಸ್ಯೆಯೆಂದರೆ, ಥಾರ್ ಅನ್ನು ರೂ.700ಕ್ಕೆ ಮಾರಾಟ ಮಾಡಿದರೆ, ನಾನು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ತಂದೆಗೆ ರೂ.700 ಕೊಡು ಥಾರ್ ಖರೀದಿಸುತ್ತೇನೆ ಎಂದ ಪುಟ್ಟ ಹುಡುಗನ ವಿಡಿಯೋಗೆ ನೆಟ್ಟಿಗರು ಕೂಡ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಬಾಲಕನ ಆಸೆಯನ್ನು ಈಡೇರಿಸುವಂತೆ ಆನಂದ್ ಮಹೀಂದ್ರಾ ಅವರನ್ನು ಕೇಳಿಕೊಂಡಿದ್ದಾರೆ. ಮತ್ತೊಬ್ಬರು, ರೂ.700ಕ್ಕೆ ಥಾರ್ ಅಥವಾ ಎಕ್ಸ್‌ಯುವಿ700 ಆಟಿಕೆ ತಯಾರಿಸುವುದು ಉತ್ತಮ. ಮಕ್ಕಳಿಗೆ ಅವುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಕಂಪನಿ ಮೇಲೆ ಅಭಿಮಾನ ಬೆಳೆಯುತ್ತದೆ' ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, 'ಮಹೀಂದ್ರಾ ಎಕ್ಸ್‌ಯುವಿ700 ಕಾರಿಗಾಗಿ ರೂ.700 ಮೊತ್ತಕ್ಕೆ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಬಹುದು. ಅದರಲ್ಲಿ ಗೆದ್ದವರೂ ಇದೇ ಹಣಕ್ಕೆ ಕಾರನ್ನು ಪಡೆಯುತ್ತಾರೆ. ಕಂಪನಿಯು ಈ ಮೂಲಕ ತನ್ನ ವೆಚ್ಚವನ್ನು ಸರಿದೂಗಿಸಿಕೊಳ್ಳಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್, ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.
ಮಹೀಂದ್ರಾ ಥಾರ್ ಮೂರು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ, 1.5 ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೂ ದೊರೆಯಲಿದ್ದು, 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಮಹೀಂದ್ರಾ ಥಾರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ 15.2 kmpl ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಮಹೀಂದ್ರಾ ಎಕ್ಸ್‌ಯುವಿ700, ರೂ.14.03 ಲಕ್ಷದಿಂದ ರೂ.26.57 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications