ಈ ದೇಶದಲ್ಲಿ ಯುವಕರಿಗೆ ಹೊಸ ಕಾರು ಖರೀದಿಸಲು ಭಾರೀ ಸಬ್ಸಿಡಿ ಘೋಷಿಸಿದ ಸರ್ಕಾರ
ಆಸ್ಟ್ರೇಲಿಯಾದಲ್ಲಿನ ವಿಕ್ಟೋರಿಯಾ ರಾಜ್ಯದ ಸ್ಥಳೀಯ ಸರ್ಕಾರವು ಯುವಕರಿಗೆ ಹೊಸ ಕಾರು ಖರೀದಿಸಲು ಧನ ಸಹಾಯ ಮಾಡಲು ಮುಂದಾಗಿದೆ. ಚಾಲನಾ ಪರವಾನಗಿ ಹೊಂದಿರುವ 18 ರಿಂದ 25 ವರ್ಷದ ಯುವಕರಿಗೆ ಮಾತ್ರ ಈ ಮೊತ್ತವನ್ನು ನೀಡಲಾಗುತ್ತಿದೆ.
Recommended Video
ವರದಿಯ ಪ್ರಕಾರ, ಸ್ಥಳೀಯ ಸರ್ಕಾರವು 18 ರಿಂದ 25 ವರ್ಷದೊಳಗಿನ ಯುವಕರಿಗೆ ಹೊಸ ಕಾರು ಖರೀದಿಸಲು 5,000 (2,74,965 ರೂ.) ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡುತ್ತಿದೆ. ಈ ಮೊತ್ತವನ್ನು ಪಡೆಯಲು ಅಲ್ಲಿನ ಸರ್ಕಾರ ನಿಗದಿಪಡಿಸಿರುವ ಕೆಲವು ನಿಯಮಗಳಿಗೆ ಒಳಪಟ್ಟಿರಬೇಕು.

18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಹಳೆಯ ಕಾರನ್ನು ಹೊಂದಿದ್ದರೇ ಅಥವಾ ಅದನ್ನು ಇನ್ನೂ ಬಳಸುತ್ತಿದ್ದರೇ ಮಾತ್ರ ಈ ಸಹಾಯ ಧನದ ಮೊತ್ತವನ್ನು ಪಡೆಯಬಹುದು. ಜೊತೆಗೆ ಅವರ ಹಳೆಯ ಕಾರು ಮಾದರಿಯು ಆಸ್ಟ್ರೇಲಿಯನ್ NCAP ಟೆಸ್ಟ್‌ನಲ್ಲಿ ಕೇವಲ ಒಂದು ಅಥವಾ ಎರಡು ಸ್ಟಾರ್ ರೇಟಿಂಗ್‌ಗಳನ್ನು ಪಡೆದಿರಬೇಕು.

ಆಸ್ಟ್ರೇಲಿಯನ್ ಸರ್ಕಾರದ ಈ ಯೋಜನೆಯು ದೇಶದಲ್ಲಿ ಸುರಕ್ಷಿತ ಕಾರುಗಳ ಮಾರಾಟವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ರಸ್ತೆ ಅಪಘಾತಗಳಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಹಳೆಯ ಕಾರುಗಳಿಂದ ಹೊರಹೊಮ್ಮುವ ಕಾರ್ಬನ್ ಅನ್ನು ಕೂಡ ಕಡೆಮಾಡಬಹುದು ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

ವರದಿಗಳ ಪ್ರಕಾರ, ಆಸ್ಟ್ರೇಲಿಯಾ ಸರ್ಕಾರವು ಇತ್ತೀಚೆಗೆ 'ಅನ್‌ಸೇಫ್ ಟು ಸೇಫ್' ಅಭಿಯಾನವನ್ನು ಪ್ರಾರಂಭಿಸಿದ್ದು, ಇದು ದೇಶದಲ್ಲಿ ಸುರಕ್ಷಿತ ಕಾರುಗಳ ಖರೀದಿ ಮತ್ತು ಮಾರಾಟವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಇರುವ ಕಳಪೆ ಗುಣಮಟ್ಟದ ಕಾರುಗಳನ್ನು ಸ್ಥಗಿತಗೊಳಿಸಿ ಅವುಗಳನ್ನು ಸಂಪೂರ್ಣವಾಗಿ ರಸ್ತೆಯಿಂದ ಕಣ್ಮರೆಗೊಳಿಸವುದು ಸರ್ಕಾರದ ಮುಖ್ಯ ಧ್ಯೇಯವಾಗಿದೆ.

ಹೊಸ ಯೋಜನೆಯು ಮೆಲ್ಬೋರ್ನ್ ಹೊರತುಪಡಿಸಿ ವಿಕ್ಟೋರಿಯಾ ಪ್ರದೇಶದಲ್ಲಿ ವಾಸಿಸುವ ಸುಮಾರು 150 ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಹೊಸ ಕಾರಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸೆಪ್ಟೆಂಬರ್ 4 ರವೆರೆಗೆ ದಿನಾಂಕವನ್ನು ನಿಗದಿಪಡಿಸಿದೆ. ಸದ್ಯ ಯುವಕರ ಗಮನ ಸೆಳೆಯಲು ಸರ್ಕಾರ ಯೋಜನೆ ಕುರಿತು ಭಾರೀ ಪ್ರಚಾರ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಯೋಜನೆಯಡಿ ಮಾರಾಟವಾಗುವ ಕಾರುಗಳಿಗೆ ಸರ್ಕಾರ ಕೆಲವು ನಿಯಮಗಳನ್ನು ಸಹ ನಿಗದಿಪಡಿಸಿದೆ. ಈ ನಿಯಮಗಳ ಪ್ರಕಾರ, ಮಾರಾಟ ಮಾಡುವ ಹೊಸ ಕಾರನ್ನು 2012ರ ನಂತರ ತಯಾರಿಸಿರಬೇಕು. ಇದರ ಹೊರತಾಗಿ, ಕಾರು $30,000 ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಬೇಕು ಮತ್ತು ಕನಿಷ್ಠ 4 ಸ್ಟಾರ್‌ಗಳ ಸುರಕ್ಷತಾ ರೇಟಿಂಗ್ ಹೊಂದಿರಬೇಕು.

ಬಳಸಿದ ಕಾರುಗಳನ್ನು ಬದಲಿಸಲು ವಿಕ್ಟೋರಿಯಾ ರಾಜ್ಯದ ಸರ್ಕಾರವು ಒಟ್ಟು 7 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಯೋಜನೆಯಡಿ, 1,000 ಹಳೆಯ ಕಾರುಗಳನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಯಶಸ್ವಿಯಾದಲ್ಲಿ ಮುಂದಿನ ಹಂತವಾಗಿ ಮತ್ತಷ್ಟು ಪ್ಯಾಕೇಜ್ ಘೋಷಣೆ ಮಾಡುವುದಾಗಿ ಸರ್ಕಾರ ಹೇಳಿಕೊಂಡಿದೆ.

ವರದಿಯೊಂದರ ಪ್ರಕಾರ, ಆಸ್ಟ್ರೇಲಿಯಾದಲ್ಲಿ 18-25 ವರ್ಷ ವಯಸ್ಸಿನ ಯುವಕರು ಕಾರು ಅಪಘಾತಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ, ಆದ್ದರಿಂದ ಯುವ ಕಾರು ಚಾಲಕರನ್ನು ರಕ್ಷಿಸಲು ಸರ್ಕಾರ ಹೊಸ ಯೋಜನೆಗಳನ್ನು ತರುತ್ತಿದೆ. ಜೊತೆಗೆ ಕಡಿಮೆ ರೇಟಿಂಗ್ ಹೊಂದಿರುವ ಕಾರುಗಳ ಮಾರಾಟಕ್ಕೆ ಬ್ರೇಕ್ ಹಾಕಲು ಯೋಜಿಸುತ್ತಿದೆ.

ಗಮನಾರ್ಹವಾಗಿ NCAP ಕ್ರ್ಯಾಷ್ ಟೆಸ್ಟ್‌ನಲ್ಲಿ ಒಂದರಿಂದ ಮೂರು ರೇಟಿಂಗ್‌ಗಳನ್ನು ಗಳಿಸಿದ ಕಾರುಗಳನ್ನು ಅಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಅಗ್ಗದ ಕಾರುಗಳೇ ಹೆಚ್ಚಾಗಿ ಕಡಿಮೆ ರೇಟಿಂಗ್ ಪಡೆದುಕೊಳ್ಳುತ್ತವೆ. ವೆಚ್ಚವನ್ನು ಕಡಿಮೆ ಮಾಡಲು ಸುರಕ್ಷತಾ ವೈಶಿಷ್ಟ್ಯಗಳು ಮತ್ತು ದೃಢತೆಯಲ್ಲಿ ರಾಜಿ ಮಾಡಿಕೊಳ್ಳುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದು ಕಾರಿನ ಬೆಲೆಯನ್ನು ಕಡಿಮೆ ಮಾಡುವುದೇನೋ ನಿಜ. ಆದರೆ ಗ್ರಾಹಕರು ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಕಾರುಗಳು ಅಸುರಕ್ಷಿತವಾಗಿದ್ದು, ಅಪಘಾತದ ಸಮಯದಲ್ಲಿ ಒಳಗೆ ಕುಳಿತವರಿಗೆ ಗಂಭೀರ ಗಾಯ ಅಥವಾ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಭಾರತದಲ್ಲಿಯೂ ಬಜೆಟ್ ಶ್ರೇಣಿಯ ಕೈಗೆಟುಕುವ ಕಾರುಗಳು ಅತ್ಯಂತ ಅಸುರಕ್ಷಿತವೆಂದು ಕಂಡುಬಂದಿದೆ.

ನಮ್ಮ ದೇಶದಲ್ಲೂ ವರ್ಷದಿಂದ ವರ್ಷಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿಯೇ ಕೇಂದ್ರ ಸರ್ಕಾರ ಎಂಟ್ರಿ ಲೆವಲ್ ಕಾರುಗಳಲ್ಲಿಯೂ ಆರು ಏರ್ ಬ್ಯಾಗ್‌ಗಳನ್ನು ನೀಡಲು ಎಲ್ಲಾ ಕಾರು ತಯಾರಕರಿಗೆ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಕಾರುಗಳಲ್ಲಿ ಗರಿಷ್ಟ ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಪ್ರಸ್ತುತ ದೇಶದ ಕೆಲ ಕಾರು ತಯಾರಕ ಕಂಪನಿಗಳು ಮಾತ್ರ ಸುರಕ್ಷೆತೆಗೆ ಹೆಚ್ಚು ಆಧ್ಯತೆ ನೀಡುತ್ತಿವೆ. ಉದಾಹರಣೆಗೆ ಟಾಟಾ ಮತ್ತು ಮಹೀಂದ್ರಾ ಕಂಪನಿಗಳು ತಮ್ಮ ಬಜೆಟ್ ಕಾರುಗಳಲ್ಲಿಯೂ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತಿವೆ. ಆದರೆ ಕೆಲವು ವಿದೇಶಿ ಕಂಪನಿಗಳ ಕಾರುಗಳಲ್ಲಿ ಅಪಘಾತವಾದರೂ ಏರ್‌ಬ್ಯಾಗ್ ತೆರದುಕೊಳ್ಳದ ಹಲವು ಪ್ರಕರಣಗಳು ದಾಖಲಾಗಿರುವುದನ್ನು ನಾವು ನೋಡಬಹುದು. ಇವುಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ.


Click it and Unblock the Notifications