ಸುತ್ತ ಜನ, ಹಾಡಹಗಲೇ 13 ಲಕ್ಷ ಕಳ್ಳತನ: ಕಳ್ಳರ ಟೆಕ್ನಿಕ್ ನೋಡಿ, ವಾಹನ ಹೀಗೆ ನಿಲ್ಲಿಸಬೇಡಿ!
ಹಗಲು ಹೊತ್ತಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬಿಎಂಡಬ್ಲ್ಯು ಕಾರಿಗೆ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಕಳ್ಳರು ನುಗ್ಗಿ ವಾಹನದಲ್ಲಿದ್ದ 13.75 ಲಕ್ಷ ರೂ.ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ವಿಡಿಯೋ ಈಗಾಗಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.
ಮೆಟ್ರೋ ನಗರಗಳಲ್ಲಿ ಕಳ್ಳತನವು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಅಪರಾಧಗಳ ಮೇಲೆ ನಿಗಾ ಇಡಲು ಪೊಲೀಸರು ನಗರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಆದರೂ, ಈ ಘಟನೆಗಳು ಸಂಭವಿಸುತ್ತಲೇ ಇವೆ. ಇಂತಹದೊಂದು ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಈ ವಿಡಿಯೋವನ್ನು ಇಂಡಿಯನ್ ಎಕ್ಸ್‌ಪ್ರೆಸ್ ಬೆಂಗಳೂರು ತನ್ನ ಟ್ವಿಟರ್ ಪೇಜ್‌ನಲ್ಲಿ ಹಂಚಿಕೊಂಡಿದೆ.

ಕಾರು ನಿಲ್ಲಿಸಿದ್ದ ಸ್ಥಳದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿಡಿಯೋ ದಾಖಲಾಗಿದ್ದು, ಇಬ್ಬರು ಕಳ್ಳರು ಬಿಎಂಡಬ್ಲ್ಯು ಕಾರಿನ ಗಾಜು ಒಡೆದು 13.75 ಲಕ್ಷ ನಗದು ದೋಚಿದ್ದಾರೆ. ಸರ್ಜಾಪುರದ ಸೋಂಪುರ ಸಬ್ ರಿಜಿಸ್ಟ್ರಾರ್ ಕಚೇರಿಯ ಎದುರು ಈ ಘಟನೆ ನಡೆದಿದೆ. ಘಟನೆಯನ್ನು ವಿವರವಾಗಿ ತಿಳಿಯುವುದಾದ್ರೆ, ವೀಡಿಯೊದಲ್ಲಿ ಕಂಡುಬರುವುದು BMW SUV X5 ಐಷಾರಾಮಿ SUV ಎಂದು ತೋರುತ್ತಿದೆ.
ಕಾರು ರಸ್ತೆಬದಿಯಲ್ಲಿ ನಿಂತಿದ್ದು, ಅದರ ಸುತ್ತಲೂ ಜನರಿದ್ದರು. ನಾವು ಕಾರಿನ ಮುಂದೆ ಸಣ್ಣ ಶೆಡ್ ಅನ್ನು ಸಹ ನೋಡಬಹುದು, ಆದರೆ ಕಾರಿನ ಮಾಲೀಕರು ಕಾಣಿಸುವುದಿಲ್ಲ. ಅಲ್ಲಿ ಕಾರು ನಿಲ್ಲಿಸಿ ಯಾವುದೋ ಕೆಲಸದ ನಿಮಿತ್ತ ಹೋಗಿರುವಂತೆ ತೋರುತ್ತಿದೆ. ರಸ್ತೆಯು ಸಾಕಷ್ಟು ವಾಹನಗಳ ಸಂಚಾರದಿಂದ ಬಿಸಿಯಾಗಿದೆ. ಜನ ಇತ್ತ ಗಮನಿಸದೇ ಇರುವುದೇ ಕಳ್ಳತನಕ್ಕೆ ಅನುವು ಮಾಡಿಕೊಟ್ಟಿದೆ.

ಖತರ್ನಾಕ್ ಕಳ್ಳರು: ಕಾರಿನ ಬದಿಯಲ್ಲಿ ಒಬ್ಬ ಕಳ್ಳ, ಹಾಗೆಯೇ ಬೈಕ್‌ನಲ್ಲಿ ಇನ್ನೊಬ್ಬ ಕಳ್ಳ ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದರು. ಕಳ್ಳ BMW X5 ಪಕ್ಕದಲ್ಲಿ ನಿಂತು ಸುತ್ತಲೂ ಒಮ್ಮೆ ನೋಡುತ್ತಾನೆ. ಯಾರೂ ತನ್ನತ್ತ ನೋಡುತ್ತಿಲ್ಲ ಎಂದು ತಿಳಿದ ತಕ್ಷಣ ಯಾವುದೋ ಉಪಕರಣವೊಂದನ್ನು ತೆಗೆದುಕೊಂಡು ಕಿಟಕಿಯ ಗಾಜು ಒಡೆದು ತಕ್ಷಣವೇ ತನ್ನ ಮೊಣಕೈಯಿಂದ ಗಾಜನ್ನು ನೂಕಿದ್ದಾನೆ.
ಕೆಲವೇ ಸೆಕೆಂಡುಗಳಲ್ಲಿ, ಕಾರಿನ ಕಿಟಕಿ ಮೂಲಕವೇ ಕ್ಯಾಬಿನ್ ಒಳಗೆ ಇಳಿದು ಒಳಗಿದ್ದ ಎರಡು ಚೀಲಗಳನ್ನು ಕದ್ದು ಹೊರಬರುತ್ತಾನೆ. ಅಲ್ಲೇ ಮತ್ತೊಂದು ಬೈಕ್‌ನಲ್ಲಿ ಕಾಯುತ್ತಿದ್ದ ಸ್ನೇಹಿತನೊಂದಿಗೆ ಬೈಕ್ ಏರಿ ಪರಾರಿಯಾಗಿದ್ದಾನೆ. ಇದೆಲ್ಲವೂ ಕೆಲವೇ ಸೆಕೆಂಡುಗಳಲ್ಲಿ ನಡೆದಿದೆ. ಕಳ್ಳರು ಸದ್ದು ಮಾಡದಂತೆ ಎಚ್ಚರಿಕೆ ವಹಿಸಿ ಜನರ ಗಮನ ಸೆಳೆಯದ ಕಾರಣ ಯಾರೂ ಕಳ್ಳತನವನ್ನು ಗಮನಿಸಿಲ್ಲ.

ಕಳ್ಳರು ಡೋರ್ ಯಾಕೆ ತೆಗೆಯಲಿಲ್ಲ: ಕಿಟಕಿಯ ಗಾಜು ಒಡೆದು ಬಾಗಿಲು ತೆರೆದರೆ ಅಲಾರಾಂ ಹೊಡೆದು ಜನರ ಗಮನ ಸೆಳೆಯುತ್ತದೆ ಎಂದು ಕಳ್ಳರಿಗೆ ಗೊತ್ತಿದೆ. ಈ ಕಾರಣದಿಂದಾಗಿಯೇ ಕಳ್ಳ ಕಿಟಕಿಯ ಮೂಲಕ ಮಾತ್ರ ಕ್ಯಾಬಿನ್‌ಗೆ ಹಾರಿ ಹಣ ಎಗರಿಸಿದ್ದಾನೆ. ಹಾಗೆಯೇ ಇದೆಲ್ಲವೂ ಪಕ್ಕಾ ಪ್ಲಾನ್ ಮಾಡಿ ಮಾಡಲಾಗಿದೆ. ಕಾರಿನಲ್ಲಿ ಹಣ ಇರುವುದನ್ನು ಮೊದಲೇ ತಿಳಿದು ಸ್ಕೆಚ್ ಹಾಕಿ ಹಣ ಎಗರಿಸಿದ್ದಾರೆ.
ವರದಿಗಳ ಪ್ರಕಾರ, ಕಾರು ಮಾಲೀಕ ಜಮೀನು ನೋಂದಾಯಿಸಲು ಹಣವನ್ನು ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ಈ ಮೊತ್ತದಲ್ಲಿ ಮಾಲೀಕ ತನ್ನ ಸ್ನೇಹಿತನಿಂದ ಸಾಲ ಪಡೆದಿದ್ದ 5 ಲಕ್ಷ ರೂಪಾಯಿ ನಗದು ಸೇರಿದೆ. ಇಂತಹ ಬಹುತೇಕ ಪ್ರಕರಣಗಳಲ್ಲಿ ವಾಹನದಲ್ಲಿ ನಗದು ಇದೆ ಎಂದು ತಿಳಿದ ವ್ಯಕ್ತಿಯೇ ಕಳ್ಳತನ ಮಾಡಿರುವ ಹಲವು ಉದಾಹರಣೆಗಳಿವೆ. ಈ ಘಟನೆಯಲ್ಲೂ ಯಾರೋ ಹಣದ ಬಗ್ಗೆ ತಿಳಿದ ವ್ಯಕ್ತಿಗಳೇ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಥಕ್-ಥಕ್ ಗ್ಯಾಂಗ್ ಆಗಿರಬಹುದು!: ಹಗಲು ಹೊತ್ತಿನಲ್ಲಿ ಇದೇ ರೀತಿಯ ದರೋಡೆಗಳನ್ನು ನಡೆಸುವ ಗ್ಯಾಂಗ್ ಅನ್ನು ಥಕ್-ಥಕ್ ಗ್ಯಾಂಗ್ ಎಂದು ಕರೆಯಲಾಗಿದೆ. ಇವರು ಉತ್ತರ ಭಾರತದಲ್ಲಿ ಹೆಚ್ಚಾಗಿ ಇಂತಹ ಕಳ್ಳತನಗಳಿಗೆ ಫೆಮಸ್ ಆಗಿದ್ದಾರೆ. ಕಾರಿನಲ್ಲಿದ್ದವರ ಗಮನ ಬೇರೆಡೆ ಸೆಳೆದು ಅವರ ವಸ್ತುಗಳನ್ನು ಕದಿಯುತ್ತಾರೆ. ಇಂತಹ ವಿಡಿಯೋಗಳನ್ನು ನೋಡಿ ಜನರು ಎಚ್ಚೆತ್ತುಕೊಳ್ಳಬೇಕಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications