ವಿಮಾನಗಳ ನಿವೃತ್ತಿಯ ಬಗೆಗಿನ ಸಂಗತಿಗಳಿವು
ವಿಮಾನಯಾನವು ದೂರದ ಪ್ರಯಾಣವನ್ನು ಸುಲಭವಾಗಿಸುತ್ತದೆ. ವಿಮಾನಗಳು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತವೆ. ವಿಮಾನಗಳು ನಿವೃತ್ತಿಯಾದ ನಂತರ ಏನಾಗುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಮಾನ ಎಷ್ಟು ಹಳೆಯದು?
ವಿಮಾನಗಳು ಎಷ್ಟು ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ದೊಡ್ಡ ವಿಮಾನಗಳು ಹಲವು ದಶಕಗಳವರೆಗೆ ಸೇವೆ ಸಲ್ಲಿಸುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದರೆ ವಿಮಾನವೊಂದರ ಸರಾಸರಿ ಜೀವಿತಾವಧಿ ಕೇವಲ 25 ವರ್ಷದಿಂದ 30 ವರ್ಷಗಳಾಗಿರುತ್ತದೆ.

ವಿಮಾನದ ವಯಸ್ಸನ್ನು ಹೇಗೆ ನಿರ್ಧರಿಸಲಾಗುತ್ತದೆ?
ವಿಮಾನದ ವಯಸ್ಸನ್ನು ಸಾಮಾನ್ಯವಾಗಿ ಪ್ರೆಷರ್ ಸೈಕಲ್'ಗಳಿಂದ ಅಳೆಯಲಾಗುತ್ತದೆ. ಪ್ರತಿ ಬಾರಿ ವಿಮಾನವು ಹಾರಾಟ ನಡೆಸಿದಾಗ ಅದು ಒತ್ತಡಕ್ಕೊಳಗಾಗುತ್ತದೆ. ಇದು ವಿಮಾನದ ಪ್ಯೂಸ್ ಲೇಜ್ ಹಾಗೂ ರೆಕ್ಕೆಗಳ ಮೇಲೆ ಒತ್ತಡವನ್ನು ಬೀರುತ್ತದೆ.

ಈ ಕಾರಣಕ್ಕಾಗಿಯೇ ವಿಮಾನ ತಯಾರಕ ಕಂಪನಿಗಳು ವಿಮಾನಗಳ ನಿರ್ವಹಣೆ ವೇಳೆಯಲ್ಲಿ ವಿಮಾನದ ಬಿಡಿ ಭಾಗಗಳು ಒತ್ತಡದಿಂದ ಹಾನಿಗೊಳಗಾಗಿವೆಯೇ ಎಂದು ಪರಿಶೀಲಿಸುತ್ತವೆ.

ವಿಮಾನಗಳು ಯಾವಾಗ ನಿವೃತ್ತಿಯಾಗುತ್ತವೆ?
ಯಾವುದೇ ವಿಮಾನವು ಸಂಪೂರ್ಣವಾಗಿ ಹಳೆಯದಾಗುವವರೆಗೆ ಕಾಯುವುದಿಲ್ಲ. ಹಲವು ವಿಮಾನಗಳು ತಮ್ಮ ಪೂರ್ಣ ಜೀವನವನ್ನು ಸಹ ತಲುಪುವುದಿಲ್ಲ. ವಿಮಾನದ ಜೀವಿತಾವಧಿ ಸುಮಾರು 25 ವರ್ಷಗಳೇ ಆದರೂ ಬಹುತೇಕ ವಿಮಾನಗಳು 18 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಿಯಾಗುತ್ತವೆ.

ವಿಮಾನಗಳು ನಿವೃತ್ತಿಯಾದ ನಂತರ ಏನಾಗುತ್ತದೆ?
ವಿಮಾನವು ನಿವೃತ್ತಿಯಾದ ನಂತರ ಅದು ತನ್ನ ಕೊನೆಯ ಹಾರಾಟವನ್ನು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಮಾಡುತ್ತದೆ. ಈ ಸ್ಟೋರೆಜ್ ವಿಮಾನ ನಿಲ್ದಾಣವು ದೊಡ್ಡದಾಗಿದ್ದು, ತೆರೆದ ಆಕಾಶದ ಅಡಿಯಲ್ಲಿರುತ್ತದೆ.

ಈ ಸ್ಟೋರೆಜ್ ವಿಮಾನ ನಿಲ್ದಾಣಗಳನ್ನು ಪ್ರಪಂಚದ ಹಲವು ಭಾಗಗಳಲ್ಲಿ ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ನೈಋತ್ಯ ಅಮೆರಿಕಾದಲ್ಲಿವೆ. ಈ ಸ್ಥಳದಲ್ಲಿ ಭೂಮಿಯ ಲಭ್ಯತೆ ಹೆಚ್ಚಾಗಿದ್ದು ಗಾಳಿ ಒಣಗಿರುವುದರಿಂದ ವಿಮಾನಗಳು ತುಕ್ಕು ಹಿಡಿಯುವ ಪ್ರಕ್ರಿಯೆ ತುಂಬಾ ನಿಧಾನವಾಗಿರುತ್ತದೆ.

ವಿಮಾನವು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಬಂದ ನಂತರ, ಅದರ ಮೇಲಿರುವ ಉಪ್ಪಿನ ಅಂಶವನ್ನು ತೆಗೆದುಹಾಕಲು ವಿಮಾನವನ್ನು ಚೆನ್ನಾಗಿ ತೊಳೆಯಲಾಗುತ್ತದೆ. ನಂತರ ಆ ವಿಮಾನದ ಪ್ಯುಯಲ್ ಟ್ಯಾಂಕ್‌ಗಳನ್ನು ಬರಿದಾಗಿಸಿ, ಲೂಬ್ರಿಕಂಟ್‌ಗಳನ್ನು ಹಚ್ಚಲಾಗುತ್ತದೆ. ವಿಮಾನಗಳ ಟಯರ್‌ಗಳನ್ನು ಸಹ ಸುರಕ್ಷಿತವಾಗಿಡಲಾಗುತ್ತದೆ.

ವಿಮಾನಗಳನ್ನು ಏಕೆ ಸುರಕ್ಷಿತವಾಗಿಡಲಾಗುತ್ತದೆ?
ಪ್ರತಿ ವಿಮಾನವು ಎಂಜಿನ್, ಫ್ಯೂಸ್‌ಲೇಜ್ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ 3,50,000ಕ್ಕೂ ಹೆಚ್ಚು ಬಿಡಿಭಾಗಳನ್ನು ಹೊಂದಿರುತ್ತದೆ.

ವಿಮಾನವೊಂದು ನಿವೃತ್ತಿಯಾದ ನಂತರ ಅದರಲ್ಲಿರುವ ಬಿಡಿ ಭಾಗಗಳನ್ನು ಇತರ ವಿಮಾನಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ವಿಮಾನಗಳಲ್ಲಿರುವ ಬಿಡಿಭಾಗಗಳನ್ನು ಸರಿಪಡಿಸುವುದರ ಬದಲು ಹಳೆಯ ವಿಮಾನಗಳಲ್ಲಿರುವ ಬಿಡಿ ಭಾಗವನ್ನು ಅಳವಡಿಸಲಾಗುತ್ತದೆ.


Click it and Unblock the Notifications