ಹೊಸ ಕಾರು ಹಸ್ತಾಂತರದ ವೇಳೆ ಮೋಸ ಹೋದಿತು ಹುಷಾರ್!
ಇತ್ತೀಚೆಗೆ ಬೆಳಕಿಗೆ ಬಂದ ಪ್ರಕರಣವೊಂದರಲ್ಲಿ ರೆನೊ ಡಸ್ಟರ್ ಕಾರು ಖರೀದಿಗಾಗಿ ಡೀಲರನ್ನು ಸಂಪರ್ಕಿಸಿದ ಗ್ರಾಹಕನಿಗೆ ಅಚ್ಚರಿ ಕಾದಿತ್ತು. ಹೊಚ್ಚ ಹೊಸ ಕಾರು ಆರ್ಡರ್ ಮಾಡಿದ ಆತನ ಕೈಗಳಿಗೆ ಹೊಸತಾಗಿ ಗೋಚರಿಸುವ ನಕಲಿ ಡಸ್ಟರ್ ಕಾರು ಬಂದು ಸೇರಿತ್ತು.
ಇವನ್ನೂ ಓದಿ: ನಿಜವಾಗ್ಲೂ ಏರ್ ಬ್ಯಾಗ್ ಜೀವರಕ್ಷಕವೇ?
ಇಲ್ಲಿ ಮರು ಬಣ್ಣ ಬಳಿಯಲಾದ ಸೆಕೆಂಡ್ ಹ್ಯಾಂಡ್ ಕಾರನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿತ್ತು. ಸಹಜವಾಗಿಯೇ ಹೊಸ ಕಾರು ಖರೀದಿ ವೇಳೆ ಗ್ರಾಹಕರು ಹೆಚ್ಚು ಉಲ್ಲಾಸದಿಂದ ಕೂಡಿರುವುದರಿಂದ ಮೋಸ ಹೋಗುವ ಸಾದ್ಯತೆ ಜಾಸ್ತಿಯಾಗಿರುತ್ತದೆ. ಈ ಎಲ್ಲ ವಿಚಾರಗಳನ್ನು ಮನಗಂಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಇದೇ ಪ್ರಕರಣದಿಂದ ಪ್ರೇರಣೆ ಪಡೆದುಕೊಂಡು ಇಂತಹದೊಂದು ಲೇಖನ ಬರೆಯಲು ಹೊರಟಿದ್ದೇವೆ.

ಅಷ್ಟಕ್ಕೂ ಡೀಲರುಗಳು ಹೊಸ ಕಾರನ್ನು ಹಸ್ತಾಂತರ ಮಾಡುವ ವೇಳೆ ನೀವು ಪರಿಶೀಲಿಸಬೇಕಾದ ಅಂಶಗಳು ಯಾವುವು? ಈ ಬಗೆಗಿನ ಸಂಪೂರ್ಣ ವಿವರವನ್ನು ಒಂದೊಂದಾಗಿ ವಿವರಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ. ಇದಕ್ಕಾಗಿ ಮುಂದಿನ ಪುಟದತ್ತ ಮುಂದುವರಿಯಿರಿ.

1. ಕಾರು ಆಯ್ಕೆ
ಸಹಜವಾಗಿಯೇ ನಿಮ್ಮ ನೆಚ್ಚಿನ ಕಾರನ್ನೇ ನೀವು ಡೀಲರ್ ಬಳಿ ತೆರಳಿ ಆಯ್ಕೆ ಮಾಡುವಿರಿ. ಆದರೆ ಇದಕ್ಕೆ ನೈಜ ಬಣ್ಣ ಬಳಿಯಲಾಗಿದೆಯೇ ಎಂಬಿತ್ಯಾದಿ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳುವ ಸಲುವಾಗಿ ಕಾರು ಬಗ್ಗೆ ಹೆಚ್ಚಿನ ಅರಿವು ಹೊಂದಿರುವ ನಿಮ್ಮ ಸ್ನೇಹಿತರು ಅಥವಾ ಆತ್ಮ ಸಂಬಂಧಿಗಳನ್ನು ನಿಮ್ಮ ಜೊತೆ ಕರೆದೊಯ್ಯಿರಿ. ನಿಸ್ಸಂಶವಾಗಿಯೂ ನೀವು ಖರೀದಿ ಮಾಡುವ ಕಾರಿನ ಚಾಸೀ ನಂಬರ್ ನೆನಿಪಿನಲ್ಲಿಟ್ಟುಕೊಳ್ಳಲು ಮರೆಯದಿರಿ. ಸಾಧ್ಯವಾದರೆ ಇದರ ಒಂದು ಫೋಟೊ ಕ್ಲಿಕ್ಕಿಸಿ ಭದ್ರವಾಗಿಟ್ಟುಕೊಳ್ಳಿ.

2. ಆಕ್ಸೆಸರಿ
ಎರಡನೇಯದಾಗಿ ಗಮನ ವಹಿಸಬೇಕಾದ ವಿಷಯ ಏನೆಂದರೆ ನೀವು ಖರೀದಿ ಮಾಡುವ ಎಲ್ಲ ಆಕ್ಸೆಸರಿಗಳು ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲಿಸಿರಿ. ಹಾಗೆಯೇ ಅದೇ ನಿರ್ದಿಷ್ಟ ವೆರಿಯಂಟ್ ಅನ್ನು ಹಸ್ತಾಂತರಿಸಲಾಗುತ್ತಿದೆ ಎಂಬುದನ್ನು ಖಚಿತ ಮಾಡಿ. ಅಂತೆಯೇ ಸ್ಟಾಂಡರ್ಡ್ ಹಾಗೂ ಹೆಚ್ಚುವರಿ ವೈಶಿಷ್ಟ್ಯಗಳನ್ನು ಚೆಕ್ ಮಾಡಲು ಮರೆಯದಿರಿ.

3. ಎಂಜಿನ್ ಚೆಕಪ್
ಇದು ಮಹತ್ವದ ಘಟಕವಾಗಿದ್ದು, ಒಮ್ಮೆ ಎಂಜಿನ್ ಸ್ಟಾರ್ಟ್ ಆನ್ ಮಾಡಿ. ಯಾವುದೇ ರೀತಿಯ ತೊಂದರೆ ಕಂಡುಬಂದ್ದಲ್ಲಿ ತಕ್ಷಣ ಡೀಲರುಗಳನ್ನು ಸಂಪರ್ಕಿಸಿ. ಜೊತೆ ಜೊತೆಗೆ ಎಂಜಿನ್ ಆಯಿಲ್, ಕೂಲಂಟ್ ಮಟ್ಟ, ಓಡೋಮೀಟರ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಶೀಲಿಸಿ.

4. ಡಿವೈಸ್
ಎಸಿ, ಪವರ್ ವಿಂಡೋ, ಮಾಹಿತಿ ಮನರಂಜನಾ ಸಿಸ್ಟಂ, ವೈಪರ್, ಸ್ಪೀಕರ್, ಹೆಡ್ ಲೈಟ್, ಇಂಡಿಕೇಟರ್, ಚೈಲ್ಡ್ ಲಾಕ್, ಹೆಡ್ ರೆಸ್ಟ್ ಮುಂತಾದ ವೈಶಿಷ್ಟ್ಯಗಳ ಜೊತೆಗೆ ಸ್ವಿಚ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ.
ವಿ.ಸೂ: ಹೊಸ ಕಾರಲ್ಲಿ ಎಲ್ಲವೂ ಸರಿಯಿರುತ್ತೇ ಎಂಬ ಭ್ರಮೆ ಬೇಡ. ಹಾಗಾಗಿ ಯಾವುದನ್ನು ಅನುದಾನವಾಗಿ ಗಿಟ್ಟಿಸಿಕೊಳ್ಳದಿರಿ. ಇಲ್ಲಿ ದುಡ್ಡು ನಿಮ್ಮದ್ದು ಹಾಗಾಗಿ ನೀವು ಕಟ್ಟುವ ದುಡ್ಡಿಗೆ ತಕ್ಕ ಮೌಲ್ಯ ಸಿಗಬೇಕಾಗಿರುವುದು ಅತಿ ಮುಖ್ಯ.

5. ಚಕ್ರ
ನಿಮ್ಮ ಕಾರಿನ ಚಕ್ರಗಳಲ್ಲಿ ಯಾವುದೇ ಹಾನಿ ಸಂಭವಿಸಿದೆಯೇ ಎಂಬುದನ್ನು ನಿಕಟವಾಗಿ ಪರಿಶೀಲಿಸಿ. ಯಾವುದೇ ರೀತಿಯ ಧೂಳಿನ ಕಣ ಸೇರಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿ.

6. ಒಳಮೈ ಶುಚಿಯಾಗಿದೆಯೇ?
ಕಾರಿನ ಒಳಮೈ ಶುಚಿಯಾಗಿದೆಯೇ ಎಂಬುದನ್ನೊಮ್ಮೆ ಪರಿಶೀಲಿಸಿರಿ. ಕಾರು ಖರೀದಿಗೂ ಮುನ್ನ ನೀಡಿರುವ ಭರವಸೆಯಂತೆ ಎಲ್ಲ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆಯೇ ಎಂಬುದರತ್ತ ಗಮನವಹಿಸಿ. ಉದಾಹರಣೆಗೆ ಸೀಟು ಬೆಲ್ಟ್ ಮುಂತಾದ ಪರಿಕರಗಳು ಸರಿಯಾಗಿ ಜೋಡಣೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿ.

7. ಕಾರ್ಯ ನಿರ್ವಹಣೆ ಹೇಗೆ?
ಸಹಜವಾಗಿಯೇ ಹೊಸತಾಗಿ ಕಾರು ಖರೀದಿಸುವ ಮಾಲಿಕರಿಗೆ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯಿರುವುದಿಲ್ಲ. ಹಾಗಂತ ಸುಮ್ಮಾ ಸುಮ್ಮನೆ ಕುಳಿತುಕೊಳ್ಳಬೇಡಿ. ಅಲ್ಲಿನ ನಿರ್ವಾಹಕರಿಂದ ಈ ಎಲ್ಲ ವಿಶಿಷ್ಟತೆಗಳ ಕಾರ್ಯ ನಿರ್ವಹಣೆ ಹೇಗೆ ಎಂಬುದನ್ನು ಕೇಳಿ ತಿಳಿದುಕೊಳ್ಳಿರಿ. ಅಲ್ಲದೆ ಮೆಕ್ಯಾನಿಕ್ ಅಥವಾ ಸರ್ವೀಸ್ ಸಿಬ್ಬಂದಿಯ ಫೋನ್ ನಂಬರ್ ಅಥವಾ ವಾಣಿಜ್ಯ ಕಾರ್ಡ್ ಪಡೆದುಕೊಳ್ಳಲು ಮರೆಯದಿರಿ. ಇದು ಮುಂದಕ್ಕೆ ನೆರವಾಗಲಿದೆ.

8. ಉಪಕರಣ
ಸ್ಪ್ಯಾನರ್‌ನಿಂದ ಹಿಡಿದು ಎಲ್ಲ ಅಗತ್ಯ ಉಪಕರಣಗಳು ನಿಮ್ಮ ಟೂಲ್ ಕಿಟ್‌ನಲ್ಲಿವೆ ಎಂಬುದನ್ನು ಖಾತ್ರಿಪಡಿಸಿ. ಹಾಗೆಯೇ ಹೆಚ್ಚುವರಿ ಚಕ್ರ, ಜಾಕಿ ಮತ್ತು ಫಸ್ಟ್ ಏಡ್ ಬಾಕ್ಸ್ ಇದೆ ಎಂಬುದನ್ನು ನಿಗಾವಹಿಸಿ.

9. ನೈಜ ಕಾರು?
ಇವೆಲ್ಲವನ್ನು ಪರಿಶೀಲಿಸಿದ ಬಳಿಕ ನಿಮಗೆ ಅದೇ ನೈಜ ಕಾರು ಹಸ್ತಾಂತರಿಸಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿರಿ. ಇದಕ್ಕಾಗಿ ಮೇಲೆ ತಿಳಿಸಿದ ಚಾಸೀ ಹಾಗೂ ಎಂಜಿನ್ ನಂಬರ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.

10. ಓಡೋಮೀಟರ್
ನೀವು ಖರೀದಿ ಮಾಡಿದ ಹೊಸ ಕಾರಿನ ಓಡೋಮೀಟರ್‌ನಲ್ಲಿ 50 ಕೀ.ಮೀ.ಗಿಂತಲೂ ಹೆಚ್ಚು ದೂರ ಕಾರು ಚಲಿಸಿದೆ ಎಂಬುದು ದಾಖಲಾದ್ದಲ್ಲಿ ಇದನ್ನು ತಕ್ಷಣ ವಿಚಾರಿಸಿಕೊಳ್ಳಿ. ಇದರ ಹಿಂದಿರುವ ಕಾರಣವನ್ನು ತಿಳಿದುಕೊಳ್ಳಿರಿ.

11. ಪ್ರಮಾಣ ಪತ್ರಗಳು
ವಿಮೆ, ವಾರಂಟಿ ಕಾರ್ಡ್, ಎಮಿಷನ್ ಸರ್ಟಿಫಿಕೇಟ್, ಕಾರಿಗೆ ಸಂಬಂಧಪಟ್ಟ ಎಲ್ಲ ಅಗತ್ಯ ಪ್ರಮಾಣ ಪತ್ರಗಳು ಇದೆಯೇ ಎಂಬುದನ್ನು ಖಾತ್ರಿಪಡಿಸಿ. ಹಾಗೆಯೇ ಫಾರ್ಮ್ 22, ಓರ್ನರ್ ಮ್ಯಾನುವಲ್, ತಾತ್ಕಾಲಿಕ ರಿಜಿಸ್ಟ್ರೇಷನ್, ಆರ್‌ಟಿಒ ಸ್ವೀಕೃತಿ ಸ್ಲಿಪ್ ಮುಂತಾದವುಗಳನ್ನು ಪರಿಶೀಲಿಸಿ.

12. ಡೇ ಟೈಮ್ ಡೆಲಿವರಿ
ನಿಸ್ಸಂಶಯವಾಗಿಯೂ ಯಾವುದೇ ಹಂತದಲ್ಲಿಯೂ ಮೋಸ ಹೋಗದಿರಲೂ ಹಗಲು ಹೊತ್ತಿನಲ್ಲೇ ಕಾರು ಪಡೆದುಕೊಳ್ಳಿರಿ. ಇಲ್ಲಿ ಸಾಧ್ಯವಾದಷ್ಟು ರಾತ್ರಿ ಹೊತ್ತಿನ ಕಾರು ಹಸ್ತಾಂತರವನ್ನು ತಪ್ಪಿಸಿ.

13. ಹುಷಾರ್
ಅಂತಿಮವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ ಏನೆಂದರೆ, ಕಾರು ನಿಮ್ಮ ಹೆಸರಿಗೆ ದಾಖಲಾತಿ ಮಾಡುವ ಮುನ್ನವೇ ಕಾರಿನಲ್ಲಿರುವ ತೊಂದರೆಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಿ. ಇಲ್ಲವಾದ್ದಲ್ಲಿ ಕಾಲ ಮಿಂಚಿ ಹೋದಿತ್ತು.
ಈಗ ಈ ಲೇಖನದ ಬಗ್ಗೆ ನಿಮ್ಮ ಮಾಹಿತಿಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








