ಎಚ್ಚರವಿರಲಿ: ಈ ರೀತಿಯಾಗಿ ನಿಮ್ಮನ್ನು ಬಕ್ರಾ ಮಾಡ್ತಾರೆ!
ನಾವು ಜೀವಿಸುತ್ತಿರುವ 21 ಶತಮಾನದಲ್ಲಿ ಇಂಟರ್ನೆಟ್ ಅವಿಭಾಜ್ಯ ಅಂಗವಾಗಿದ್ದು, ಯೂಟ್ಯೂಬ್ ನೋಡದವರೇ ಇಲ್ಲ ಅಂದ್ರೆ ತಪ್ಪಾಗುವುದಿಲ್ಲ. ಹೊಸ ಕಾರು ಹಾಗೂ ದ್ವಿಚಕ್ರ ವಾಹನಗಳ ಬಗ್ಗೆ ಅನೇಕರು ವಿಡಿಯೋಗಳನ್ನು ಮಾಡುತ್ತಾರೆ. ಬಹುತೇಕರು ನೀಡುವ ಮಾಹಿತಿ ನಿಜವಾಗಿರುತ್ತದೆ. ಆದರೆ, ಕೆಲವರು ಈ ವಿಚಾರದ ಬಗ್ಗೆ ತಿಳುವಳಿಕೆಯಿಲ್ಲದಿರುವುದರಿಂದ ತಪ್ಪು ವಿವರವನ್ನು ನೀಡುತ್ತಾರೆ.
ಒಂದಷ್ಟು ಮಂದಿ, ಬೇಗ ವೀಕ್ಷಕರ ಗಮನ ಸೆಳೆಯುವ ಮೂಲಕ ಚಂದಾದಾರನ್ನು (subscribers) ಹೆಚ್ಚಿಸಿಕೊಳ್ಳಲು ತಪ್ಪು ಮಾಹಿತಿಯನ್ನೇ ಸತ್ಯವೆಂಬಂತೆ ಹೇಳುವ ಮೂಲಕ ಜನರನ್ನು ಮೋಸ ಮಾಡುತ್ತಾರೆ. ಸದ್ಯ, ಮುಂದಿನ ಪೀಳಿಗೆಯ ಹೊಚ್ಚ ಹೊಸ ಟಾಟಾ ನ್ಯಾನೋ ಕಾರು ಇದೆಯೆಂದು ಬಿಂಬಿಸುವ ಅಂತಹದ್ದೇ ವಿಡಿಯೋವೊಂದನ್ನು ಟ್ವಿನ್ ಟರ್ಬೊ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ನೆಕ್ಸ್ಟ್ ಜನರೇಷನ್ ಟಾಟಾ ನ್ಯಾನೋ ಎಂದು ಸುಳ್ಳು ಮಾಹಿತಿ ನೀಡುತ್ತಿರುವ ನಿರೂಪಕ, ಅದಕ್ಕಾಗಿ 2012ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ ಪಿಕ್ಸೆಲ್ ಕಾನ್ಸೆಪ್ಟ್ ಕಾರು ಹಾಗೂ ಕಿಯಾ ಪಿಕಾಂಟೊ 3-ಡೋರ್ ಕಾರಿನ ದೃಶ್ಯಗಳನ್ನು ಬಳಕೆ ಮಾಡಿದ್ದಾನೆ. ಹಿಂದಿ ಭಾಷೆಯಲ್ಲಿರುವ ವಿಡಿಯೋದಲ್ಲಿ ನೋಡುಗರು ನಂಬುವಂತೆ ನಿರೂಪಕ ಸುಳ್ಳು ಹೇಳುತ್ತಿದ್ದಾನೆ.
ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ, ಮುಂದಿನ ಪೀಳಿಗೆಯ ಟಾಟಾ ನ್ಯಾನೋ ಒಮೆರ್ಗಾ ARC ಪ್ಲಾಟ್‌ಫಾರ್ಮ್ ಆಧರಿಸಿದೆ 1.0 ಲೀಟರ್, 3 ಸಿಲಿಂಡರ್, ನ್ಯಾಚುರಲ್ ಅಸೀರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ ಎಂದು ಹೇಳುತ್ತಾನೆ. ಸುಮಾರು ಎಂಟು ನಿಮಿಷವಿರುವ ಈ ವಿಡಿಯೋದಲ್ಲಿ ಆತ ಹೇಳಿರುವ ಎಲ್ಲ ಮಾಹಿತಿಯು ತಪ್ಪಾಗಿದೆ.
ಇನ್ನು, ಟಾಟಾ ಮೋಟಾರ್ಸ್, ದೇಶದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು 2008ರಲ್ಲಿ IEC ಚಾಲಿತ ನ್ಯಾನೋ ಕಾರನ್ನು ಪರಿಚಯಿಸಿತ್ತು. ಇದು, ಅತ್ಯಂತ ಕಡಿಮೆ ಬೆಲೆಯಲ್ಲಿ ಕಾರು ಎಂದು ಖ್ಯಾತಿಗಳಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಸೇಲ್ಸ್ ಕುಸಿತವಾದ ಕಾರಣ, 2018ರಲ್ಲಿ ಈ ಕಾರನ್ನು ಸ್ಥಗಿತಗೊಳಿಸಲಾಯಿತು. ಈಗಲೂ ಆಗೊಮ್ಮೆ, ಈಗೊಮ್ಮೆ ರಸ್ತೆಗಳಲ್ಲಿ ಕಂಡುಬರುತ್ತದೆ.
ಟಾಟಾ, ಈಗಿರುವ ಇಂಧನ ಚಾಲಿತ ನ್ಯಾನೋ ಪ್ಲಾಟ್‌ಫಾರ್ಮ್ ಆಧರಿಸಿಯೇ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಈ ಹಿಂದೆ ಹಲವಾರು ಬಾರಿ ಸುದ್ದಿಯಾಗಿತ್ತು. ಆದರೆ, ಕಂಪನಿ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಅದರಲ್ಲೂ ಕೆಲವರು ಈ ಕಾರು, ಸರಿ ಸುಮಾರು 5 ಲಕ್ಷ ಬೆಲೆಯಲ್ಲಿ ಸಿಗುತ್ತದೆ ಎಂದು ಹೇಳಿರುವ ಹಲವು ನಿದರ್ಶನಗಳನ್ನು ನೋಡಿದ್ದೇವೆ.
ಇಲ್ಲಿ, ಟ್ವಿನ್ ಟರ್ಬೊ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಇಂಧನ ಚಾಲಿತ ಟಾಟಾ ನ್ಯಾನೋ ಮತ್ತೆ ಬರುತ್ತದೆ ಎಂದು ತಿಳಿಸಲು, ಹಳೆಯ ದೃಶ್ಯಗಳನ್ನು ಬಳಸಿಕೊಂಡು ನಿರೂಪಕ ತಪ್ಪು ಮಾಹಿತಿ ನೀಡಿದ್ದಾನೆ. ನೀವು ಕೂಡ ಯೂಟ್ಯೂಬ್ ನಲ್ಲಿ ಇಂತಹ ವಿಡಿಯೋಗಳನ್ನು ನೋಡುವಾಗ ಅದು, ನಿಜವೇ, ಸುಳ್ಳೇ ಎಂದು ಪರಿಶೀಲಿಸಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications