ಯುವತಿಯರ ಬೇಕಾಬಿಟ್ಟಿ ತ್ರಿಬಲ್ ರೈಡಿಂಗ್: ಯಮನ ಪಾದ ಸೇರುತ್ತಿದ್ದ ಯುವತಿಯರ ಪ್ರಾಣ ಉಳಿಸಿದ ಬಸ್ ಡ್ರೈವರ್
ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕನ ಕರ್ತವ್ಯ. ಒಂಮ್ಮೊಮ್ಮೆ ರಸ್ತೆಗಳಲ್ಲಿ ಬೇಕಾಬಿಟ್ಟಿ ಸಂಚರಿಸುವುದರಿಂದ ಯಾರೋ ಮಾಡಿದ ಮೂರ್ಖತನದ ತಪ್ಪುಗಳಿಗೆ ಇನ್ಯಾರೋ ದಂಡ ತೆರಬೇಕಾಗುವ ಸಂಧರ್ಭ ಬರುತ್ತದೆ. ಇಂತಹ ಅನೇಕ ಸಂಧರ್ಭಗಳಲ್ಲಿ ಯಾರದೊ ತಪ್ಪಿಗೆ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿಗಳು ಸಹ ಬರುತ್ತದೆ.
ಇಲ್ಲೊಂದು ಕಡೆ ಬಸ್ ಡ್ರೈವರ್‌ನ ಸಮಯೋಚಿತ ನಿರ್ಧಾರದಿಂದಾಗಿ ಮೂರು ಬೇಜವಬ್ದಾರಿ ಯುವತಿಯರ ಪ್ರಾಣ ಉಳಿದಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೋಝಿಕ್ಕೋಡ್ ಎಂಬ ನಗರದಲ್ಲಿ ಘಟನೆ ನಡೆದಿದ್ದು ವರದಿಗಳ ಪ್ರಕಾರ ಮೂರು ಜನ ಕಾಲೇಜ್‌ಗೆ ಹೋಗುವ ಯುವತಿಯರು ಒಂದು ಸ್ಕೂಟರ್ ಮೇಲೆ ಹೆಲ್ಮೆಟನ್ನು ಸಹ ಧರಿಸದೇ ವೇಗವಾಗಿ ಚಲಿಸುತ್ತಿದ್ದ ಬಸ್‌ಗೆ ಅಡ್ಡಲಾಗಿ ಚಲಾಯಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಆ ಬಸ್‌ನ ಡ್ರೈವರ್ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದ್ದಾನೆ.
ಬಸ್ ಡ್ರೈವರ್‌ನ ಈ ಕಾರ್ಯದಿಂದಾಗಿ ಬಸ್ ಆ ಸ್ಕೂಟರಿಗೆ ಡಿಕ್ಕಿ ಹೊಡೆಯುವುದು ತಪ್ಪಿದೆ. ಒಂದು ವೇಳೆ ಬಸ್ ತಾನು ಬರುತ್ತಿದ್ದ ವೇಗದಲ್ಲಿಯೇ ಚಲಿಸುತ್ತಾ ಹೋಗಿದ್ದಿದ್ದರೆ ಖಂಡಿತವಾಗಿಯೂ ಆ ಮೂರು ಜನ ಯುವತಿಯರು ಯಮನ ಪಾದ ಸೇರುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಈ ಕುರಿತಾದ ಸಂಪೂರ್ಣ ದೃಶ್ಯವು ಸ್ಪಷ್ಟವಾಗಿ ಅಲ್ಲಿದ್ದಂತಹ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ಯುವತಿಯರ ಮೇಲೆ ಕ್ರಮ ಕೈಗೊಳ್ಳುವಂತೆ ಕೇರಳ ಪೊಲೀಸ್ ಬಳಿ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಆ ಯುವತಿಯರು ನಗರದ ಒಳಗೆ ಬೈಕ್ ಓಡಿಸುತ್ತಿದ್ದು, ಮೂರು ಜನ ಯುವತಿಯರು ಒಂದು ಬೈಕ್‌ನಲ್ಲಿ ಸಂಚರಿಸುವುದೇ ಕಾನೂನು ಪ್ರಕಾರ ಅಪರಾಧ. ಹೀಗಿರುವಾಗ ಸ್ಕೂಟರ್ ಓಡಿಸುತ್ತಿದ್ದ ಯುವತಿ ಸೇರಿದಂತೆ ಯಾರೂ ಸಹ ಹೆಲ್ಮೆಟ್ ಹಾಕಿರಲಿಲ್ಲ. ಜಂಕ್ಷನ್‌ಗೆ ಬಂದಕೂಡಲೇ ರಸ್ತೆಯಲ್ಲಿ ಎರಡೂ ಬದಿಗಳಿಂದ ಯಾವುದಾದರೂ ವಾಹನಗಳು ಬರುತ್ತಿದೆಯೋ ಇಲ್ಲವೋ ಎಂಬುದನ್ನು ಗಮನಿಸದೇ ಅಪಾಯಕಾರಿ ರೀತಿಯಲ್ಲಿ ಸ್ಕೂಟರನ್ನು ಚಲಾಯಿಸಿದ್ದಾರೆ. ಹೀಗಿದ್ದಾಗ ಒಮ್ಮೆಲೇ ಅವರ ಎಡ ಬದಿಯಿಂದ ಒಂದು ನೀಲಿ ಬಣ್ಣದ ಪ್ಯಾಸೆಂಜರ್ ಬಸ್ ಬಂದಿದೆ.

ಹೀಗೆ ಒಮ್ಮೆಲೇ ಬಸ್ ಮುಂದೆ ಪ್ರತ್ಯಕ್ಷವಾದ ಸ್ಕೂಟರನ್ನು ಕಂಡು ಗಲಿಬಿಲಿಗೊಂಡ ಬಸ್ ಡ್ರೈವರ್ ಒಮ್ಮೆಲೇ ಬಸ್‌ನ ಬ್ರೇಕ್ ಹಾಕಿದ್ದಾನೆ. ಇನ್ನು ಮಧ್ಯರಸ್ತೆಯಲ್ಲಿ ಇರುವಾಗ ತಮ್ಮ ಬಳಿ ಬಸ್ ಬಂದಿದೆ ಎಂದು ಅರಿವಾದ ಆ ಸ್ಕೂಟರ್ ಚಲಾಯಿಸುತ್ತಿದ್ದ ಯುವತಿ ಕೂಡಲೇ ಆ ಸ್ಕೂಟರನ್ನು ಕೊಂಚ ಬಲಕ್ಕೆ ಬಾಗಿಸಿ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಿ ಅದೇ ವೇಗದಲ್ಲಿ ಮುಂದಕ್ಕೆ ಹೋಗಿದ್ದಾರೆ. ಬಸ್ ಡ್ರೈವರ್‌ನ ಗಮನ ಕೊಂಚ ಎಡವಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು.
ಇನ್ನು ಅಪಘಾತದಿದಂದ ಪಾರಾದ ಮೇಲೆ ಯುವತಿಯರು ಬೈಕನ್ನು ನಿಲ್ಲಿಸದೇ ಹೋಗಿದ್ದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಲವರು ಖಂಡಿಸಿದ್ದಾರೆ. ಆದರೆ ಬಹುತೇಕ ಇಂತಹ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರೇ ಅಪಘಾತಕ್ಕೆ ಒಳಗಾಗಿರುವುದು ಹೆಚ್ಚು. ಇಂತಹ ಸಂಧರ್ಭಗಳಲ್ಲಿ ಅಲ್ಲಿ ಬೈಕ್ ಸವಾರರ ತಪ್ಪಿದ್ದರೂ, ಬಸ್ ಅಥವಾ ಟ್ರಕ್ ಡ್ರೈವರ್‌ಗಳನ್ನು ದೂರುತ್ತಾರೆ. ಈ ರೀತಿ ದೂರಲು ಪ್ರಮುಖ ಕಾರಣವೆಂದರೆ ರಸ್ತೆಗಳಲ್ಲಿ ಬಹುತೇಕ ಬಸ್‌ಗಳು ಎಲ್ಲವೂ ವೇಗವಾಗಿ ಚಲಿಸುವುದು.
ಭಾರತದಂತಹ ದೇಶದ ರಸ್ತೆಗಳಲ್ಲಿ ಬಸ್ ಅಥವಾ ಟ್ರಕ್‌ನಂತಹ ದೊಡ್ಡ ದೊಡ್ಡ ವಾಹನಗಳನ್ನು ಓಡಿಸುವುದು ಕೊಂಚ ಸವಾಲಿನ ಕೆಲಸ. ಹಾಗಾಗಿ ನೀವು ಯಾವುದಾದರೂ ಬಸ್ ಅಥವಾ ಟ್ರಕ್‌ನಂತಹ ದೊಡ್ಡ ದೊಡ್ಡ ವಾಹನಗಳ ಹಿಂದೆ ಚಲಿಸುವಾಗ ಒಂದಷ್ಟು ಮೀಟರ್ ದೂರ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಅಷ್ಟು ದೊಡ್ಡ ವಾಹನವನ್ನು ಚಾಲಕ ಚಲಾಯಿಸುವಾಗ ಅದರ ಹಿಂಭಾಗದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದು ಡ್ರೈವರ್‌ಗೂ ಸವಾಲಿನ ಕೆಲಸವೇ ಸರಿ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸುವುದು ಒಳ್ಳೆಯದು. ಇದರಿಂದ ಆಗಬಹುದಾದ ಅಪಾಯಗಳು ತಪ್ಪುತ್ತವೆ. ನಮ್ಮ ದೇಶದಲ್ಲಿನ ವಿದ್ಯಾವಂತ ಯುವಕರೇ ಈ ರೀತಿಯಾದಂತಹ ತಪ್ಪುಗಳನ್ನು ಮಾಡುತ್ತಿರುವುದು ಸೋಜಿಗವೇ ಸರಿ. ವಿದ್ಯಾರ್ಥಿಗಳು ಶಾಲೆಗಳಲ್ಲಿ ಓದುತ್ತಿರುವಾಗಲೇ ಇನ್ನೂ ಪರಿಣಾಮಕಾರಿ ರೀತಿಯಲ್ಲಿ ಸಂಚಾರಿ ನಿಯಮಗಳ ಕುರಿತಾಗಿ ಅರಿವನ್ನು ಮೂಡಿಸಬೇಕಾಗಿದೆ. ಹೀಗಾದಾಗ ಮಾತ್ರವೇ ಮುಂದಿನ ದಿನಗಳಲ್ಲಾದರೂ ಪರಿಸರ ಪ್ರಜ್ಞೆಯಿಂದ ಯುವಕರು ವಾಹನ ಚಲಾಯಿಸಬಲ್ಲರು.


Click it and Unblock the Notifications