ಬೆಂಗಳೂರು ಏರ್ ಶೋ 2023: ಯುದ್ದ ವಿಮಾನಗಳ ಕಸರತ್ತನ್ನು ಮಿಸ್ ಮಾಡಿಕೊಳ್ಳಬೇಡಿ
ದೇಶದ ಜನತೆ ಕಾತುರದಿಂದ ಕಾಯುತ್ತಿದ್ದ ಬೆಂಗಳೂರಿನ ಏರೋ ಶೋ ಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ ಅಂದರೆ ಫೆಭ್ರವರಿ 13 ರಿಂದ 17ನೇ ದಿನಾಂಕದವರೆಗೆ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದ್ದು ಇದರ ಪಾಸ್, ಟಿಕೆಟ್ ಕುರಿತಾದ ಮಾಹಿತಿಗಳು ಈಗ ಹೊರಬಿದ್ದಿದೆ.
14ನೇ ಆವೃತ್ತಿಯ ವೈಮಾನಿಕ ಪ್ರದರ್ಶನ -2023 ರ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಈ ಏರೋ ಶೋ ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ. ಫೆ. 14 ರಿಂದ 17ರ ವರೆಗೆ ಸಾಮಾನ್ಯ ಪಾಸ್‌ಗಳ ಮೂಲಕವಾಗಿ ಸಾರ್ವಜನಿಕರು ಏರ್ ಶೋ ಮತ್ತು ಪ್ರದರ್ಶನ ಪ್ರದೇಶಕ್ಕೆ ತೆರಳಬಹುದಾಗಿದೆ. ಇನ್ನು ನಿಮಗೆ ಕೇವಲ ಏರ್ ಡಿಸ್ಪ್ಲೇ ವೀಕ್ಷಣಾ ಪ್ರದರ್ಶನಕ್ಕೆ ತೆರಳಲು ಭಾರತೀಯರಿಗೆ ಒಂದು ಸಾವಿರ ಮತ್ತು ವಿದೇಶಿಯರಿಗೆ ಸುಮಾರು 50 ಡಾಲರ್‌ಗಳನ್ನು ನಿಗದಿಪಡಿಸಲಾಗಿದೆ.

ಇನ್ನು ಕಳೆದ ವರ್ಷ ಅಂದರೆ ಡಿಸೆಂಬರ್ 2022 ರಲ್ಲೇ ಬುಕಿಂಗ್ ಮಾಡಿರುವವರಿಗೆ ರಿಯಾಯಿತಿಯನ್ನು ನೀಡಲಾಗಿದೆ. ಹಿಂದಿನ ಆವೃತ್ತಿಯ ಪ್ರವೇಶ ದರಕ್ಕೆ ಹೋಲಿಸಿ ನೋಡಿದರೆ ಭಾರತೀಯರ ಪ್ರವೇಶ ದರಕ್ಕೆ ಯಾವುದೇ ಬದಲಾಗಿಲ್ಲ, ಆದರೆ ವಿದೇಶಿಯರ ಪ್ರವೇಶ ದರ ಸುಮಾರು 10 ಡಾಲರ್‌ನಷ್ಟು ಹೆಚ್ಚಾಗಿದೆ. ಫೆ.16 ಮತ್ತು 17 ರಂದು ಏರ್ ಶೋ ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿದ್ದು ಭಾರತೀಯರಿಗೆ 2500 ಸಾವಿರ ರೂ ಮತ್ತು ವಿದೇಶಿಯರಿಗೆ 50 ಡಾಲರ್‌ಗಳನ್ನು ನಿಗದಿ ಮಾಡಲಾಗಿದೆ.
1996 ರಿಂದ ಈಚೆಗೆ ಬೆಂಗಳೂರಿನಲ್ಲಿ ಸುಮಾರು 13 ಆವೃತ್ತಿಯ ಏರೋ ಶೋ ವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದು ಭಾರತದಲ್ಲಿ ನಡೆಯುವ ಪ್ರಸಿದ್ದ ಏರೋ ಶೋ ಆಗಿದ್ದು, ವರ್ಷದಲ್ಲಿ ಕೇವಲ ಈ ದಿನ ಮಾತ್ರ ಭಾರತದ ವಾಯು ಸೇನಾ ವಿಮಾನಗಳು ತಮ್ಮ ಕಸರತ್ತನ್ನು ಸಾರ್ವಜನಿಕರ ಮುಂದೆ ಪ್ರದರ್ಶನಕ್ಕಿಡುತ್ತವೆ. ಇನ್ನು ಈ ಶೋ ವನ್ನು ವೀಕ್ಷಿಸಲು ವಿಶ್ವದ ಹಲವು ಗಣ್ಯ ನಾಯಕರು, ವೈಮಾನಿಕ ನಿಪುಣರು ಮತ್ತು ಸಾವಿರಾರು ಜನ ಭಾಗಿಯಾಗುತ್ತಾರೆ.
ಈ ಬಾರಿಯ ಏರೋ ಶೋ ಗೆ ಸುಮಾರು 12 ವರ್ಷ ವಯಸ್ಸಿಗಿಂತ ಕೆಳಗಿರುವವರಿಗೆ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಮಾತ್ರವಲ್ಲದೇ ಏರೋ ಶೋ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಕೋವಿಡ್ ಸುರಕ್ಷಾ ಮಾನದಂಡವನ್ನು ಪಾಲಿಸುವಂತೆ ಸೂಚಿಸಲಾಗಿದೆ. ಇನ್ನು ವಾಯು ಪ್ರದರ್ಶನವನ್ನು ವೀಕ್ಷಿಸಲು ಟಿಕೆಟ್, ಬ್ಯಾಡ್ಜ್‌ಗಳು ಮತ್ತು ಆಯೊಜಕರಿಂದ ವಿತರಿಸಲ್ಪಟ್ಟ QR ಕೋಡ್‌ಗಳು ಇದ್ದವರನ್ನು ಮಾತ್ರವೇ ಒಳಗೆ ಬಿಡಲಾಗುತ್ತದೆ. ಇತರ ಯಾವುದೇ ಆಮಂತ್ರಣ ಪತ್ರಿಕೆಗಳು ಅಥವಾ ಟಿಕೆಟ್‌ಗಳಿದ್ದವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಲಾಗುವುದಿಲ್ಲ.
ಅತೀ ದೊಡ್ಡ ಏರ್ ಶೋ:
ಹೌದು, ಈ ಬಾರಿಯ ಏರ್ ಶೋ ದೇಶದಲ್ಲಿ ಇಲ್ಲಿಯ ತನಕ ನಡೆದಿರುವಂತಹ ಏರ್ ಶೋಗಳಲ್ಲೇ ಅತೀ ದೊಡ್ಡದು ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಹಿಂದಿನ ಏರ್ ಶೋ 2021 ರಲ್ಲಿ ಕೋವಿಡ್ ಸಮಯದಲ್ಲಿ ನಡೆದಿತ್ತು. ಇದೇ ಕಾರಣದಿಂದಾಗಿ ಆ ಏರ್ ಶೋಗೆ ವಿದೇಶಿ ಕಂಪೆನಿಗಳು ಹೆಚ್ಚಿನ ಆಸಕ್ತಯನ್ನು ತೋರಿಸಿರಲಿಲ್ಲ. ಹಾಗಾಗಿ ಅದು ಅಷ್ಟೊಂದು ದೊಡ್ಡ ಮಟ್ಟದ್ದು ಆಗಿರಲಿಲ್ಲ.
ಆದರೆ ಈ ಬಾರಿಯ ವಾಯು ಪ್ರದರ್ಶನಕ್ಕೆ ವಿದೇಶಿ ಕಂಪನಿಗಳು ಭಾರೀ ಉತ್ಸಾಹ ವ್ಯಕ್ತಪಡಿಸಿದ್ದು, ಒಟ್ಟು 731 ಕಂಪನಿಗಳು ಪಾಲ್ಗೊಳ್ಳಲ್ಲಿದ್ದು ಇದರಲ್ಲಿ 633 ಕಂಪನಿಗಳು ಭಾರತದ್ದಾಗಿದೆ. ಹಾಗಾಗಿ ಇದು ಹಿಂದೆಂದಿಗಿಂತಲೂ ಅತೀ ದೊಡ್ಡ ಏರ್ ಶೋ ಆಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇನ್ನು ನೀವೂ ಸಹ ಈ ಏರೋ ಶೋ ನೋಡಬೇಕೆಂದಿದ್ದರೆ http://www.aeroindia.gov.in/ ಎಂಬ ಸರ್ಕಾರಿ ಸ್ವಾಮ್ಯದ ವೆಬ್‌ಸೈಟ್‌ನಲ್ಲಿ ಟಿಕೆಟನ್ನು ಬುಕ್ ಮಾಡಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಏರ್ ಶೋ ಭಾರತದ ಅತೀ ದೊಡ್ಡ ವಾಯು ಪ್ರದರ್ಶನವಾಗಿದೆ. ಕೇವಲ ವರ್ಷಕ್ಕೊಂದು ದಿನ ಮಾತ್ರ ಸಾರ್ವಜನಿಕರಿಗೆ ಭಾರತದ ವಾಯುಪಡೆ ತಮ್ಮ ಯುದ್ದವಿಮಾನಗಳಲ್ಲಿ ನಡೆಸುವ ಕಸರತ್ತನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಹೆಚ್‌ಎಎಲ್, ಡಿಆರ್‌ಡಿಒ ಮತ್ತು ಬಿಇಎಲ್ ಸಂಸ್ಥೆಗಳು ಈ ಪ್ರದರ್ಶನದ ಕೇಂದ್ರ ಬಿಂದುಗಳಾಗಿದೆ. ಈ ಮೂರು ಸಂಸ್ಥೆಗಳ ಒಟ್ಟಾಗಿ ತಯಾರಿಸಿರುವ ಉಪಕರಣಗಳು, ವೈಮಾನಿಕ ತಂತ್ರಜ್ಞಾನಗಳನ್ನು ನಾವು ಇಲ್ಲಿ ಕಾಣಬಹುದಾಗಿದ್ದು, ಸಾಧ್ಯವಾದರೆ ಏರ್ ಶೋ ಗೆ ಭೇಟಿ ನೀಡಿದರೆ ನಿರಾಸೆಯಾಗಲಾರದು ಎಂಬುದು ನಮ್ಮ ಅಭಿಪ್ರಾಯ.


Click it and Unblock the Notifications