ಶ್..! ಎಚ್ಚರ, ವಿಶ್ವದ 10 ಪ್ರಾಣಾಂತಿಕ ಕದನ ಹೆಲಿಕಾಪ್ಟರ್ ಗಳು
ಕದನದ ಸಂದರ್ಭ ಮಾತ್ರವಲ್ಲದೆ ರಕ್ಷಣಾ ಕಾರ್ಯಾಚರಣೆಯ ವೇಳೆಯಲ್ಲಿ ಹೆಲಿಕಾಪ್ಟರ್ ಗಳನ್ನು ಅತಿ ಹೆಚ್ಚು ಬಳಕೆ ಮಾಡಲಾಗುತ್ತದೆ. ವಿಶ್ವ ಕಂಡ ಅತಿ ದೊಡ್ಡ ಲೋಕ ಮಹಾಯುದ್ಧ ಕಾಲಘಟ್ಟದಿಂದಲೇ ಬಳಕೆಯಲ್ಲಿರುವ ಹೆಲಿಕಾಪ್ಟರ್ ಗಳನ್ನು ಆಧುನಿಕ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು ಆಶ್ರಯಿಸಿಕೊಂಡಿದೆ.
ಕಡಿಮೆ ಪ್ರದೇಶದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಲು ಸಮರ್ಥವಾಗಿರುವ ಹೆಲಿಕಾಪ್ಟರ್ ಗಳನ್ನು ತ್ವರಿತ ವೇಗದಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ವಿಶ್ವದ ಅಗ್ರ 10 ಕದನ ಹೆಲಿಕಾಪ್ಟರ್ ಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

10. ಝಡ್ 10
ಚೀನಾ ರಾಷ್ಟ್ರಕ್ಕೆ ಸೇರಿರುವ ಝಡ್-10 ಯುದ್ಧ ಹೆಲಿಕಾಪ್ಟರ್ 2008-09ನೇ ಇಸವಿಯಿಂದಲೇ ಅಸ್ತಿತ್ವದಲ್ಲಿದೆ. ಕಿರಿದಾದ ಮೈಕಟ್ಟಿನ ಸಂರಚನೆಯ ಈ ಹೆಲಿಕಾಪ್ಟರ್ ಮುಂಭಾಗದಲ್ಲಿ ಬಂದೂಕುಧಾರಿ ಮತ್ತು ಹಿಂದುಗಡೆ ಪೈಲಟ್ ಕೂರುತ್ತಾನೆ. ಟ್ಯಾಂಕರ್ ಗಳನ್ನು ಧ್ವಂಸ ಮಾಡುವ ಸಾಮರ್ಥ್ಯವು ಇದನ್ನು ವಿಶಿಷ್ಟವಾಗಿಸುತ್ತದೆ.

09. ಎಂಐ-24 ಹಿಂದ್
ರಷ್ಯಾ ವಾಯು ಸೇನೆಯ ಭಾಗವಾಗಿರುವ ಎಂಐ-24 ಹೆಲಿಕಾಪ್ಟರ್ ನಲ್ಲಿ ಎಂಟು ಮಂದಿ ಸೈನಿಕರಿಗೆ ಕಾರ್ಯಾಚರಣೆ ನಡೆಸಬಹುದಾಗಿದೆ. ಪ್ರಮುಖವಾಗಿಯೂ ಯುದ್ಧ ಕಾಲಘಟ್ಟದಲ್ಲಿ ಗಾಯಾಳುವಾದ ಸೈನಿಕರನ್ನು ಸಾಗಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಇದು ಅಮೆರಿಕ ಎಎಚ್-4 ಅಪಾಚಿ ಹೆಲಿಕಾಪ್ಟರ್ ಗೆ ಪ್ರತಿಸ್ಪರ್ಧಿಯಾಗಿದೆ.

08. ಎಎಚ್-2 ರೂಯಿವಾಲ್ಕ್
ದಕ್ಷಿಣ ಆಫ್ರಿಕಾ ನಿರ್ಮಾಣದ ಡೆನೆಲ್ ರೂಯಿವಾಲ್ಕ್ ಶಕ್ತಿಶಾಲಿ ದಾಳಿ ನಡೆಸುವ ಯುದ್ಧ ಹೆಲಿಕಾಪ್ಟರ್ ಆಗಿದೆ. 12 ಇಂತಹ ಹೆಲಿಕಾಪ್ಟರ್ ಗಳನ್ನು ದಕ್ಷಿಣ ಆಫ್ರಿಕಾ ವಾಯುಸೇನೆ ಬಳಕೆ ಮಾಡುತ್ತಿದೆ.

07. ಎಎಚ್-1ಡಬ್ಲ್ಯು ಸೂಪರ್ ಕೋಬ್ರಾ
ಟ್ವಿನ್ ಎಂಜಿನ್ ನಿಯಂತ್ರಿತ ದಾಳಿ ಹೆಲಿಕಾಪ್ಟರ್ ಆಗಿರುವ ಎಎಚ್-1ಡಬ್ಲ್ಯು ಸೂಪರ್ ಕೋಬ್ರಾ, ಅಮೆರಿಕ ಸೇನೆಗೆ ಸೇರಿದ್ದಾಗಿದೆ. ಎಎಚ್-1ಜೆ ಸೀ ಕೋಬ್ರಾ, ಎಎಚ್-ಟಿ ಪರಿಷ್ಕೃತ ಸೀ ಕೋಬ್ರಾ ಮತ್ತು ಎಎಚ್-1ಡಬ್ಲ್ಯು ಸೂಪರ್ ಕೋಬ್ರಾ ಇದೇ ಶ್ರೇಣಿಗೆ ಸೇರಿದ ಇತರೆ ಶಕ್ತಿಶಾಲಿ ಹೆಲಿಕಾಪ್ಟರ್ ಗಳಾಗಿವೆ.

06. ಎ-129/ಟಿ-129 (ಇಟಲಿ-ಟರ್ಕಿ)
ಮೂಲತ: ಆಗಸ್ಟಾ ಎ129 ಮ್ಯಾನ್ ಗಸ್ಟಾ ಯುದ್ಧ ಹೆಲಿಕಾಪ್ಟರ್ ರನ್ನು ಇಟಲಿ ನಿರ್ಮಿಸಿತ್ತು. ಇದು ಪಶ್ಚಿಮ ಯುರೋಪ್ ನಲ್ಲಿ ವಿನ್ಯಾಸ ಹಾಗೂ ನಿರ್ಮಾಣಗೊಳಿಸಿರುವ ಮೊದಲ ಯುದ್ಧ ಹೆಲಿಕಾಪ್ಟರ್ ಆಗಿದೆ. ಇದರ ಇತರೆ ಆವೃತ್ತಿಗಳಾದ ಟಿಎಐ/ಆಗಸ್ಟಾ ಟಿ-129 ಎಟಿಎಕೆ ಸೇವೆಯನ್ನು ಟರ್ಕಿ ಏರೋಸ್ಪೇಸ್ ಇಂಡಸ್ಟ್ರೀಸ್ ಬಳಕೆ ಮಾಡುತ್ತಿದೆ.

05. ಎಎಚ್-1ಝಡ್ ವೈಪರ್
ಅಮೆರಿಕ ನೌಕಾದಳ ಅಭಿವೃದ್ಧಿಪಡಿಸಿರುವ ಬಹು ಪಾತ್ರಧಾರಿ ಎಎಚ್-1ಝಡ್ ವೈಪರ್ ಯುದ್ಧ ಹೆಲಿಕಾಪ್ಟರನ್ನು ಎಎಚ್-1ಡಬ್ಲ್ಯು ಸೂಪರ್ ಕೋಬ್ರಾ ತಳಹದಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲೂ ಟ್ವಿನ್ ಎಂಜಿನ್, ಫೋರ್ ಬ್ಲೇಡ್, ರೋಟರ್ ಸಿಸ್ಟಂ, ಪರಿಷ್ಕೃತ ಟ್ರಾನ್ಸ್ ಮಿಷನ್ ಮತ್ತು ನಿಖರ ಗುರಿಯಿಡುವ ವ್ಯವಸ್ಥೆಯನ್ನು ಹೊಂದಿದೆ. 'ಝಲು ಕೋಬ್ರಾ' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ.

04. ಯುರೋಕಾಪ್ಟರ್ ಟೈಗರ್
ಜರ್ಮನಿಯ ಯುರೋಕಾಪ್ಟರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಯುರೋಕಾಪ್ಟರ್ ಹೆಲಿಕಾಪ್ಟರ್ ಎರಡು ಶಕ್ತಿಶಾಲಿ ಎಂಟಿಯು ಟರ್ಬೊಮೆಕಾ ರಾಲ್ಸ್ ರಾಯ್ಸ್ ಎಂಟಿಆರ್390 ಟರ್ಬೊಶಾಫ್ಟ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ.

03. ಎಂಐ-28 ಎಚ್ ಹ್ಯಾವೋಕ್
ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿರುವ ಹ್ಯಾವೋಕ್ ಯುದ್ಧ ಹೆಲಿಕಾಪ್ಟರನ್ನು ರಷ್ಯಾ ಅಭಿವೃದ್ಧಿಪಡಿಸಿದೆ. ಎರಡು ಸೀಟುಗಳ ಈ ಶಕ್ತಿಶಾಲಿ ಹೆಲಿಕಾಪ್ಟರ್ ವಿರೋಧಿ ಪಡೆಗಳ ಕಣ್ತಪ್ಪಿಸಿ ಆಕ್ರಮಣ ನಡೆಸುವ ಸಾಮರ್ಥ್ಯ ಹೊಂದಿದೆ.

02. ಕಾಮೊವ್ ಕೆಎ-50/ಕೆಎ-52
ಬ್ಲ್ಯಾಕ್ ಶಾರ್ಕ್ ಎಂದು ಕರೆಯಲ್ಪಡುವ ಕಾಮೊವ್ ಕೆಎ-50/ಕೆಎ-52 ರಷ್ಯಾ ಅಭಿವೃದ್ಧಿಪಡಿಸಿರುವ ಮಗದೊಂದು ದಾಳಿ ಹೆಲಿಕಾಪ್ಟರ್ ಆಗಿದೆ. 1980ರ ದಶಕದಿಂದಲೇ ನಿರ್ಮಾಣ ಹಂತದಲ್ಲಿರುವ ಈ ಯುದ್ಧ ಹೆಲಿಕಾಪ್ಟರ್ 1995ರಲ್ಲಿ ಸೇವೆಗೆ ಲಭ್ಯವಾಗಿತ್ತು. ಏಕ ಮಾತ್ರ ಪೈಲಟ್ ನಿಂದ ನಿಯಂತ್ರಿತ ಕಾಮೊವ್ ಹೆಲಿಕಾಪ್ಟರ್ ನಿಖರ ದಾಳಿ ನಡೆಸಲು ನಿಸ್ಸೀಮವೆನಿಸಿದೆ. ಗಾಳಿಯಿಂದ ಗಾಳಿಗೆ ದಾಳಿಯನ್ನಿಡುವ ಮಿಸೈನ್ ಗಳನ್ನು ಒತ್ತೊಯ್ಯುವ ಸಾಮರ್ಥ್ಯವು ಇದನ್ನು ವಿಶಿಷ್ಟವಾಗಿಸುತ್ತದ್ದು, 250 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ.

01. ಎಎಚ್-64ಡಿ ಅಪಾಚಿ ಲಾಂಗ್ ಬೋ
ಅಮೆರಿಕ ಸೇನೆಯ ಮುಂದುವರಿದ ಆಕ್ರಮಣ ಹೆಲಿಕಾಪ್ಟರ್ ಯೋಜನೆಯ ಭಾಗವಾಗಿ ಎಎಚ್-64ಡಿ ಅಪಾಚಿ ಲಾಂಗ್ ಬೋ ಯುದ್ಧ ಹೆಲಿಕಾಪ್ಟರನ್ನು ಅಭಿವೃದ್ಧಿಪಡಿಸಲಾಗಿತ್ತು. ಇದರಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನ ಮತ್ತು ಅಗ್ನಿ ನಿಯಂತ್ರಣ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ಅಷ್ಟೇ ಯಾಕೆ ಶಕ್ತಿಶಾಲಿ 16 ಎಜಿಎಂ-114 ಹೆಲ್ ಫೈರ್ ಮಿಸೈಲ್, 76 70 ಎಂಎಂ ಏರಿಯಲ್ ರಾಕೆಟ್ ಮತ್ತು 1,200 30ಎಂಎಂ ರೌಂಡ್ ಎಂ230 ಆಟೋಮ್ಯಾಟಿಕ್ ಕ್ಯಾನನ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಅಂದ ಹಾಗೆ ಯುದ್ಧ ಹೆಲಿಕಾಪ್ಟರ್ ಶಕ್ತಿಯಲ್ಲಿ ಭಾರತ ಸಹ ಮುಂದಿದ್ದು, ಎಚ್‌ಎಎಲ್ ಧ್ರುವ್,ಎಚ್‌ಎಎಲ್ ಚೇತಕ್,ಎಚ್‌ಎಎಲ್ ಚೀತಾ,ಎಚ್‌ಎಎಲ್ ರುಧ್ರ, ಎಂಐ-17, ಎಂಐ-8, ಎಂಐ-35, ಎಂಐ-26 ಇತ್ಯಾದಿಗಳು ಕೆಲವು ಪ್ರಮುಖ ಕದನ ಹೆಲಿಕಾಪ್ಟರ್ ಗಳಾಗಿವೆ.


Click it and Unblock the Notifications








