ವಿಶ್ವೇಶ್ವರಯ್ಯ ಸ್ಪೆಷಲ್; ವಾಹನ ಜಗತ್ತಿನ ಅಗ್ರ 10 ವಿನ್ಯಾಸಗಾರರು
ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವೆದೆಲ್ಲೆಡೆ ಹಾರಿಸಿರುವ 'ಸರ್ ಎಂ.ವಿ' ಎಂಬ ಹೆಸರಿನಿಂದಲೇ ಚಿರ ಪರಿಚಿತವಾಗಿರುವ 'ಭಾರತ ರತ್ನ' ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು (ಸೆಪ್ಟೆಂಬರ್ 15) ದೇಶದೆಲ್ಲೆಡೆ ಬಿಣಿಗೆಯರಿಗರ ನಾಳು (Engineers Day) ಆಗಿ ಆಚರಿಸಲಾಗುತ್ತಿದೆ.
1860ನೇ ಇಸವಿಯ ಮೈಸೂರು ಪ್ರಾಂತ್ಯದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಸರ್ ಎಂ.ವಿ, ಮೈಸೂರು ಸಂಸ್ಥಾನದ ದಿವಾನರಾಗಿ ದುಡಿದಿದ್ದರು. ಬಳಿಕ ಕೃಷ್ಣರಾಜ ಸಾಗರ (ಕನ್ನಂಬಾಡಿ) ಜೀವನದಿ ಕಾವೇರಿ ನದಿಗೆ ಕಟ್ಟಲಾದ ಆಣೆಕಟ್ಟನ್ನು ಪ್ರಾರಂಭಿಸಿ ನಾಲ್ಕು ವರ್ಷಗಳಲ್ಲಿ ಮುಗಿಸಿ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿದರು. ಇಂದಿನ ಈ ಲೇಖನದಲ್ಲಿ ಸಮಕಾಲೀನ ಆಟೋಮೊಬೈಲ್ ಕ್ಷೇತ್ರದಲ್ಲಿ ಅಗ್ರ 10 ವಿನ್ಯಾಸಗಾರರ ಬಗ್ಗೆ ಚರ್ಚೆ ನಡೆಸಲಾಗುವುದು.

"ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಕಸಗುಡಿಸುವ ರಸ್ತೆಯಷ್ಟು ಸ್ವಚ್ಚವಾಗಿರಬಾರದು" - ವಿಶ್ವೇಶ್ವರಯ್ಯ

10. ಜೆ. ಮೇಯ್ಸ್ ( J. Mays)
ಜನನ: 1954 ಅಕ್ಟೋಬರ್ 15
ಸಂಸ್ಥೆ: ಫೋರ್ಡ್
ರಾಷ್ಟ್ರ: ಅಮೆರಿಕ, ಒಕ್ಲಹೋಮ (Oklahoma)

ಏಕೆ ಪ್ರಸಿದ್ಧರು:
ಫೋಕ್ಸ್‌ವ್ಯಾಗನ್ ಗ್ರೂಪ್ ಅಧೀನತೆಯಲ್ಲಿರುವ ಆಡಿ ಹಾಗೂ ಬಿಎಂಡಬ್ಲ್ಯು ಜೊತೆ ಕಾರ್ಯ ನಿರ್ವಹಿಸಿರುವ ಮೇಯ್ಸ್ ಐಕಾನಿಕ್ ಫೋಕ್ಸ್ ವ್ಯಾಗನ್ ಕಾನ್ಸೆಪ್ಟ್ 1 ಕಾರಿನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದುವೇ ಬಳಿಕ ಪೋಕ್ಸ್ ವ್ಯಾಗನ್ ಬೀಟ್ಲ್ ಎಂಬ ರೆಟ್ರೋ ಶೈಲಿಯ ರೂಪುಗೊಳ್ಳಲು ನೆರವಾಗಿತ್ತು. ಪ್ರಸ್ತುತ ಫೋರ್ಡ್ ಮೋಟಾರು ಸಂಸ್ಥೆಯ ಗ್ಲೋಬಲ್ ಡಿಸೈನ್ ಉಪಾಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ 60ರ ಹರೆಯದ ಮೇಯ್ಸ್ 'ರೆಟ್ರೋಫ್ಯೂಚರಿಸಂ' (Retrofuturism) ವಿನ್ಯಾಸ ತಂತ್ರಜ್ಞಾನವು ಜಗತ್ತಿನೆಲ್ಲೆಡೆ ಮನ್ನಣೆಗೆ ಪಾತ್ರವಾಗಿದೆ.

09. ಪೀಟರ್ ಸ್ಟೀವನ್ಸ್ ( Peter Stevens)
ಜನನ: 1943
ರಾಷ್ಟ್ರ: ಬ್ರಿಟನ್

ಏಕೆ ಪ್ರಸಿದ್ಧರು:
ನೀವೆಲ್ಲರು ಮೆಕ್ ಲ್ಯಾರೆನ್ ಎಫ್1 ಬಗ್ಗೆ ಕೇಳಿರುಬಹುದು? ಈ ಐಕಾನಿಕ್ ಕಾರಿನ ವಿನ್ಯಾಸದಲ್ಲಿ ಪೀಟರ್ ಸ್ಟೀವನ್ಸ್ ಸಹ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಬ್ರಿಟನ್ ಶ್ರೇಷ್ಠ ವಾಹನ ವಿನ್ಯಾಸಗಾರರಲ್ಲಿ ಓರ್ವರಾಗಿರುವ ಅವರು ಫ್ಲೋರಿಡಾ ತಳಹದಿಯ ಪರಿಸರ ಸ್ನೇಹಿ ರಿವಿಯನ್ ಆಟೋಮೋಟಿವ್ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಯಾಕೆ 2005ರಲ್ಲಿ ಮಹೀಂದ್ರ ಆಂಡ್ ಮಹೀಂದ್ರದ ಸಲಹೆಗಾರ ನಿರ್ದೇಶಕರಾಗಿ ಕೆಲಸ ಮಾಡಿದ್ದರಲ್ಲದೆ ಜನಪ್ರಿಯ ಎಕ್ಸ್‌ಯುವಿ500 ಹೊರತರುವಲ್ಲಿ ತಮ್ಮ ಪಾತ್ರ ವಹಿಸಿದ್ದರು.

08. ಶಿರೊ ನಕಮುರಾ (Shiro Nakamura)
ಜನನ: 1950
ಸಂಸ್ಥೆ: ನಿಸ್ಸಾನ್
ರಾಷ್ಟ್ರ: ಜಪಾನ್

ಏಕೆ ಪ್ರಸಿದ್ಧರು:
ಜಪಾನ್‌ನ ಖ್ಯಾತ ವಿನ್ಯಾಸಗಾರ ಹಾಗೂ ನಿಸ್ಸಾನ್ ಮೋಟಾರ್ ಕಂಪನಿ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶಿರೊ ನಕಮುರಾ, ನಿಸ್ಸಾನ್ ಜೊತೆಗೆ ಇನ್ಪಿನಿಟಿ ಹಾಗೂ ದಟ್ಸನ್ ಬ್ರಾಂಡ್‌ಗಳ ಮುಖ್ಯ ರಚನಾತ್ಮಕ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೈಗಳಿಂದಲೇ ನೂತನ ಸೃಜನಶೀಲ ವಿನ್ಯಾಸವನ್ನು ಸೃಷ್ಟಿ ಮಾಡಬಲ್ಲ ಅವರು 'ಫಿಂಗರ್ಸ್' ಎಂಬ ಅಕ್ಕರೆಯ ಹೆಸರಿನಿಂದಲೇ ಖ್ಯಾತಿಗೆ ಪಾತ್ರವಾಗಿದ್ದಾರೆ.

07. ರಾಲ್ಫ್ ಗಿಲ್ಲೆಸ್ (Ralph Gilles)
ಜನನ: 1970, ಜನವರಿ 14
ಸಂಸ್ಥೆ: ಫಿಯೆಟ್/ಕ್ರೈಸ್ಲರ್
ರಾಷ್ಟ್ರ: ಅಮೆರಿಕ, ನ್ಯೂಯಾರ್ಕ್

ಏಕೆ ಪ್ರಸಿದ್ಧರು:
ಜಗತ್ತಿನ ವಾಹನ ಪ್ರೇಮಿಗಳು ಕ್ರೈಸ್ಲರ್ ಕಾರನ್ನು ಮೆಚ್ಚುವಂತೆ ಮಾಡಿರುವ ಅಮೆರಿಕ ಕೆನಡಾ ಮೂಲದ ಈ ಖ್ಯಾತ ವಿನ್ಯಾಸಗಾರ, ಕ್ರೈಸ್ಲರ್ 300ಸಿ ನಿರ್ಮಾಣದಲ್ಲಿ ಸೂತ್ರಧಾರಿಯೆನಿಸಿದ್ದರು.

06. ಫ್ರಾಂಕ್ ಸ್ಟಿಫೆನ್ಸನ್ (Frank Stephenson)
ಜನನ: 1959
ರಾಷ್ಟ್ರ: ಮೊರಕ್ಕೊ

ಏಕೆ ಪ್ರಸಿದ್ಧರು:
ಸಮಕಾಲೀನ ಜಗತ್ತಿನ ಅತಿ ಪ್ರಭಾವಿ ವಾಹನ ವಿನ್ಯಾಸಗಾರರಲ್ಲಿ ಓರ್ವರಾಗಿರುವ ಫ್ರಾಂಕ್ ಸ್ಟಿಫೆನ್ಸನ್, 2001ರಲ್ಲಿ ಪ್ರಶಸ್ತಿ ವಿಜೇತ ಮಿನಿ ಹ್ಯಾಚ್, ಫಿಯೆಟ್, ಆಲ್ಪಾ ರೊಮಿಯೊ, ಫೆರಾರಿ ಹಾಗೂ ಮೆಕ್ ಲ್ಯಾರೆನ್ ವಿನ್ಯಾಸ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

05. ವಾಲ್ಟರ್ ಡೆ ಸಿಲ್ವಾ (Walter de Silva)
ಜನನ: 1951, ಫೆಬ್ರವರಿ 27
ಸಂಸ್ಥೆ: ಫೋಕ್ಸ್ ವ್ಯಾಗನ್ ಗ್ರೂಪ್
ರಾಷ್ಟ್ರ: ಇಟಲಿ

ಎಕೆ ಪ್ರಸಿದ್ಧರು:
ಫೋಕ್ಸ್ ವ್ಯಾಗನ್ ಸಂಸ್ಥೆಯ ಎಲ್ಲ ಪ್ರಸಿದ್ಧ ಬ್ರಾಂಡ್ ಗಳಾಗಿರುವ ಆಡಿ, ಸಿಯೆಟ್, ಸ್ಕೋಡಾ, ಬೆಂಟ್ಲಿ, ಲಂಬೋರ್ಗಿನಿ ಹಾಗೂ ಬುಗಾಟಿ ಪರಿಣಾಮಕಾರಿ ವಿನ್ಯಾಸ ರಚನೆಯಲ್ಲಿ ವಾಲ್ಟರ್ ಪಾತ್ರ ಪ್ರಮುಖವಾಗಿದೆ. ಈ ಪೈಕಿ ಸಿಯೆಟ್ ವಿನ್ಯಾಸವು ಹೆಚ್ಚಿನ ಮನ್ನಣೆಗೆ ಪಾತ್ರವಾಗಿದೆ.

04. ಹೆನ್ರಿಕ್ ಫಿಸ್ಕರ್ (Henrik Fisker)
ಜನನ: 1963, ಆಗಸ್ಟ್ 10
ಸಂಸ್ಥೆ: ಫಿಸ್ಕರ್ ಆಟೋಮೋಟಿವ್ ಸ್ಥಾಪಕ
ರಾಷ್ಟ್ರ: ಡೆನ್ಮಾರ್ಕ್

ಏಕೆ ಪ್ರಸಿದ್ಧರು:
ಜನಪ್ರಿಯ ಆಸ್ಟನ್ ಮಾರ್ಟಿನ್ ಡಿಬಿ9, ಆಸ್ಟನ್ ಮಾರ್ಟಿನ್ ವಿ8 ವ್ಯಾಂಟೇಜ್, ಫಿಸ್ಕರ್ ಕರ್ಮಾ, ಬಿಎಂಡಬ್ಲ್ಯು ಝಡ್8 ಡಿಸೈನ್ ರಚನೆಯಲ್ಲಿ ಹೆನ್ರಿಕ್ ತಮ್ಮ ಕೌಶಲ್ಯವನ್ನು ಮೆರೆದಿದ್ದರು.

03. ಇಯಾನ್ ಕ್ಯಾಲಮ್ (Ian Callum)
ಜನನ: 1954, ಜುಲೈ 30
ಸಂಸ್ಥೆ: ಜಾಗ್ವಾರ್
ರಾಷ್ಟ್ರ: ಸ್ಕಾಟ್ಲೆಂಡ್

ಏಕೆ ಪ್ರಸಿದ್ಧರು:
ಪ್ರಸ್ತುತ ಜಾಗ್ವಾರ್ ಡಿಸೈನ್ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಲಮ್ ಫೋರ್ಡ್ ಹಾಗೂ ಆಸ್ಟನ್ ಮಾರ್ಟಿನ್ ಜೊತೆಗೂ ಸೇವೆ ಸಲ್ಲಿಸಿದ್ದರು. 1984ರ ಫೋರ್ಡ್ ಆರ್‌ಎಸ್200, 1989ರ ಫೋರ್ಡ್ ಎಸ್ಕಾರ್ಟ್ ಕಾಸ್ ವರ್ತ್, 1993ರ ಆಸ್ಟನ್ ಮಾರ್ಟಿನ್ ಡಿಬಿ7, 1997ರ ನಿಸ್ಸಾನ್ ಆರ್390, 20054ರ ಜಾಗ್ವಾರ್ ಎಕ್ಸ್‌ಕೆ, 2008ರ ಜಾಗ್ವಾರ್ ಎಕ್ಸ್‌ಎಫ್, 2009ರ ಜಾಗ್ವಾರ್ ಎಕ್ಸ್‌ಜೆ ಹಾಗೂ 2013ರ ಜಾಗ್ವಾರ್ ಎಫ್-ಟೈಪ್ ಮಾದರಿಗಳು ಅವರ ವಾಹನ ಪರಿಕಲ್ಪನೆಗಳಿಗೆ ಮೆರಗು ತುಂಬಿವೆ.

02. ಜಾಸನ್ ಕ್ಯಾಸ್ಟ್ರಿಯೊಟಾ (Jason Castriota)
ಜನನ: 1974
ರಾಷ್ಟ್ರ: ಅಮೆರಿಕ, ನ್ಯೂಯಾರ್ಕ್

ಏಕೆ ಪ್ರಸಿದ್ಧರು:
ಸಮಕಾಲೀನ ಆಟೋಮೊಬೈಲ್ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿ ವಿನ್ಯಾಸಗಾರರಲ್ಲಿ ಓರ್ವರಾಗಿರುವ ಜಾಸನ್, ಐಕಾನಿಕ್ ಫೆರಾರಿ 599 ಜಿಟಿಬಿ ಫಿಯೊರನೊ, ಮಸೆರಟಿ ಗ್ರ್ಯಾನ್ ಟರಿಸ್ಮೊ, ಮಸೆರಟಿ ಬರ್ಟ್ ಕೇಜ್, ರೋಲ್ಸ್ ರಾಯ್ಸ್ ಹೈಪರಿಯಾನ್, ಫೆರಾರಿ ಪಿ4/5 ಮಾದರಿಗಳಿಗೆ ಏರೋಡೈನಾಮಿಕ್ಸ್ ವಿನ್ಯಾಸ ತುಂಬಿದ್ದರು.

01. ಪೀಟರ್ ಸ್ಕ್ರೆಯರ್ (Peter Schreyer)
ಜನನ: 1953
ಸಂಸ್ಥೆ: ಕಿಯಾ ಮೋಟಾರ್ಸ್
ರಾಷ್ಟ್ರ: ಜರ್ಮನಿ

ಏಕೆ ಪ್ರಸಿದ್ಧರು: ವಿಶ್ವ ವಿಖ್ಯಾತ ಆಡಿ ಟಿಟಿ ಕಾರುಗಳ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೀಟರ್, ಸಮಕಾಲೀನ ಜಗತ್ತಿನ ಅತಿ ಪ್ರಭಾವಿ ವಿನ್ಯಾಸಗಾರರಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಕಿಯಾ ಮೋಟಾರ್ಸ್ ಮುಖ್ಯ ಡಿಸೈನ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಅವರ ಸಾಧನೆಗೆ ಸಾಲು ಸಾಲು ಕಾರುಗಳನ್ನೇ ಪಟ್ಟಿ ಮಾಡಿ ಕೊಡಬಹುದು. ಇವುಗಳಲ್ಲಿ ಆಡಿ ಟಿಟಿ, ಆಡಿ ಎ3, ಆಡಿ ಎ4, ಆಡಿ ಎ6, ಫೋಕ್ಸ್ ವ್ಯಾಗನ್ ಹೊಸ ಬೀಟ್ಲ್, ಕಿಯಾ ಕೆಡೆನ್ಜಾ, ಕಿಯಾ ಒಮ್ಟಿಮಾ, ಕಿಯಾ ಸ್ಪೋರ್ಟಜ್, ಕಿಯಾ ಫೋರ್ಟ್, ಕಿಯಾ ಸೋಲ್, ಕಿಯಾ ಪಿಕಂಟೊ ಮತ್ತು ಹೊಚ್ಚ ಹೊಸ 2016ರ ಹ್ಯುಂಡೈ ಟಸ್ಕನ್ ಹೀಗೆ ಪಟ್ಟಿ ಮುಂದುವರಿಯುತ್ತದೆ.


Click it and Unblock the Notifications








