ಇನೋವಾ ಪ್ರಿಯರಿಗೆ ಸಿಹಿ ಸುದ್ದಿ : ಅಗ್ಗದ ಬೆಲೆಯಲ್ಲಿ ಬರುತ್ತಿದೆ ಟೊಯೊಟಾ ಇನೋವಾ ಹೈಕ್ರಾಸ್‌ನ ಹೊಸ ವೆರಿಯೆಂಟ್
ಭಾರತದಲ್ಲಿರುವ ಎಂಪಿವಿ ವಾಹನಗಳಲ್ಲಿ ಅತ್ಯಂತ ಮುಂಚೂಣಿಯಲ್ಲಿರುವು ಟೋಯೋಟಾ ಇನೋವಾ ಎಂದು ಹೇಳಿದರೆ ಯಾರಿಂದಲೂ ವಿರೋಧಿಸಲು ಸಾಧ್ಯವಿಲ್ಲ. ಕಾರಣ 2005 ರಲ್ಲಿ ಇದು ಮಾರುಕಟ್ಟೆಗೆ ಲಾಂಚ್ ಆದಾಗಿನಿಂದ ಇಲ್ಲಿಯವರೆಗೆ ಟೊಯೊಟಾ ಇನೋವಾ ಭಾರತದಲ್ಲಿ ಗಳಿಸಿರುವ ಜನಪ್ರಿಯತೆ ಅಪಾರ. ಇದೀಗ ಇನೋವಾ ಪ್ರಿಯರಿಗೆ ಹೊಸ ಸುದ್ದಿಯೊಂದು ಬರುತ್ತಿದೆ.
ಕೆಲ ತಿಂಗಳ ಹಿಂದೆ ಟೊಯೊಟಾ ಕಿರ್ಲೋಸ್ಕರ್ ಇನೋವಾ ಕಾರಿನ ಅಪ್‌ಡೇಟೆಡ್ ಆವೃತ್ತಿಯಾದ ಟೋಯೋಟಾ ಇನೋವಾ ಹೈಕ್ರಾಸ್ ಎಂಬ ಕಾರನ್ನು ಲಾಂಚ್ ಮಾಡಿತ್ತು. ಕಳೆದ ಬಾರಿಯ ಇನೋವಾ ಗಿಂತ ಭಾರೀ ಅಪ್‌ಡೇಟ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಹೈಕ್ರಾಸ್ ಹೆಚ್ಚು ಆಕರ್ಷಕವಾಗಿದ್ದರೂ, ಬೆಲೆ ಕೊಂಚ ಅಧಿಕ ಎಂಬ ಮಾತುಗಳು ಜನರ ಮಧ್ಯೆ ಕೇಳಿ ಬರುತ್ತಿತ್ತು. ಇದೇ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಇಂಡೋ-ಜಪಾನೀಸ್ ಕಾರು ತಯಾರಿಕಾ ಕಂಪನಿಯಾದ ಟೊಯೋಟಾ ಕಿರ್ಲೊಸ್ಕರ್, ಇನೋವಾ ಹೈಕ್ರಾಸ್‌ನ ಹೊಸ ಬೇಸ್ ವೇರಿಯೆಂಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಹೌದು, ವರದಿಗಳ ಪ್ರಕಾರ ಟೋಯೋಟಾವು ಹೊಸ ಹೈಕ್ರಾಸ್‌ನ ಬೇಸ್ ವೇರಿಯೆಂಟ್‌ಗಳನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಈ ಎರಡೂ ಮಾದರಿಯಲ್ಲಿ ಮಾರುಕಟ್ಟೆಗೆ ತರಲಿದ್ದು ಈ ಬೇಸ್ ವೇರಿಯೆಂಟ್‌ನಲ್ಲಿ ಹಲವಾರು ಆಯ್ಕೆಗಳನ್ನೂ ಬಿಡಲಿದೆ ಎಂದು ತಿಳಿದು ಬಂದಿದೆ. ದೇಶದಲ್ಲಿ ಟೊಯೋಟಾ ಹೈಕ್ರಾಸ್‌ನ ಮಾರಾಟವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಈಗ ಇರುವ ವೇರಿಯೆಂಟ್‌ಗಳನ್ನು ಬಿಟ್ಟು ಇನ್ನೂ ಮೂರು ವೇರಿಯೆಂಟ್‌ಗಳನ್ನು ಬಿಡಲಿದೆ. ಮೊದಲಿನ ವೇರಿಯೆಂಟ್ ಬೇಸ್ ಮಾಡೆಲ್ ಆಗಿರಲಿದ್ದು ಇದಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಅದು ಬಿಟ್ಟು ಇನ್ನು ಎರಡು ವೇರಿಯೆಂಟ್ ಇರಲಿದ್ದು ವಿಎಕ್ಸ್ ಮತ್ತು ಝೆಡ್‌ಎಕ್ಸ್ ಎಂದು ಹೆಸರಿಸಲಾಗಿದೆ. ಈ ಎಲ್ಲಾ ವೇರಿಯೆಂಟ್‌ಗಳು 7 ಮತ್ತು 8 ಸೀಟಿಂಗ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಸದ್ಯಕ್ಕೆ ಇನ್ನೋವಾ ಹೈಕ್ರಾಸ್ ಐದು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. G,GX,VX,ZX ಮತ್ತು ZX(O). ZX ಮತ್ತು ZX(O) ವೇರಿಯೆಂಟ್‌ಗಳನ್ನು ಬಿಟ್ಟು ಉಳಿದೆಲ್ಲಾ ವೇರಿಯೆಂಟ್‌ಗಳಲ್ಲಿ 7 ಮತ್ತು 8 ಸೀಟಿಂಗ್ ಆಯ್ಕೆಗಳು ಲಭ್ಯವಿದೆ. ZX ಮತ್ತು ZX(O) ವೇರಿಯೆಂಟ್‌ಗಳಲ್ಲಿ ಕೇವಲ 7 ಸೀಟಿಂಗ್ ಆಯ್ಕೆಗಳು ಮಾತ್ರ ಲಭ್ಯವಿದೆ.
ಇನೋವಾ ಹೈಕ್ರಾಸ್‌ನ ಮೊದಲ ಎರಡು ವೇರಿಯೆಂಟ್‌ಗಳು ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿದೆ. ಆದರೆ ನಂತರದ ಮೂರು ವೇರಿಯೆಂಟ್‌ಗಳು ಸ್ಟ್ರಾಂಗ್ ಪೆಟ್ರೋಲ್ ಹೈಬ್ರಿಡ್ ನಲ್ಲಿ ಲಭ್ಯವಿದೆ. ಸ್ಟ್ರಾಂಗ್ ಪೆಟ್ರೋಲ್ ಹೈಬ್ರಿಡ್ ಆವೃತ್ತಿಯ ಇನ್ನೋವಾ ಹೈಕ್ರಾಸ್ 2.0 ಲೀಟರ್ ಇಂಜಿನ್ ಹೊಂದಿದ್ದು ಇದರ ಸಹಾಯದಿಂದ ಈ ಕಾರು 183 ಪಿಎಸ್ ಪವರನ್ನು ಉತ್ಪತ್ತಿ ಮಾಡುತ್ತದೆ. ಇದರ ಮೈಲೇಜ್ ಬಗ್ಗೆ ಹೇಳುವುದಾದರೆ ಇನ್ನೋವಾ ಹೈಕ್ರಾಸ್ ಸುಮಾರು 23.24 ಕಿಮೀ ಮೈಲೇಜ್ ನೀಡುತ್ತದೆ.
ಈ ಸೆಗ್ಮೆಂಟ್‌ಗಳಲ್ಲೇ ಇತರ ಕಾರುಗಳಿಗೆ ಹೋಲಿಸಿದ ಇದು ಅಧಿಕ ಮೈಲೇಜ್ ಆಗಿದೆ. ಇನ್ನು ಇನ್ನೋವಾ ಹೈಕ್ರಾಸ್‌ನ ಬರೀ ಪೆಟ್ರೋಲ್ ಇಂಜಿನ್ ಸಹ 2.0 ಎಂಜಿನ್‌ನಲ್ಲಿ ಬರುತ್ತಿದ್ದು 171 ಪಿಎಸ್ ಪವರನ್ನು ಉತ್ಪಾದಿಸುತ್ತದೆ. ಮತ್ತು ಈ ಆವೃತ್ತಿಯ ಮೈಲೇಜ್ 16.13 ಕಿಲೋ ಮೀಟರ್ ಪ್ರತಿ ಲೀಟರ್‌ಗೆ. ಇನ್ನು ಸ್ಟ್ಯಾಂಡರ್ಡ್ ಪೆಟ್ರೋಲ್ ಆವೃತ್ತಿಯಲ್ಲಿ CVT ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಿದ್ದು, ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯಲ್ಲಿ e-CVT ಗೇರ್‌ಬಾಕ್ಸ್ ಲಭ್ಯವಿದೆ.
ಟೊಯೋಟಾ ಇನೋವಾ ಹೈಕ್ರಾಸ್ ಡೀಸೆಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿಲ್ಲವಾಗಿದ್ದರೂ, ಇನ್ನೂ ಸಹ ಟೊಯೋಟಾ ಇನೋವಾ ಕ್ರಿಸ್ಟಾ ಗ್ರಾಹಕರಿಗೆ ಡೀಸೆಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿರುವುದು ಸದ್ಯಕ್ಕೆ ಡೀಸೆಲ್ ಪ್ರಿಯ ವಾಹನ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಈ ಡೀಸೆಲ್ ಇನೋವಾ ಕ್ರಿಸ್ಟಾವನ್ನು ಇತ್ತೀಚೆಗಷ್ಟೇ ಟೊಯೋಟಾ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಡೀಸೆಲ್ ಇಂಜಿನ್‌ನ ಕ್ರಿಸ್ಟಾವು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಮಾತ್ರ ಲಭ್ಯವಿದೆ. ಇನ್ನು ಈಗಿರುವ ಹೈಕ್ರಾಸ್‌ಗಿಂತ ಬೇಸ್ ವೇರಿಯೆಂಟ್‌ಗಳು ಮಾರುಕಟ್ಟೆಗೆ ಬರಲಿರುವುರಿಂದ ಬೆಲೆಯಲ್ಲಿ ಕೊಂಚ ಇಳಿಕೆಯನ್ನು ನಿರೀಕ್ಷಿಸಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಟೊಯೋಟಾ ಇನೋವಾ ಹೈಕ್ರಾಸ್ ಸದ್ಯಕ್ಕೆ ಪೆಟ್ರೋಲ್ ಆವೃತ್ತಿಯು ಸುಮಾರಯ 18.30 ರಿಂದ 19.20 ಲಕ್ಷದ ನಡುವೆ ಲಭ್ಯವಿದ್ದು ಇದರ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು ಸುಮಾರು 24 ಲಕ್ಷದಿಂದ ಆರಂಭವಾಗಿ 28.97 ಲಕ್ಷದವರೆಗೆ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಿದೆ. ಇನ್ನೂ ಕೊಂಚ ಕಡಿಮೆ ಬೆಲೆಯಲ್ಲಿ ಹೊಸ ಬೇಸ್ ವೇರಿಯೆಂಟ್ ಹೈಕ್ರಾಸನ್ನು ಬಿಡುವುದರಿಂದ ಮಾರುಕಟ್ಟೆಯಲ್ಲಿ ಇದರ ಮಾರಾಟ ಇನ್ನು ಅಧಿಕವಾಗುವುದಲ್ಲದೇ ಹೆಚ್ಚು ಹೆಚ್ಚು ಜನರನ್ನು ಇದು ತಲುಪಬಲ್ಲದು.


Click it and Unblock the Notifications