Truck brake fail: ಡಿಕ್ಕಿಯ ಹೊಡೆತಕ್ಕೆ ಹೊಸ ಕಾರುಗಳು ಸೇರಿ 10 ವಾಹನಗಳು ನುಜ್ಜುಗುಜ್ಜು
ರೈಲುಗಳ ದಾರಿಗೆ ಅಡ್ಡ ಹೋದರೆ ಸಾವು ಖಚಿತ, ಹಾಗೆಯೇ ಟ್ರಕ್‌ಗಳ ಬ್ರೇಕ್ ಫೇಲ್ ಆದರೆ ಅಪಾರ ಹಾನಿ ಖಚಿತ. ವಾಹನಗಳ ಗಾತ್ರ ಹೆಚ್ಚಾದಷ್ಟು ಅವುಗಳಿಂದ ಎದುರಾಗುವ ಅಪಾಯ ಕೂಡ ಹೆಚ್ಚಾಗಿರುತ್ತದೆ. ಕಳೆದ ಗುರವಾರವಷ್ಟೇ (ನಿನ್ನೆ) ಟ್ರಕ್ ಒಂದರ ಬ್ರೇಕ್ ಫೇಲ್ ಆಗಿ ಬರೋಬ್ಬರಿ 10 ಕಾರುಗಳನ್ನು ಡಿಕ್ಕಿ ಹೊಡೆದು ಭಾರೀ ನಷ್ಟವನ್ನು ಉಂಟುಮಾಡಿದೆ.
ಘಟನೆಯು 12:55 ರ ಸುಮಾರಿಗೆ ರಾಯಗಢ ಜಿಲ್ಲೆಯಲ್ಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ್ದು, ಆರು ಜನರಿಗೆ ಗಾಯಗಳಾಗಿವೆ. ಘಟನೆಯ ಬಳಿಕ ಕೆಲ ಗಂಟೆಗಳ ಕಾಲ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಟ್ರಕ್ ಚಾಲಕ ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು 10 ವಾಹನಗಳಿಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ. ಅಪಘಾತದ ನಿಖರವಾದ ಕಾರಣ ತಿಳಿದಿಲ್ಲ. ಮಾಹಿತಿಯ ಪ್ರಕಾರ ಟ್ರಕ್ ಬ್ರೇಕ್ ಫೇಲ್ ಆಗಿ, ಚಾಲಕನ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಡಿಕ್ಕಿ ಹೊಡೆದು 10 ವಾಹನಗಳ ಗುಡ್ಡೆ ಹಾಕಿದ ಟ್ರಕ್:
ಟ್ರಕ್ ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳಿಗೆ ಡಿಕ್ಕಿ ಹೊಡೆದು 10 ವಾಹನಗಳ ರಾಶಿಯನ್ನು ಪೇರಿಸಿದೆ. ಈ ಅಪಘಾತದಲ್ಲಿ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಪೊಲೀಸರ ಪ್ರಕಾರ, ಯಾವುದೇ ದೊಡ್ಡ ಗಾಯಗಳು ವರದಿಯಾಗಿಲ್ಲ. ಅಪಘಾತದತ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿದ ಬಳಿಕ ಸಂಚಾರ ದಟ್ಟಣೆ ಕಡಿಮೆಯಾಗಿದೆ.
ಟ್ರಕ್‌ಗಳ ಬ್ರೇಕ್ ವಿಫಲಗೊಳ್ಳುವುದೇಕೆ?:
ಭಾರೀ ವಾಹನಗಳು ಮತ್ತು ಟ್ರಕ್ ಗಳು ಸುಧೀರ್ಘ ಪ್ರಯಾಣದಲ್ಲಿ ನಿರತವಾಗಿರುತ್ತವೆ. ಚಾಲಕರು ಇಂಧನ ಉಳಿಸಲು ಇಳಿಜಾರಿನ ಮಾರ್ಗದಲ್ಲಿ ಎಂಜಿನ್ ಆಫ್ ಮಾಡುತ್ತಾರೆ. ಇದು ಕೆಲವೊಮ್ಮೆ ಅಪಘಾತಗಳಿಗೆ ಕಾರಣವಾಗಬಹುದು. ಹೇಗೆಂದರೆ ಭಾರೀ ವಾಹನಗಳು ಮತ್ತು ಟ್ರಕ್‌ಗಳಲ್ಲಿ ಏರ್ ಬ್ರೇಕ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಟ್ರಕ್ ಗಳ ಅನೇಕ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗಿರುವ ಕಂಪ್ರೆಸರ್ ಗಾಳಿಯನ್ನು ಬಳಸಿ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ವಾಹನದ ಎಂಜಿನ್, ಕಂಪ್ರೆಸರ್‌ಗೆ ಶಕ್ತಿಯನ್ನು ನೀಡುತ್ತದೆ, ಇದು ಕಂಪ್ರೆಸರ್ ಏರ್‌ನೊಂದಿಗೆ ಟ್ಯಾಂಕ್ ಗಳನ್ನು ತುಂಬುತ್ತದೆ. ಆದರೆ ಎಂಜಿನ್ ಸಕ್ರಿಯವಾಗಿದ್ದಾಗ ಮಾತ್ರ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಬಹುದು. ಹಾಗಾಗಿ ಇಂಧನ ಉಳಿಸಲು ಇಳಿಜಾರಿನ ಮಾರ್ಗದಲ್ಲಿ ಎಂಜಿನ್ ಆಫ್ ಮಾಡಿದಾಗ ಅನಿವಾರ್ಯ ಪರಿಸ್ಥಿತಿಗಳಲ್ಲಿ ಬ್ರೇಕ್ ಹಾಕಿದಾಗ ಕೂಡಲೇ ಪ್ರತಿಕ್ರಿಯಿಸುವುದು ಕಷ್ಟ. ಕೆಲವೊಮ್ಮೆ ಸಡನ್ ಬ್ರೇಕ್ ವಿಫಗೊಳ್ಳವುದರಿಂದ ಟ್ರಕ್ ಗಳು ನಿಯಂತ್ರಣ ಕಳೆದುಕೊಂಡು ಅಪಘಾತಗಳಿಗೆ ಕಾರಣವಾಗುತ್ತದೆ.
ಓವರ್‌ಲೋಡ್ ಪ್ರಮುಖ ಸಮಸ್ಯೆ:
ವಾಣಿಜ್ಯ ವಾಹನಗಳ ಓವರ್‌ಲೋಡ್ ಭಾರತದಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ. ಹೆಚ್ಚುವರಿ ಸರಕುಗಳಿಂದ ಹೆಚ್ಚುವರಿ ತೂಕವು ಎಂಜಿನ್‌ನ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ ಬದಲಿ ಅಗತ್ಯವಿರುವ ನಿರ್ಣಾಯಕ ಭಾಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಓವರ್‌ಲೋಡ್ ಕೂಡ ಬ್ರೇಕ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಅಪಘಾತಗಳಿಗೆ ಕಾರಣವಾಗಬಹುದು. ಟ್ರಕ್ ಬ್ರೇಕ್ ವೈಫಲ್ಯದ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ವರದಿಯಾಗಿವೆ.

ಕಾರು ಅಥವಾ ಬೈಕ್ ಸವಾರರು ಹೈವೇಗಳಾಗಲಿ, ನಗರ ರಸ್ತೆಗಳಾಗಲಿ ಬೃಹತ್ ವಾಹಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಟ್ರಕ್‌ಗಳು ವಾಣಿಜ್ಯ ವಾಹನಗಳು ಆಗಿರುವುದರಿಂದ ಚಾಲಕರು ತಮ್ಮ ಸ್ವಂತ ವಾಹನಗಳನ್ನು ಪರಿಶೀಲನೆ ಮಾಡಿದಷ್ಟು ಶ್ರದ್ಧೆಯಿಂದ ಟ್ರಕ್‌ಗಳ ಕುರಿತು ಆಸಕ್ತಿ ತೋರುವುದಿಲ್ಲ. ಕೊಟ್ಟ ಲೋಡ್ ಅನ್ನು ತುಂಬಿಕೊಂಡು ಓಡಾಡುತ್ತಿರುತ್ತಾರೆ. ಬಹುತೇಕ ಬೃಹತ್ ವಾಹನಗಳು ಯಾವುದೋ ಒಂದು ಸಮಸ್ಯೆಯೊಂದಿಗೆ ರಸ್ತೆಗಳಲ್ಲಿ ಸಂಚರಿಸುತ್ತಿರುತ್ತವೆ. ಹಾಗಾಗಿ ಸಾರ್ವಜನಿಕರು ಜಾಗರೂಕತೆಯಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications