ಉಡುಪಿ... ಟಿಪ್ಪರ್ ಹಿಂದೆ ಡಿಕ್ಕಿ ಹೊಡೆದು ಸಿಕ್ಕಾಕೊಂಡ ಕಾರು: 2 ಕಿಮೀ ಎಳೆದುಕೊಂಡು ಹೋದ ಟ್ರಕ್ ಡ್ರೈವರ್
ಭಾರತೀಯರು ಒಂದು ರೀತಿಯ ನಿಕೃಷ್ಟವಾದ ಅಪಘಾತಗಳಿಗೆ ಹಲವು ಬಾರಿ ಸಾಕ್ಷಿಯಾಗಿದ್ದಾರೆ. ಎಲ್ಲಿಯ ತನಕ ಎಂದರೆ ಅಂತಹ ಘಟನೆಗಳನ್ನು ನೆನೆಸಿಕೊಂಡರೆ ಮೈ ಜುಮ್ಮೆನ್ನುವರಷ್ಟರ ಮಟ್ಟಿಗೆ ಭಯಾನಕ ಅಪಘಾತಗಳನ್ನು ನೋಡಿದ್ದಾರೆ. ಇಷ್ಟೆಲ್ಲಾ ಟ್ರಾಫಿಕ್ ನಿಯಮಗಳು ಇದ್ದರೂ ಅವುಗಳಿಗೆ ಕಾಲು ಕಾಸಿನ ಕಿಮ್ಮತ್ತು ಸಹ ನಮ್ಮಲ್ಲಿ ಸಿಗುತ್ತಿಲ್ಲ.
ಇದೀಗ ನಮ್ಮ ರಾಜ್ಯದಲ್ಲೇ ಇದೇ ರೀತಿಯ ಮತ್ತೊಂದು ಘಟನೆಯೊಂದು ನಡೆದಿದೆ. ಈಗ ವರದಿಯಾಗಿರುವ ಅಪಘಾತದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರೊಂದು ಟ್ರಕ್ ಹಿಂದೆ ಸಿಲುಕಿ ಹಾಕಿಕೊಂಡು ಸುಮಾರು ಎರಡು ಕಿಲೋ ಮೀಟರ್ ವರೆಗೂ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ ಎಂದರೆ ನೀವು ನಂಬಲೇಬೇಕು.

ಉಡುಪಿ ಸಮೀಪದ ಪಡುಬಿದ್ರೆಯ ಬಳಿ ಈ ಘಟನೆ ನಡೆದಿದ್ದು, ಜುಲೈ 17 ನೇ ದಿನಾಂಕದಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಯಾಂಟ್ರೋ ಕಾರು ಟಿಪ್ಪರ್‌ನ ಹಿಂಬಾದಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಟಿಪ್ಪರ್ ಚಾಲಕ (Truck Driver) ಮಾತ್ರ ತನ್ನ ವಾಹನವನ್ನು ವೇಗವಾಗಿ ಚಲಾಯಿಸುತ್ತಾ ಸುಮಾರು ಎರಡು ಕಿಲೋ ಮೀಟರ್ ವರೆಗೆ ಎಳೆದುಕೊಂಡು ಹೋಗಿದ್ದಾನೆ.
ಈ ಘಟನೆಯನ್ನು ಪಕ್ಕದಲ್ಲೇ ಬರುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ಜನರು ವಿಡಿಯೋ ಮಾಡಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಕಾರಿನ ಚೇಸಿಸ್ ಟಿಪ್ಪರ್‌ನ ಹಿಂಭಾಗದಲ್ಲಿ ಸಿಲುಕಿ ಹಾಕಿಕೊಂಡಿರುವುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಇದು ಹೇಗೆ ಅಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದೆ ಎಂಬುದು ಇನ್ನೂ ವ್ಯಕ್ತವಾಗಿಲ್ಲ.
ಇನ್ನು ಮಾಹಿತಿಗಳ ಪ್ರಕಾರ ಕಾರು ಬಂದು ತನ್ನ ಟಿಪ್ಪರ್‌ನ ಹಿಂಭಾದಲ್ಲಿ ಸಿಲುಕಿ ಹಾಕಿಕೊಂಡಿದೆ ಎಂದು ಟಿಪ್ಪರ್ ಚಾಲಕನಿಗೆ ತಿಳಿಯದೆ ಆತ ತನ್ನ ಪಾಡಿಗೆ ತನ್ನ ಟಿಪ್ಪರ್ ಅನ್ನು ಚಲಾಯಿಸುತ್ತಾ ಸಾಗುತ್ತಿರುವುದನ್ನು ಕಾಣಬಹುದು. ಪಕ್ಕದಲ್ಲೇ ಬರುತ್ತಿದ್ದ ಇನ್ನೊಂದು ಕಾರಿನ ಪ್ರಯಾಣಿಕರು ಚಾಲಕನ ಬಳಿ ಟಿಪ್ಪರನ್ನು ನಿಲ್ಲಿಸುವಂತೆ ಬೊಬ್ಬೆ ಹಾಕುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮಾಹಿತಿಗಳ ಪ್ರಕಾರ ಟಿಪ್ಪರ್ ಹಿಂಭಾಗಕ್ಕೆ ಗುದ್ದಿ ಸಿಲುಕಿ ಹಾಕಿಕೊಂಡು ಸುಮಾರು ಎರಡು ಕಿಲೋ ಮೀಟರ್ ವರೆಗೂ ಎಳೆದುಕೊಂಡು ಹೋದರೂ, ಸ್ಯಾಂಟ್ರೋ ಕಾರಿನಲ್ಲಿದ್ದವರು ಮಾತ್ರ ಯಾವುದೇ ಪ್ರಾಣಾಪಾಯ ಇಲ್ಲದೆ ಸುರಕ್ಷಿತವಾಗಿದ್ದಾರೆ ಎಂಬುದು ನಿಜಕ್ಕೂ ಸಂತೋಷದ ವಿಚಾರ. ಆದರೆ ಘಟನೆ ನಡೆಯುತ್ತಿದ್ದ ವೇಳೆ ಅದರೊಳಗಿದ್ದವರೂ ಸಹ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಕೂತಿದ್ದರು.
ಇನ್ನು ಈ ಘಟನೆಯನ್ನು ಗಮನಿಸಿದಾಗ ತಿಳಿದು ಬರುವ ಪ್ರಮುಖ ವಿಷಯವೇನೆಂದರೆ ನಮ್ಮಲ್ಲಿನ ಬಹುತೇಕ ಟ್ರಕ್‌ಗಳ ಹಿಂಭಾದಲ್ಲಿ ಕಬ್ಬಿಣದ ಸರಳುಗಳು ಇಲ್ಲದೇ ಇರುವುದು. ಹೆದ್ದಾರಿಯಲ್ಲಿ ವಿಪರೀತ ವೇಗದಲ್ಲಿ ಚಲಿಸುವಾಗ ಮುಂಭಾಗದಲ್ಲಿರುವ ಟ್ರಕ್ ಏನಾದರೂ ಒಮ್ಮೆಲೆ ಬ್ರೇಕ್ ಹಾಕಿದ್ರೆ ಹಿಂಭಾಗದಲ್ಲಿ ಬರುವ ಕಾರು ನೇರವಾಗಿ ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿಬಿಟ್ಟಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications