ಕ್ಯಾಬ್ ಚಾಲನೆ ವೇಳೆ ನಿದ್ದೆಗೆ ಶರಣಾದ ಡ್ರೈವರ್, ಮಹಿಳೆ ಮಾಡಿದ್ದೇನು ಗೊತ್ತಾ?
ಡ್ರೈವ್ ಮಾಡುವಾಗ ನಿದ್ದೆ ಮಾಡುವುದು ಬಲು ಅಪಾಯಕಾರಿ. ಆದರೂ ಕೆಲವು ಚಾಲಕರು ಡ್ರೈವ್ ಮಾಡುವಾಗಲೇ ನಿದ್ದೆ ಮಾಡುತ್ತಾರೆ. ಇದರಿಂದ ಹಲವು ಅನಾಹುತಗಳು ಸಂಭವಿಸಿವೆ. ಇದೇ ರೀತಿಯ ಘಟನೆಯೊಂದು 28 ವರ್ಷದ ಮಹಿಳೆಯೊಬ್ಬರಿಗೆ ಎದುರಾಗಿದೆ. ಈ ಮಹಿಳೆ ಆನ್‍ಲೈನ್ ಆ್ಯಪ್ ಮೂಲಕ ಇಂಟರ್‍ಸಿಟಿ ಕ್ಯಾಬ್ ಬುಕ್ ಮಾಡಿದ್ದರು.

ಈ ವೇಳೆ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತೆಂದರೆ, ಭಾರೀ ಪ್ರಮಾಣದ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದವು. ಆದರೆ ಆ ಮಹಿಳೆ ತೋರಿದ ದಿಟ್ಟತನದಿಂದ ಭಾರೀ ಅನಾಹುತವೊಂದು ತಪ್ಪಿದೆ. ತೇಜಸ್ವಿನಿ ದಿವ್ಯ ಎಂಬ ಮಹಿಳೆ ಉಬರ್‍ನ ಇಂಟರ್‍ಸಿಟಿ ಕ್ಯಾಬ್ ಅನ್ನು ಬುಕ್ ಮಾಡಿದ್ದಾರೆ. ಅವರು ಪುಣೆಯಿಂದ ಮುಂಬೈಗೆ ಪ್ರಯಾಣಿಸಬೇಕಿತ್ತು. ತೇಜಸ್ವಿನಿರವರನ್ನು ಅವರಿದ್ದ ಸ್ಥಳದಿಂದ ಡ್ರೈವರ್ ಪಿಕ್ ಮಾಡಿದ್ದಾನೆ. ನಂತರ ಮುಂಬೈನತ್ತ ಹೊರಟಿದ್ದಾನೆ.

ಟ್ರಾಫಿಕ್ ಕಡಿಮೆ ಇರುವ ಸಂದರ್ಭಗಳಲ್ಲಿ ಪುಣೆಯಿಂದ ಮುಂಬೈ ತಲುಪಲು 3 ಗಂಟೆ ಸಮಯ ಬೇಕಾಗುತ್ತದೆ. ಈ ಪ್ರಯಾಣದಲ್ಲಿ ತೇಜಸ್ವಿಸಿರವರು ಹಿಂಭಾಗದ ಸೀಟಿನಲ್ಲಿ ಕುಳಿತಿದ್ದರು. ಸ್ವಲ್ಪ ದೂರ ಚಲಿಸಿದ ನಂತರ ತೇಜಸ್ವಿನಿರವರು ಡ್ರೈವರ್ ನಿದ್ದೆಗೆ ಜಾರುತ್ತಿರುವುದನ್ನು ಗಮನಿಸಿದ್ದಾರೆ. ಕ್ಯಾಬ್ ಡ್ರೈವರ್ ನಿದ್ದೆ ಮಂಪರಿನಲ್ಲಿದ್ದ ಕಾರಣ ಸ್ಟೀಯರಿಂಗ್ ವ್ಹೀಲ್ ಮೇಲೆ ಬೀಳುತ್ತಿದ್ದ.

ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿನಿರವರು ಡ್ರೈವರ್‍ನ ನಿದ್ದೆಯಿಂದಾಗಿ ತಮ್ಮ ಪ್ರಾಣವು ಹೋಗುವುದರಲ್ಲಿತ್ತು ಎಂದು ಹೇಳಿದ್ದಾರೆ. ಇದರಿಂದ ತಮ್ಮ ಹಾಗೂ ಡ್ರೈವರ್ ಇಬ್ಬರ ಜೀವಕ್ಕೂ ಅಪಾಯವಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಡ್ರೈವರ್ ಅನ್ನು ಎಚ್ಚರಿಸಿ ಕ್ಯಾಬ್ ಅನ್ನು ರಸ್ತೆ ಪಕ್ಕ ನಿಲ್ಲಿಸಲು ಹೇಳಿದ್ದಾರೆ.

ನಂತರ ಡ್ರೈವರ್‍ನನ್ನು ಒಪ್ಪಿಸಿ ಸ್ವತಃ ತಾವೇ ಕ್ಯಾಬ್ ಚಾಲನೆ ಮಾಡಲು ಮುಂದಾಗಿದ್ದಾರೆ. ಕ್ಯಾಬ್ ಡ್ರೈವರ್ ಮುಂಭಾಗದ ಸಹ ಚಾಲಕನ ಸೀಟಿನಲ್ಲಿ ನಿದ್ದೆಗೆ ಶರಣಾಗಿದ್ದಾನೆ. ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿನಿರವರು ಪ್ರಯಾಣ ಮುಗಿಯುವವರೆಗೂ ಡ್ರೈವರ್ ನಿದ್ದೆ ಮಾಡುತ್ತಿದ್ದು, ನಾನು ಸೇರಬೇಕಾದ ಸ್ಥಳ ಸೇರಿದ ನಂತರ ಎಚ್ಚರಗೊಂಡಿದ್ದಾನೆ ಎಂದು ಹೇಳಿದ್ದಾರೆ.

ಟ್ವೀಟರ್‍ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿರುವ ತೇಜಸ್ವಿನಿರವರು ಈ ರೀತಿಯ ಘಟನೆಯ ಬಗ್ಗೆ ದೂರು ನೀಡಲು ಉಬರ್ ಯಾವುದೇ ನೇರ ಫೋನ್ ನಂಬರ್ ಅನ್ನು ನೀಡಿಲ್ಲವೆಂದು ತಿಳಿಸಿದ್ದಾರೆ. ನಿದ್ದೆಯಲ್ಲಿರುವ ಚಾಲಕನನ್ನು ಕೆಲಸ ಮಾಡಲು ಅನುಮತಿ ನೀಡಿರುವ ಉಬರ್ ಕಂಪನಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಬರ್ ಕಂಪನಿಯು ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದು, ಈ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡುವಂತೆ ಹೇಳಿದೆ.

ಈ ರೀತಿಯ ಘಟನೆಗಳಿಂದ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವುದು ಖಚಿತ. ಕ್ಯಾಬ್ ಚಾಲನೆ ವೇಳೆ ನಿದ್ದೆ ಮಾಡುವ ಡ್ರೈವರ್‍ಗಳಿರುವುದು ಸಾಮಾನ್ಯವಾಗಿದೆ. ಅದರಲ್ಲೂ ಬೆಳಗಿನ ಜಾವ ಅಥವಾ ರಾತ್ರಿ ವೇಳೆಯಲ್ಲಿ ಈ ರೀತಿಯ ಡ್ರೈವರ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಹೆಚ್ಚು ಸಮಯ ಕ್ಯಾಬ್ ಚಾಲನೆ ಮಾಡುವುದರಿಂದ ಹೆಚ್ಚು ಸಂಪಾದನೆ ಮಾಡುವ ಕಾರಣಕ್ಕೆ ನಿದ್ದೆ ಮಂಪರಿನಲ್ಲಿಯೂ ಕ್ಯಾಬ್ ಚಾಲನೆಗೆ ಮುಂದಾಗುತ್ತಾರೆ.

ನಿದ್ದೆ ಮಂಪರಿನಲ್ಲಿರುವ ಡ್ರೈವರ್‍ಗಳನ್ನು ಪತ್ತೆ ಮಾಡಿ, ಅವರು ಕ್ಯಾಬ್ ಚಾಲನೆ ಮಾಡದಂತೆ ಮಾಡುವ ಯಾವುದೇ ವ್ಯವಸ್ಥೆಯು ಇಲ್ಲ. ಒಂದು ವೇಳೆ ನೀವು ಬೆಳಗಿನ ಜಾವ ಅಥವಾ ತಡ ರಾತ್ರಿಯಲ್ಲಿ ಕ್ಯಾಬ್‍ನಲ್ಲಿ ಓಡಾಡುತ್ತಿದ್ದರೆ, ಸಾಧ್ಯವಾದಷ್ಟು ಚಾಲಕನ ಜೊತೆಗೆ ಮಾತನಾಡುತ್ತಿರಿ. ಇದರಿಂದ ಚಾಲಕನು ನಿದ್ದೆ ಮಾಡುತ್ತಿದ್ದಾನೋ ಇಲ್ಲವೋ ತಿಳಿಯುತ್ತದೆ. ಒಂದು ವೇಳೆ ಡ್ರೈವರ್‍ನ ಜೊತೆಗೆ ಮಾತನಾಡಿಯೂ ಯಾವುದೇ ಪ್ರಯೋಜನವಾಗದಿದ್ದರೆ, ಆ ಟ್ರಿಪ್ ಅನ್ನು ಕ್ಯಾನ್ಸಲ್ ಮಾಡುವುದು ಒಳ್ಳೆಯದು.


Click it and Unblock the Notifications