Expressway: ಕರ್ನಾಟಕದಲ್ಲಿ 3 ಹೊಸ ಎಕ್ಸ್‌ಪ್ರೆಸ್‌ವೇಗಳು ಸಿದ್ಧಗೊಳ್ಳುತ್ತಿವೆ.. ಎಲ್ಲಿಂದ, ಎಲ್ಲಿದೆ?
ದೇಶದ ಪ್ರಗತಿಗೆ ರಸ್ತೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕೇಂದ್ರ ಸರ್ಕಾರವು ವೇಗವಾಗಿ ಎಕ್ಸ್‌ಪ್ರೆಸ್‌ವೇಗಳನ್ನು ಅಧಿವೃದ್ದಿಪಡಿಸುತ್ತಿದೆ. ಕರ್ನಾಟಕದಲ್ಲೂ ಹಲವು ಹೆದ್ದಾರಿಗಳು ನಿರ್ಮಾಣ ಹಂತದಲ್ಲಿವೆ. ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಕೆಲಸಗಳು ಭರದಿಂದ ಸಾಗುತ್ತಿವೆ. ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಸಂಬಂಧ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಅಂತಿಮ ಅನುಮೋದನೆ ಬಾಕಿಯಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway):
ಈ ಹೆದ್ದಾರಿಯು ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. 262 ಕಿ.ಮೀ ಉದ್ದವಿದೆ. ಕರ್ನಾಟಕದಲ್ಲಿ 71 ಕಿ.ಮೀ ಹಾದುಹೋಗುತ್ತದೆ. ರಸ್ತೆ ನಿರ್ಮಾಣದ ಕೆಲಸಗಳು ಪೂರ್ಣಗೊಂಡಿದ್ದು, ವಾಹನಗಳು ಸಂಚಾರ ಮಾಡುತ್ತಿವೆ. ಆದರೆ, ಆಂಧ್ರ ಹಾಗೂ ತಮಿಳುನಾಡು ರಾಜ್ಯದಲ್ಲಿ ಕಾಮಗಾರಿ ಬಾಕಿಯಿದೆ. ಅದು 2026ರ ಮಾರ್ಚ್‌ನೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ರೂ.17,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 4 ಪಥಗಳನ್ನು ಒಳಗೊಂಡಿರಲಿದೆ. ವಾಹನಗಳ ಸಂಖ್ಯೆ ದ್ವಿಗುಣಗೊಂಡರೆ 8 ಪಥಗಳಿಗೆ ವಿಸ್ತರಣೆ ಮಾಡಬಹುದು. ಸದ್ಯ ಇವೆರೆಡು ನಗರಗಳ ನಡುವೆ ಪ್ರಯಾಣ ಮಾಡಲು 5 ರಿಂದ 6 ಗಂಟೆ ಬೇಕಾಗುತ್ತದೆ. ನೂತನ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ, 3 ಗಂಟೆಗಳಲ್ಲಿಯೇ ಬೆಂಗಳೂರಿನಿಂದ ಚೆನ್ನೈಗೆ ತೆರಳಲು ಸಾಧ್ಯವಾಗಲಿದೆ.
ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ (Bengaluru-Vijayawada Expressway):
ಇದು ಪ್ರಮುಖ ಹೆದ್ದಾರಿಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಆಂಧ್ರ ಪ್ರದೇಶದ ಕೃಷ್ಣಾ ನದಿ ದಂಡೆಯಲ್ಲಿರುವ ವಿಜಯವಾಡ ನಗರವನ್ನು ಸಂಪರ್ಕಿಸುತ್ತದೆ. ಬರೋಬ್ಬರಿ 518 ಕಿ.ಮೀ ಉದ್ದವಿದ್ದು, 6 ಪಥಗಳ ರಸ್ತೆ ಇದಾಗಿದೆ. 2027ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದ 3 (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ) ಹಾಗೂ ಆಂಧ್ರ ಪ್ರದೇಶದ 8 (ಶ್ರೀ ಸತ್ಯಸಾಯಿ, ಕಡಪಾ, ಅನಂತಪುರ, ಪ್ರಕಾಶಂ, ಬಾಪಟ್ಲಾ, ಗುಂಟೂರು) ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಇಲ್ಲಿ ವಾಹನಗಳು 120 ಕೆಎಂಪಿಹೆಚ್ ವೇಗದಲ್ಲಿ ಸಂಚರಿಸಲು ಅನುಮತಿ ನೀಡಬಹುದು ಎನ್ನಲಾಗಿದೆ.
ಹೊಸ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಎರಡು ರಾಜ್ಯಗಳ ಆರ್ಥಿಕ ಬೆಳವಣಿಗೆಗೂ ಉತ್ತೇಜನಕಾರಿಯಾಗಿದೆ. ಈ ಹೆದ್ದಾರಿಯನ್ನು ರೂ.19,320 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಇವೆರೆಡು ನಗರಗಳ ಮಧ್ಯೆ ಪ್ರಯಾಣದ ಅವಧಿಯು 12 ರಿಂದ 13 ಗಂಟೆಗಳು ಬೇಕು. ನೂತನ ಎಕ್ಸ್‌ಪ್ರೆಸ್‌ವೇಯಿಂದ ಬೆಂಗಳೂರಿನಿಂದ ವಿಜಯವಾಡಕ್ಕೆ ಕೇವಲ 6 ಗಂಟೆಗಳಲ್ಲಿಯೇ ಹೋಗಬಹುದಾಗಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ (Bengaluru-Pune Expressway):
ಈ ಹೆದ್ದಾರಿಯ ಕಾಮಗಾರಿಯು ಅತಿ ಶೀಘ್ರದಲ್ಲಿ ಶುರುವಾಗುವ ನಿರೀಕ್ಷೆಯಿದೆ. ಕರ್ನಾಟಕದ 9 (ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ) ಮತ್ತು ಮಹಾರಾಷ್ಟ್ರದ 3 ಜಿಲ್ಲೆಗಳನ್ನು (ಸಾಂಗ್ಲಿ, ಸತಾರ, ಪುಣೆ) ಸಂಪರ್ಕಿಸುತ್ತದೆ. ನೂತನ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ರೂ.50,000 ಕೋಟಿಗೂ ಅಧಿಕ ವೆಚ್ಚವಾಗಬಹುದು ಹೆಚ್ಚು ಅಂದಾಜಿಸಲಾಗಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇಗಾಗಿ ಒಟ್ಟು 21,000 ಎಕರೆ ಭೂಮಿಯ ಅಗತ್ಯವಿದೆ. ಕರ್ನಾಟಕದಲ್ಲಿ 12,355 ಎಕರೆ & ಮಹಾರಾಷ್ಟ್ರದಲ್ಲಿ 7,166 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಹೆದ್ದಾರಿ ಕಾಮಗಾರಿ 2028ರ ಅಂತ್ಯದೊಳಗೆ ಪೂರ್ಣಗೊಳ್ಳಬಹುದು ಎನ್ನಲಾಗಿದೆ.
ನೂತನ ಎಕ್ಸ್‌ಪ್ರೆಸ್‌ವೇ ಹಲವು ಫ್ಲೈಓವರ್, ಓವರ್ ಬ್ರಿಡ್ಜ್ ಮತ್ತು ಇಂಟರ್‌ಚೇಂಜ್‌ಗಳನ್ನು ಹೊಂದಿರಲಿದೆ. ಇದು 6 ಪಥಗಳ ಹೆದ್ದಾರಿಯಾಗಿರಲಿದೆ. ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು ಎಂದು ಹೇಳಲಾಗಿದೆ. ಸದ್ಯ, ಬೆಂಗಳೂರು ಹಾಗೂ ಪುಣೆ ನಡುವೆ ಪ್ರಯಾಣದ ಅವಧಿಯು 14 ರಿಂದ 15 ಗಂಟೆಗಳಿವೆ. ಅದು 7 ಗಂಟೆಗಳಿಗೆ ಕಡಿಮೆಯಾಗುವ ಸಾಧ್ಯತೆಯಿದೆ.


Click it and Unblock the Notifications








