Expressway: ಕರ್ನಾಟಕದಲ್ಲಿ ಸಿದ್ಧಗೊಳ್ಳುತ್ತಿರುವ ಹೊಸ ಎಕ್ಸ್‌ಪ್ರೆಸ್‌ವೇಗಳಿವು.. ಭಾರೀ ಇಂಧನ ಉಳಿತಾಯ!
ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರ ಭಾಗವಾಗಿ ಪ್ರಮುಖ ನಗರಗಳನ್ನು ಬೆಸೆಯಲು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಹೊಸ ಹೆದ್ದಾರಿಗಳ ಕಾಮಗಾರಿಯನ್ನು ಭರದಿಂದ ನಡೆಸಲಾಗುತ್ತಿದ್ದು, ಮುಂಬರುವ ಕೆಲವೇ ವರ್ಷಗಳಲ್ಲಿ ಈ ರಸ್ತೆಗಳು ಉದ್ಘಾಟನೆಗೊಳ್ಳಲಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ), ಬೆಂಗಳೂರು ಹಾಗೂ ಪುಣೆ ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಸುಮಾರು 700 ಕಿಲೋಮೀಟರ್ ಉದ್ದವಿರುವ ಈ ಹೆದ್ದಾರಿಯು ಕರ್ನಾಟಕದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸತಾರ, ಸಾಂಗ್ಲಿ, ಪುಣೆ ಜಿಲ್ಲೆಗಳಲ್ಲಿ ಹಾದುಹೋಗಲಿದೆ.

ಬೆಂಗಳೂರು - ಪುಣೆ ಎಕ್ಸ್‌ಪ್ರೆಸ್‌ವೇ (Bengaluru - Pune Expressway)ಯನ್ನು 6 ಪಥದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ವಾಹನಗಳ ದಟ್ಟಣೆಗೆ ತಕ್ಕಂತೆ 8 ಪಥಗಳಿಗೆ ಮೇಲ್ದರ್ಜೆಗೇರಿಸಬಹುದು ಎಂದು ಹೇಳಲಾಗಿದೆ. ಈ ಹೆದ್ದಾರಿಯನ್ನು ಮಾಡಿ ಮುಗಿಸಲು ರೂ.50,000 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದ್ದು, 2028ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ನೂತನ ಎಕ್ಸ್‌ಪ್ರೆಸ್‌ವೇಯಿಂದ ಬೆಂಗಳೂರು-ಪುಣೆ ನಡುವಿನ ಪ್ರಯಾಣದ ಅವಧಿಯು 7 ಗಂಟೆಗೆ ಇಳಿಕೆಯಾಗಲಿದೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಬಹುತೇಕ ಈ ವರ್ಷಾಂತ್ಯದೊಳಗೆ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. 262 ಕಿಮೀ ಉದ್ದದ ಈ ಹೆದ್ದಾರಿಯನ್ನು ಎನ್‌ಎಚ್ಎಐ ಸರಿ ಸುಮಾರು ರೂ.17,000 ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ 4 ಪಥದ ರಸ್ತೆಯನ್ನು ನಿರ್ಮಿಸುತ್ತಿದ್ದು, ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು ಎನ್ನಲಾಗಿದೆ.

ನೂತನ ಬೆಂಗಳೂರು - ಚೆನ್ನೈ ಹೆದ್ದಾರಿಯು ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರಿನ ಮೂಲಕ ಹಾದುಹೊಗಲಿದೆ. ಸುಮಾರು 33 ಕಿಲೋಮೀಟರ್ ಅರಣ್ಯ ಜಾಗವನ್ನು ಮಾತ್ರ ಎಕ್ಸ್‌ಪ್ರೆಸ್‌ವೇಯನ್ನು ಅಭಿವೃದ್ಧಿಪಡಿಸಲು ಬಳಕೆ ಮಾಡಲಾಗಿದ್ದು, ಆ ಕಾರಣಕ್ಕೆ ದೇಶದ ಮೊದಲ 'ಹಸಿರು ಹೆದ್ದಾರಿ' ಎಂಬ ಹೆಗ್ಗಳಿಗೆಯೂ ಪಾತ್ರವಾಗಲಿದೆ. ಪ್ರಯಾಣದ ಅವಧಿಯು 3 ಗಂಟೆಗೆ ಕಡಿಮೆಯಾಗುವ ಸಾಧ್ಯತೆಯಿದೆ.
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಮಾದರಿಯಲ್ಲಿಯೇ ನೆಲಮಂಗಲ ಮತ್ತು ತುಮಕೂರು ಹೆದ್ದಾರಿಯನ್ನು 2025ರ ಡಿಸೆಂಬರ್ ಅಂತ್ಯದೊಳಗೆ ಅಭಿವೃದ್ಧಿಪಡಿಸಲು ಎನ್‌ಎಚ್ಎಐ ಕಾರ್ಯಪ್ರವೃತವಾಗಿದೆ. ಅದರ ಭಾಗವಾಗಿ ಚೊಕ್ಕೇನಹಳ್ಳಿ ಹಾಗೂ ಕುಲುಮೆಪಾಳ್ಯ ಟೋಲ್ ಪ್ಲಾಜಾಗಳನ್ನು ಮುಚ್ಚಿ, ಇದೇ ಹೆದ್ದಾರಿಯಲ್ಲಿರುವ ರಾಯರಪಾಳ್ಯದಲ್ಲಿ ನೂತನ ಟೋಲ್ ಪ್ಲಾಜಾವನ್ನು ತೆರೆಯಲು ಅಣಿಯಾಗುತ್ತಿದೆ. ಜೊತೆಗೆ ಈಗಿರುವ ರಸ್ತೆಯನ್ನು 6 ಪಥಗಳಿಗೆ ವಿಸ್ತರಿಸುವ ಕಾಮಗಾರಿಯು ನಡೆಯುತ್ತಿದೆ.
ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಾಣ ಮಾಡುವುದರಿಂದ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲಿವೆ. ಕರ್ನಾಟಕದಲ್ಲಿ ಬೆಂಗಳೂರು - ಪುಣೆ, ಬೆಂಗಳೂರು - ಚೆನ್ನೈ, ನೆಲಮಂಗಲ ಮತ್ತು ತುಮಕೂರು ನಡುವಿನ ಹೆದ್ದಾರಿಯನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ವಿವಿಧ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬೇಗ ಪ್ರಯಾಣಿಸಲು ಸಾಧ್ಯವಾಗಿರುವುದರಿಂದ ವಾಹನದ ಇಂಧನವು ಉಳಿತಾಯವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications