ಉಪೇಂದ್ರ ಜಾಲಿ ರೈಡ್: ಅಪ್ಪನ 36 ವರ್ಷದ ಹಳೆಯ ಬೈಕ್ ತಂದು ಅಚ್ಚರಿಗೊಳಿಸಿದ ಮಗ!
ನಟ ಉಪೇಂದ್ರ ಯಾರಿಗೆ ಗೊತ್ತಿಲ್ಲ ಹೇಳಿ? ಬಹುಶಃ ಭಾರತೀಯ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಹಿನ್ನೆಲೆ ಗಾಯಕ, ಗೀತರಚನೆಕಾರರಾಗಿ ಕೆಲಸ ಮಾಡಿದ ಕೆಲವೇ ಕಲಾವಿದರಲ್ಲಿ ಉಪೇಂದ್ರ ಕೂಡ ಒಬ್ಬರು ಎಂದರೆ ತಪ್ಪಾಗದು. ಇವಿಷ್ಟು ಸಾಲದೆಂಬಂತೆ ರಾಜ್ಯ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಒಂದು ಕಾಲದ ಮೋಟಾರ್‌ಸೈಕಲ್ ಉತ್ಸಾಹಿ ಕೂಡ ಹೌದು, ಇತ್ತೀಚೆಗೆ ಅವರ ಹಳೆಯ ಮೋಟಾರ್‌ಸೈಕಲ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದು ಕೂಡ ಉಪೇಂದ್ರ ಅವರ ಮಗ ಇದನ್ನು ರಿಸ್ಟೋರ್ ಮಾಡಿಸಿದ್ದಾರೆ ಎನ್ನಲಾಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವೀಡಿಯೊದಲ್ಲಿ, ಉಪೇಂದ್ರ ತಮ್ಮ ಮಗನೊಂದಿಗೆ ಹಳೆಯ ಇಂಡ್ ಸುಜುಕಿ ಎಎಕ್ಸ್ 100 ಮೋಟಾರ್‌ಸೈಕಲ್‌ನಲ್ಲಿ ಕುಳಿತಿ ರೈಡ್ ಆನಂದಿಸುತ್ತಿರುವುದು ಅಭಿಮಾನಿಗಳಲ್ಲಿ ಸಖತ್ ಖುಷಿ ತಂದಿದೆ. ಈ ಮೋಟಾರ್‌ಸೈಕಲ್ ಉಪೇಂದ್ರ ಅವರ 36 ವರ್ಷ ಹಳೆಯ Ind ಸುಜುಕಿ ಬೈಕ್ ಎಂದು ಹೇಳಲಾಗುತ್ತಿದೆ.

ತಮ್ಮ ತಂದೆಯನ್ನು ಅಚ್ಚರಿಗೊಳಿಸಲು ಮಗ ಬೈಕ್ ಅನ್ನು ಸಂಪೂರ್ಣವಾಗಿ ರಿಸ್ಟೋರ್ ಮಾಡಿರಬಹುದು ಎನ್ನಲಾಗಿದೆ. ವಿಡಿಯೋದಲ್ಲಿ ಬೈಕಿನ ಹಿಂಬದಿಯ ಸೀಟಿನಲ್ಲಿ ಉಪೇಂದ್ರ ಕುಳಿತಿರುವುದನ್ನು ನೋಡಬಹುದು, ನಟ ಹೆಲ್ಮೆಟ್ ಧರಿಸಿದ್ದರೇ ಅವರ ಮಗ ಬೈಕ್ ಸವಾರಿ ಮಾಡುತ್ತಿದ್ದರು. ಅವರ ಮಗ ಕೂಡ ಟ್ರಾಫಿಕ್ ನಿಯಮಗಳಂತೆ ಹೆಲ್ಮೆಟ್ ಧರಿಸಿದ್ದರೇ ಉತ್ತಮವಾಗಿರುತ್ತಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಮೋಟಾರ್‌ಸೈಕಲ್ ವಿಶೇಷತೆಗಳು: ವಿಡಿಯೋದಲ್ಲಿ ಕಾಣುವ ಮೋಟಾರ್ ಸೈಕಲನ್ನು ಹಳದಿ ಬಣ್ಣದೊಂದಿಗೆ ಸಿಗ್ನೇಚರ್ ರೆಡ್ ಶೇಡ್‌ನಲ್ಲಿ ಫಿನಿಶ್ ಮಾಡಲಾಗಿದೆ. ಇದು ಭಾರತದಲ್ಲಿ ಬಿಡುಗಡೆಯಾದ ಮೊದಲ 100 ಸಿಸಿ ಮೋಟಾರ್ ಸೈಕಲ್ ಆಗಿದೆ. ಇದು 98-ಸಿಸಿ, ಸಿಂಗಲ್ ಸಿಲಿಂಡರ್, 2-ಸ್ಟ್ರೋಕ್ ಎಂಜಿನ್ ಹೊಂದಿರುವ ಅತ್ಯಂತ ಸರಳವಾಗಿ ಕಾಣುವ ಮೋಟಾರ್ ಸೈಕಲ್.

ಇದರ ಎಂಜಿನ್ 8 ಬಿಹೆಚ್‌ಪಿ ಪವರ್ ಮತ್ತು 9.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 85 ಕಿ.ಮೀಗಳಾಗಿದೆ. ಆಗಿನ ಕಾಲಕ್ಕೆ ಇದು ಬೆಸ್ಟ್ ಆಗಿದ್ದರೂ ಪ್ರತಿಸ್ಪರ್ಧಿಗಳು ಹೆಚ್ಚಾಗುವುದರ ಜೊತೆಗೆ ವಿವಿಧ ಕಾರಣಗಳಿಂದಾಗಿ ಮೋಟಾರ್‌ಸೈಕಲ್ ಅನ್ನು ಸ್ಥಗಿತಗೊಳಿಸಲಾಯಿತು.
ವಿವರವಾಗಿ ಹೇಳುವುದಾದ್ರೆ ಇಂಡ್ ಸುಜುಕಿ ಎಎಕ್ಸ್ 100, ಸುಜುಕಿ ಮೋಟಾರ್ ಕಾರ್ಪೊರೇಷನ್ ಮತ್ತು ಈಗ ಟಿವಿಎಸ್ ಎಂದು ಕರೆಯಲ್ಪಡುವ "ಸುಂದರಂ ಕ್ಲೇಟನ್" ಸಹಭಾಗಿತ್ವದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ಮೋಟಾರ್ ಸೈಕಲ್ ಆಗಿದೆ. ಈ ಮೋಟಾರ್ ಸೈಕಲ್ ಬಿಡುಗಡೆಯಾದಾಗ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು.
ಆದರೆ, ಯಮಹಾದಂತಹ ಪ್ರತಿಸ್ಪರ್ಧಿಗಳು ಆರ್‌ಎಕ್ಸ್ 100 ನಂತಹ ಬೈಕುಗಳೊಂದಿಗೆ ಈ ವಿಭಾಗವನ್ನು ಪ್ರವೇಶಿಸಿದ್ದರಿಂದ ಇಂಡ್ ಸುಜುಕಿ ಎಎಕ್ಸ್ 100 ಗೆ ಬೇಡಿಕೆ ಕುಸಿಯಿತು. ಮೋಟಾರ್ ಸೈಕಲ್ ಉತ್ಪಾದನಾ ವೆಚ್ಚವೂ ಹೆಚ್ಚಿರುವುದರ ಜೊತೆಗೆ ತಯಾರಕರು ಸ್ಪರ್ಧೆಯೊಂದಿಗೆ ಬೆಲೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಬೈಕ್ ಅನ್ನು ಸ್ಥಗಿತಗೊಳಿಸಲಾಯಿತು ಎಂದು ಹೇಳಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications