'ಟ್ರಂಪ್ ಕಾರ್ಡ್' ಪ್ರಯೋಗ; ಅಮೆರಿಕ ಅಧ್ಯಕ್ಷರ ಏರ್ ಫೋರ್ಸ್ ಒನ್ ವಿಮಾನಕ್ಕೆ ಬಿತ್ತು ವಕ್ರದೃಷ್ಟಿ!
ಏರ್ ಫೋರ್ಸ್ ಒನ್ ವಿಮಾನ ನಿರ್ಮಾಣ ಯೋಜನೆಯನ್ನು ಹೊಸತಾಗಿ ಆಯ್ಕೆಯಾಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಮೊಳಗಿಸಿರುವ ಡೋನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇರುವ ಮುಂಚಿತವಾಗಿ ಅತಿ ನಿರ್ಣಾಯಕವಾದ ಘೋಷಣೆಯೊಂದನ್ನು ಮಾಡಿದ್ದಾರೆ. ವೆಚ್ಚ ಕಡಿತದ ಹಿನ್ನಲೆಯಲ್ಲಿ ಭಾವಿ ಅಮೆರಿಕ ಅಧ್ಯಕ್ಷರಿಗೆ ನಿರ್ಮಾಣವಾಗಬೇಕಿರುವ ಏರ್ ಫೋರ್ಸ್ ಒನ್ ವಿಮಾನದ ನಿರ್ಮಾಣ ಯೋಜನೆಯನ್ನು ನಿಲ್ಲುಸುವಂತೆ ಆದೇಶ ಹೊರಡಿಸಿದ್ದಾರೆ.

ಕಾಲ ಕಾಲಕ್ಕೆ ಏರ್ ಫೋರ್ಸ್ ವಿಮಾನವನ್ನು ಬದಲಾಯಿಸುತ್ತಾ ಬಂದಿರುವ ಅಮೆರಿಕ ಅಧ್ಯಕ್ಷರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ಅಧಿಕೃತ ಏರ್ ಫೋರ್ಸ್ ಒನ್ ವಿಮಾನ ನಿರ್ಮಾಣಕ್ಕೆ ಬಿಡ್ ಸಲ್ಲಿಸಲಾಗಿತ್ತು.

ಆದರೆ ಗಮನಾರ್ಹ ಬೆಳವಣಿಗೆಯಲ್ಲಿ ಟ್ವೀಟ್ ಮಾಡಿರುವ ಡೋನಾಲ್ಡ್ ಟ್ರಂಪ್ ಸರಕಾರದ ವೆಚ್ಚ ಕಡಿತದ ಭಾಗವಾಗಿ ಹೊಸತಾದ 747 ಏರ್ ಫೋರ್ಸ್ ಒನ್ ನಿರ್ಮಾಣವನ್ನು ನಿಲ್ಲಿಸುವಂತೆಯೇ ಬೋಯಿಂಗ್ ಗೆ ಸೂಚನೆ ನೀಡಿದ್ದಾರೆ.

ಆರ್ಥಿಕ ಹಿಂಜರಿತದ ಬಳಿಕ ಎಚ್ಚೆತ್ತುಕೊಳ್ಳುತ್ತಿರುವ ಅಮೆರಿಕ ವೆಚ್ಚ ಕಡಿತ ಮಾಡುವ ಬಗ್ಗೆ ನಿಗಾ ವಹಿಸುತ್ತಿದೆ. ಅಧಿಕಾರಕ್ಕೆ ಏರುವ ಮುನ್ನವೇ ಡೋನಾಲ್ಡ್ ಟ್ರಂಪ್ ಈ ನಿಯಮವನ್ನು ಅಕ್ಷರಶ: ಪಾಲಿಸಲು ಆರಂಭಿಸಿದ್ದಾರೆ.

ನೂತನ 747 ಏರ್ ಫೋರ್ಸ್ ಒನ್ ವಿಮಾನವು 4 ಬಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು ದುಬಾರಿಯೆನಿಸುತ್ತದೆ. ಇದನ್ನು ಟ್ರಂಪ್ ಬೊಟ್ಟು ಮಾಡಿ ತೋರಿಸಿದ್ದಾರೆ.

ಮೂರನೇ ತಲೆಮಾರಿನ ಬೋಯಿಂಗ್ ವಿಮಾನವಾಗಿರುವ ಬೋಯಿಂಗ್ 747-8 ವಿಮಾನದ ತಳಹದಿಯಲ್ಲಿ ನೂತನ ಏರ್ ಫೋರ್ಸ್ ಒನ್ ನಿರ್ಮಿಸಬೇಕಾಗಿತ್ತು.

ಎಲ್ಲವೂ ಯೋಜಿತ ರೀತಿಯಲ್ಲಿ ಸಾಗಿದ್ದಲ್ಲಿ ನೂತನ ನೂತನ ಏರ್ ಫೋರ್ಸ್ ವಿಮಾನವು 2024 ವೇಳೆಯಾಗುವಾಗ ಅಮೆರಿಕ ಅಧ್ಯಕ್ಷರಿಗೆ ಗರಿಷ್ಠ ಭದ್ರತಾ ವಲಯವನ್ನು ರೂಪಿಸಬೇಕಿತ್ತು.

ಒಟ್ಟಿನಲ್ಲಿ ಹೊಸ ಏರ್ ಫೋರ್ಸ್ ಒನ್ ವಿಮಾನದಲ್ಲಿ ಟ್ರಂಪ್ ಪ್ರಯಾಣಿಸಲಾರರು ಎಂಬುದು ಖಚಿತಗೊಂಡಿದೆ. ಬಹುಶ: 2020 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ನೇಮಕಗೊಂಡ್ಡಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಗಮನಾರ್ಹ ಮಾರ್ಪಾಡುಗಳೊಂದಿಗೆ ವಿನ್ಯಾಸ ಮಾಡಲಾಗುವ ಏರ್ ಫೋರ್ಸ್ ಒನ್ ವಿಮಾನವು ಕೇವಲ ಅಮೆರಿಕ ಅಧ್ಯಕ್ಷರ ಪಯಣಕ್ಕೆ ಮಾತ್ರ ಸೀಮಿತವಲ್ಲ. ಇದು ಅಮೆರಿಕ ಅಧ್ಯಕ್ಷರ ಸುಸಜ್ಜಿತ ಕಚೇರಿ ಪ್ರದೇಶವಾಗಿದ್ದು, ಆಧುನಿಕ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ಪರಮಾಣು ಸ್ಪೋಟಗೊಂಡರೂ ಸಂಪರ್ಕ ಕಡಿತವಾಗದಂತೆ ನೋಡಿಕೊಳ್ಳುತ್ತದೆ.

ಏರ್ ಫೋರ್ಸ್ ಒನ್ ಜಗತ್ತಿನ ಆಕಾಶದಲ್ಲೂ ಅತ್ಯಂತ ಸುರಕ್ಷಿತ ಭದ್ರತಾ ವಲಯವನ್ನು ಏರ್ಪಡಿಸುತ್ತದೆ. ಇದು ಅಮೆರಿಕ ಅಧ್ಯಕ್ಷರು ಜಗತ್ತಿನಾದ್ಯಂತ ಸಂಚರಿಸಲು ನೆರವಾಗುತ್ತದೆ.

ಏರ್ ಫೋರ್ಸ್ ವಿಮಾನದಲ್ಲಿ ಸುಸಜ್ಜಿತ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ. ಇನ್ನು ಇಡೀ ದೇಶವನ್ನೇ ಉದ್ದೇಶಿಸಿ ಮಾತನಾಡಬಹುದಾಗಿದೆ

ಡೈರಕ್ಟರ್ ಇನ್ಫ್ರಾರೆಡ್ ಕೌಂಟರ್ ಮೆಷರ್ (ಡಿಐಆರ್‌ಸಿಎಂ) ರಕ್ಷಣಾ ವ್ಯವಸ್ಥೆಯನ್ನು ಇದರಲ್ಲಿ ಆಳವಡಿಸಲಾಗಿದೆ. ಇದು ಮಿಸೈಲ್ ದಾಳಿಯನ್ನೇ ಎದುರಿಸುವಷ್ಟು ಶಕ್ತವಾಗಿದೆ.

ಇದರಲ್ಲಿ ಮಿಸೈಲ್ ದಾಳಿ ವೇಳೆ ವಿಭಿನ್ನ ಜಾಮಿಂಗ್ ಹಾಗೂ ದಿಕ್ಕು ತಪ್ಪಿಸುವ ಕ್ರಮಾವಳಿಗಳನ್ನು ಅನುಸರಿಸಲಾಗಿದೆ.

ಅಂದ ಹಾಗೆ ಏರ್ ಫೋರ್ಸ್ ಒನ್ ಎಂಬುದು ಅಮೆರಿಕ ಅಧ್ಯಕ್ಷರು ಅಧಿಕೃತ ವಾಯುಮಾನ ಸಂಚಾರ ನಿಯಂತ್ರಣಾ ಕರೆಯ ಸಂಕೇತವಾಗಿದೆ. ಇದು ಅಮೆರಿಕ ಅಧ್ಯಕ್ಷರ ಅಧಿಕಾರದ ಸಂಕೇತವೂ ಹೌದು.

ಏತನ್ಮಧ್ಯೆ ಖಾಸಗಿ ಸಂಚಾರಕ್ಕಾಗಿ 'ಟ್ರಂಪ್ ಫೋರ್ಸ್ ಒನ್' ಎಂಬ ವಿಮಾನವನ್ನು ಬಳಕೆ ಮಾಡುತ್ತಿದ್ದಾರೆ. ಇದು ವೈಶಿಷ್ಟ್ಯ ಮತ್ತು ಸುರಕ್ಷತೆಯ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನ 'ಏರ್ ಫೋರ್ಸ್ ಒನ್' ಗಿಂತಲೂ ಕಮ್ಮಿಯೇನಲ್ಲ ಎಂಬುದು ಅಷ್ಟೇ ಪ್ರಾಮುಖ್ಯ ಗಿಟ್ಟಿಸಿಕೊಳ್ಳುತ್ತದೆ.


Click it and Unblock the Notifications








