ಇಸ್ರೋ ಏಳಿಗೆಯನ್ನು ತಡೆಯಲು ಅಮೆರಿಕ ಹುನ್ನಾರ?
ಬಾಹ್ಯಾಕಾಶ ವಿಭಾಗದಲ್ಲಿ ನಾಸಾವನ್ನೇ ಹಿಮ್ಮೆಟ್ಟಿಸುವ ರೀತಿಯಲ್ಲಿ ಬೆಳೆದು ನಿಂತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಸಾಲು ಸಾಲು ಉಪಗ್ರಹಗಳನ್ನು ಯಶಸ್ವಿ ಉಡಾವಣೆ ಮಾಡುವ ಮೂಲಕ ಇಡೀ ದೇಶಕ್ಕೆ ಹೆಮ್ಮೆ ತಂದಿತ್ತಿದೆ.
Also Read: ಭಾರತೀಯ ನಾಗರಿಕ ಮಿಲಿಟರಿ ಬಳಕೆಗಾಗಿ ನೂತನ ದಿಕ್ಸೂಚಿ
ಇದುವರೆಗೆ 45 ಹೆಚ್ಚು ವಿದೇಶಿ ಉಪಗ್ರಹಗಳನ್ನು ಬಿಡುಗಡೆ ಮಾಡಿರುವ ಇಸ್ರೋ ತನ್ಮೂಲಕ 700 ಕೋಟಿ ರುಪಾಯಿಗಿಂತಲೂ ಹೆಚ್ಚು ಆದಾಯವನ್ನು ಸಂಪಾದಿಸಿದೆ. 19ಕ್ಕೂ ಹೆಚ್ಚು ರಾಷ್ಟ್ರಗಳ ಉಪಗ್ರಹಗಳನ್ನು ಉಡಾವಣೆ ಮಾಡಿರುವ ಕೀರ್ತಿ ಇಸ್ರೋದ ಪಿಎಸ್‌ಎಲ್‌ವಿಗೆ ಸಲ್ಲುತ್ತದೆ.

ಈ ನಡುವೆ ನೂತನ ಇತಿಹಾಸ ಬರೆಯಲು ಹೊರಟಿರುವ ಇಸ್ರೋ ಮುಂಬರುವ ಮೇ ತಿಂಗಳಲ್ಲಿ ಏಕಕಾಲಕ್ಕೆ 22 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇವುಗಳಲ್ಲಿ ಅಮೆರಿಕ, ಕೆನಡಾ, ಇಂಡೋನೇಷ್ಯಾ ಮತ್ತು ಜರ್ಮನಿಗೆ ಸೇರಿದ ಮೈಕ್ರೋ ಹಾಗೂ ನ್ಯಾನೋ ಉಪಗ್ರಹಗಳು ಸೇರಿವೆ.

ಈ ಹಿಂದೆ 2015 ಸೆಪ್ಟೆಂಬರ್ ನಲ್ಲಿ ಅಮೆರಿಕ ಉಪಗ್ರಹವನ್ನು ಭಾರತ ಮೊದಲ ಬಾರಿಗೆ ಉಡಾವಣೆಗೊಳಿಸಿತ್ತು. ಈ ವೇಳೆಯಲ್ಲಿ ಇತರೆ ಅಮೆರಿಕ ಸಂಸ್ಥೆಗಳು ಇಸ್ರೊ ನೆರವಿನಿಂದ ಮತ್ತಷ್ಟು ಉಪಗ್ರಹಗಳನ್ನು ಬಿಡುಗಡೆಗೊಳಿಸಲು ಆಸಕ್ತಿ ತೋರಿದ್ದವು.

ತದಾ ಬೆನ್ನಲ್ಲೇ ಅಚಾನಕ್ ಬೆಳವಣಿಗೆಯಲ್ಲಿ ಅಮೆರಿಕದ ವಾಣಿಜ್ಯ ಉಪಗ್ರಹಗಳು ಭಾರತೀಯ ಮೂಲದ ಪಿಎಸ್‌ಎಲ್‌ವಿ ಸೇವೆಯನ್ನು ಬಳಕೆ ಮಾಡಬಾರದೆಂದು ಅಮೆರಿಕ ಸಾರಿಗೆ ಇಲಾಖೆಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಸಲಹೆ ನೀಡಿತ್ತು.

ಬಾಹ್ಯಾಕಾಶಕ್ಕೆ ಉಪಗ್ರಹ ಉಡಾವಣೆ ವಿಭಾಗದಲ್ಲಿ ಶಿಪ್ರ ಗತಿಯಲ್ಲಿ ಭಾರತ ಬೆಳೆದು ಬರುತ್ತಿರುವುದನ್ನು ಮನಗಂಡಿರುವ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಭಾರತೀಯ ಸರಕಾರದ ಸೇವೆಯನ್ನು ಬಳಕೆ ಮಾಡದಂತೆ ಶಿಫಾರಸುಗೈದಿದೆ.

ವಾಣಿಜ್ಯ ಬಾಹ್ಯಾಕಾಶ ಸಾರಿಗೆ ಸಲಹಾ ಸಮಿತಿಯ (COMSTAC) ನಿರ್ಧಾರವನ್ನು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಎತ್ತಿ ಹಿಡಿದಿತ್ತು. ಪ್ರಮುಖವಾಗಿಯೂ ಬಾಹ್ಯಾಕಾಶ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭಾರತೀಯ ಏಳಿಗೆಯನ್ನು ತಡೆಯುವ ಹುನ್ನಾರ ಇದಾಗಿದೆ.

ತಮ್ಮ ನೀತಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ರಾಕೆಟ್ ಬೆಲೆಗೆ ಸಂಬಂಧಪಟ್ಟಂತೆ ವಾಣಿಜ್ಯ ಬಾಹ್ಯಾಕಾಶ ಲಾಂಚ್ ಒಪ್ಪಂದಕ್ಕೆ (CSLA) ಸಹಿ ಹಾಕಲು ಭಾರತ ನಿರಾಕರಿಸುವುದನ್ನು ಬೊಟ್ಟು ಮಾಡಿ ತೋರಿಸಿದೆ.

ಇದಕ್ಕೂ ಮೊದಲು ಭಾರತದಲ್ಲಿರುವ ಅಮೆರಿಕ ರಾಯಭಾರಿ ಇಸ್ರೋ ಕಾರ್ಯ ಸಾಧನೆಯನ್ನು ಮೆಚ್ಚಿಕೊಂಡಿದ್ದರು. ಇದರಿಂದಾಗಿ ಭಾರತದಲ್ಲಿರುವ ಅಮೆರಿಕ ನಿಯೋಗ ಮತ್ತು ಅಲ್ಲಿನ ಆಡಳಿತ ದ್ವಂದ ಹೇಳಿಕೆಯನ್ನು ನೀಡಿರುವುದು ಅನುಮಾನವನ್ನುಂಟು ಮಾಡಿದೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ತೀವ್ರತರಹದ ಪೈಪೋಟಿಗೆ ಇದು ವೇದಿಕೆಯೊದಗಿಸಲಿದೆ.

ಇತಿಹಾಸ ಬರೆಯಲಿರುವ ಇಸ್ರೋ; ಏಕಕಾಲಕ್ಕೆ 22 ಉಪಗ್ರಹ ಉಡಾವಣೆ
ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ


Click it and Unblock the Notifications








