Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮತ್ತೆ ಕಲ್ಲು ತೂರಾಟ.. ಅದೇಕೋ ಗಂಭೀರವಾಗುತ್ತಿದೆ!
ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮೇಲೆ ಕಲ್ಲು ತೂರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸೋಮವಾರ ಮಧ್ಯಾಹ್ನ ದೆಹಲಿ - ಭೋಪಾಲ್ ನಡುವೆ ಸಂಚಾರಿಸುವ ಈ ರೈಲು ಕಲ್ಲು ತೂರಾಟದಿಂದ ಹಾನಿಗೊಳಗಾಗಿದ್ದು, ಐದು ತಿಂಗಳಲ್ಲಿ ವರದಿಯಾದ ಆರನೇ ಪ್ರಕರಣ ಇದಾಗಿದೆ.
ದೆಹಲಿಯಿಂದ ಭೋಪಾಲ್‌ಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮಥುರಾ ಜಿಲ್ಲೆಯ ಓಖ್ಲಾ ನಿಲ್ದಾಣದ ಸಮೀಪ ಕಲ್ಲು ತೂರಾಟ ನಡೆಸಲಾಗಿದೆ. ಸಿ - 5 ಮತ್ತು ಇ - 1 ಎಂಬ ಎರಡು ಕೋಚ್‌ಗಳ ಕಿಟಕಿ ಗಾಜುಗಳು ಡ್ಯಾಮೇಜ್ ಆಗಿವೆ. ಪ್ರಯಾಣಿಕರು ಭಯಭೀತರಾಗಿದ್ದು, ಘಟನೆ ಸಂಬಂಧ ರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಗ್ರಾ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಶ್ರೀವಾಸ್ತವ ಅವರು, 'ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಆರ್‌ಪಿಎಫ್ ಕೋಸಿಕಲನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಆಗ್ರಾ ಕ್ಯಾಂಟ್ ನಿಲ್ದಾಣ ತಲುಪಿದಾಗ ಬಿರುಕು ಬಿಟ್ಟಿದ್ದ ಗಾಜುಗಳನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಲಾಯಿತು' ಎಂದು ಹೇಳಿದ್ದಾರೆ.
ಸದ್ಯ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಕಳೆದ ಐದು ತಿಂಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹಾನಿಗೊಳಗಾದ 40 ಕಿಟಕಿ ಹಾಗೂ ಬಾಗಿಲಿನ ಗಾಜುಗಳನ್ನು ಬದಲಾಯಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ದೆಹಲಿ - ಆಗ್ರಾ ಮಾರ್ಗದಲ್ಲಿ ಸಂಚರಿಸುವ ಈ ರೈಲಿನ ಮೇಲೆಯೇ ಬಹುತೇಕ ಕಲ್ಲು ತೂರಾಟಗಳು ನಡೆದಿವೆ.
ಕೆಲವೇ ದಿನಗಳ ಹಿಂದೆ, ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಟಕಾರ ಎಂಬಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ರೈಲಿನ ಸಿ - 8 ಕೋಚ್‌ನ ಗಾಜುಗಳು ಜಖಂಗೊಂಡಿದ್ದವು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿರಲಿಲ್ಲ. ರೈಲ್ವೆ ಪೊಲೀಸರು ತನಿಖೆ ಶುರು ಮಾಡಿದ್ದರು.
ಅದಕ್ಕೂ ಮುನ್ನ, ಕಣ್ಣೂರು ಜಿಲ್ಲೆಯಲ್ಲಿ ಮಂಗಳೂರು - ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ನೇತ್ರಾವತಿ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಆ ಘಟನೆಯಲ್ಲಿ ಎಸಿ ಬೋಗಿಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದ್ದವು. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಭೋಪಾಲ್ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆಯೂ ಕಲ್ಲು ತೂರಾಟ ನಡೆದಿತ್ತು. ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದರು.
ಕರ್ನಾಟಕದಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣ ವರದಿಯಾಗಿತ್ತು. ಜೂನ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಧಾರವಾಡ - ಬೆಂಗಳೂರು ವಂದೇ ಭಾರತ್ ರೈಲಿಗೆ ಸಂಚಾರ ಆರಂಭಿಸಿ, ಕೆಲವೇ ದಿನದಲ್ಲಿ ದಾವಣಗೆರೆ ನಿಲ್ದಾಣದ ಸಮೀಪ ಕಲ್ಲು ತೂರಾಟ ಮಾಡಲಾಗಿತ್ತು. ಇದರಿಂದ ಸಿ - 4 ಕಿಟಕಿಗೆ ಹಾನಿಯಾಗಿತ್ತು. ಪ್ರಯಾಣಿಕರು ಯಾವುದೇ ರೀತಿಯಲ್ಲಿ ಗಾಯಗೊಂಡಿರಲ್ಲ.
ಇನ್ನು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದ ರೈಲ್ವೆ ವಲಯದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇವು, ಸಾಮಾನ್ಯ ಎಕ್ಸ್‌ಪ್ರೆಸ್ ಗಳಿಗಿಂತ ಗರಿಷ್ಠ ವೇಗದಲ್ಲಿ ಸಂಚರಿಸುವುದರಿಂದ ನಿಗದಿತ ನಿಲ್ದಾಣವನ್ನು ಒಂದಷ್ಟು ಗಂಟೆ ಬೇಗನೇ ತಲುಪುತ್ತವೆ. ಸ್ವಯಂ ಚಾಲಿತ ಬಾಗಿಲು, ಸಂಪೂರ್ಣ ಎಸಿ ವ್ಯವಸ್ಥೆ ಹೊಂದುವ ಮೂಲಕ ಪ್ರೀಮಿಯಂ ರೈಲು ಎಂಬ ಹೆಗ್ಗಳಿಕೆಗೆ ವಂದೇ ಭಾರತ್ ಪಾತ್ರವಾಗಿವೆ. ಆದರೆ, ಪದೇ - ಪದೇ ಈ ರೀತಿಯ ಕಲ್ಲು ತೂರಾಟ ಕೇಸ್ ವರದಿಯಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ಮೂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications