Vande Bharat Express: ಬೆಂಗಳೂರಿನಿಂದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುವವರಿಗೆ ಸಿಹಿಸುದ್ದಿ
ಕರ್ನಾಟಕವು ಒಳಗೊಂಡಂತೆ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಹೈ-ಸ್ವೀಡ್ ರೈಲಾಗಿ ಖ್ಯಾತಿ ಗಳಿಸಿದ್ದು, ಪ್ರಯಾಣಿಕರನ್ನು ವೇಗವಾಗಿ ಗಮ್ಯ ಸ್ಥಾನಕ್ಕೆ ತಲುಪಿಸುತ್ತದೆ. ಕೊಯಮತ್ತೂರು ಜಂಕ್ಷನ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಸಂಚರಿಸುವ ಈ ರೈಲಿನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ದೊರೆತಿದೆ.
ಕೊಯಮತ್ತೂರು ಜಂಕ್ಷನ್ (Coimbatore Junction) ಹಾಗೂ ಬೆಂಗಳೂರು ಕಂಟೋನ್ಮೆಂಟ್ (Bengaluru Cantonment) ಮಧ್ಯೆ ಓಡಾಟ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದರು. ಇದನ್ನು ರೈಲ್ವೆ ಇಲಾಖೆಯು ಪುರಸ್ಕರಿಸಿದ್ದು, ಈ ರೈಲು ಹೊರಡುವ ಸಮಯವನ್ನು ಪರಿಷ್ಕರಿಸಿದೆ. ನೂತನ ವೇಳಾಪಟ್ಟಿ ಮಾರ್ಚ್ 11, 2024ರಿಂದ ಜಾರಿಗೆ ಬಂದಿದೆ.

ಕೊಯಮತ್ತೂರಿನಿಂದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 5 ಗಂಟೆಗೆ ಬದಲಾಗಿ, ಮುಂಜಾನೆ 7.25ಕ್ಕೆ ಹೊರಟು ಮಧ್ಯಾಹ್ನ 1.50ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2.20ಕ್ಕೆ ಸಂಚಾರವನ್ನು ಆರಂಭಿಸಿ, ರಾತ್ರಿ 8.45ರ ಸುಮಾರಿಗೆ ಕೊಯಮತ್ತೂರು ಜಂಕ್ಷನ್ ತಲುಪುತ್ತದೆ. ವೇಳಾಪಟ್ಟಿ ಬದಲಾದ ಹಿನ್ನೆಲೆ ರೈಲ್ವೆ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ರಂದು ಅಯೋಧ್ಯೆಯ ನೂತನ ರೈಲ್ವೆ ನಿಲ್ದಾಣದಲ್ಲಿ ಈ ಕೊಯಮತ್ತೂರು-ಬೆಂಗಳೂರು ಸೇರಿದಂತೆ ಮಂಗಳೂರು-ಮಡ್‌ಗಾಂವ್, ಅಯೋಧ್ಯೆ-ಆನಂದವಿಹಾರ್, ನವದೆಹಲಿ-ವೈಷ್ಣೋದೇವಿ ನಡುವೆ ಓಡಾಡುವ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು, ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ಮತ್ತು ದೆಹಲಿ-ದರ್ಬಂಗಾ ಮಧ್ಯೆ ಸಂಚರಿಸಲಿರುವ 2 ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು.

ಕರ್ನಾಟಕದ ಮತ್ತೊಂದು ಮಾರ್ಗದಲ್ಲಿಯೂ ಶೀಘ್ರದಲ್ಲಿಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಬೆಳಗಾವಿ ಹಾಗೂ ಪುಣೆ ನಡುವೆ ಈ ರೈಲನ್ನು ಓಡಿಸಲು ತಾತ್ವಿಕ ಅನುಮತಿ ನೀಡಿದ್ದಾರೆ. ಬೆಳಗಾವಿ ಹಾಗೂ ಪುಣೆ ನಡುವಿನ ಹಳಿಗಳಲ್ಲಿ ವಿದ್ಯುದ್ದೀಕರಣ ಕಾಮಗಾರಿಯನ್ನು ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಚರಣೆ ನಡೆಸುವ ಸಾಧ್ಯತೆಯಿದೆ.
ಮತ್ತೊಂದೆಡೆ ಕರಾವಳಿ ಭಾಗದ ಜನರಿಗೂ ಸಿಹಿಸುದ್ದಿ ದೊರೆತಿದ್ದು, ತಿರುವನಂತಪುರಂ - ಕಾಸರಗೋಡು ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರಿನವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಅನುಮೋದನೆ ಕೊಟ್ಟಿದೆ. ಈ ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05ಕ್ಕೆ ತಿರುವನಂತಪುರವನ್ನು ತಲುಪಲಿದೆ. ಅಲ್ಲಿಂದ ಸಂಜೆ 4.05ಕ್ಕೆ ಕಾರ್ಯಚರಣೆಯನ್ನು ಆರಂಭಿಸಿ ರಾತ್ರಿ 12.40ಕ್ಕೆ ಮಂಗಳೂರಿಗೆ ಬರಲಿದೆ.
ಚೆನ್ನೈ-ಬೆಂಗಳೂರು-ಮೈಸೂರು, ಬೆಂಗಳೂರು-ಹುಬ್ಬಳ್ಳಿ-ಧಾರವಾಡ, ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟವನ್ನು ನಡೆಸುತ್ತಿದ್ದು, ವಿಶ್ವದರ್ಜೆಯ ಸೌಕರ್ಯವನ್ನು ಹೊಂದಿದೆ. ಜೊತೆಗೆ ಗರಿಷ್ಠ ವೇಗದಲ್ಲಿ ಸಂಚರಿಸಲಿದ್ದು, ಆರಾಮದಾಯ ಆಸನಗಳು ಸಂಪೂರ್ಣ ಹವಾ ನಿಯಂತ್ರಿತ ಬೋಗಿ, ವೈಫೈ, ಜೈವಿಕ ಶೌಚಾಲಯ, ಸ್ವಯಂ ಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications