Vande Bharat Express: ಕರ್ನಾಟಕಕ್ಕೆ ಶೀಘ್ರ 4ನೇ ವಂದೇ ಭಾರತ್, ಕರಾವಳಿ ಜನರಿಗೆ ಸಿಹಿಸುದ್ದಿ!
ಕರ್ನಾಟಕ (Karnataka) ಶೀಘ್ರದಲ್ಲೇ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಸಾಕ್ಷಿಯಾಗಲಿದ್ದು, ಕೆಲವೇ ದಿನಗಳಲ್ಲಿ ಕರಾವಳಿ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಗಲಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಮಂಗಳೂರು (Mangalore) ಹಾಗೂ ಗೋವಾ (Goa) ನಡುವೆ ಈ ರೈಲು ಕಾರ್ಯಾಚರಣೆಯನ್ನು ಶುರು ಮಾಡುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಅಕ್ಟೋಬರ್ ತಿಂಗಳೊಳಗೆ ಮಂಗಳೂರು, ಗೋವಾ ಮಧ್ಯೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸಲಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಜೊತೆಯಲ್ಲಿ ಮಂಗಳೂರು - ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಓಡಾಟಕ್ಕೂ ಅನುಮತಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸಬೇಕೆಂಬುದು ಕರಾವಳಿ ಭಾಗದ ಜನರ ಆಶಯವಾಗಿದೆ. ಆದರೆ, ಕೆಲವಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಶುಕ್ರವಾರ ಹೊರತುಪಡಿಸಿ, ವಾರದ ಎಲ್ಲ ದಿನವೂ ಕಾರ್ಯಾಚರಣೆ ನಡೆಸುತ್ತಿದೆ. ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಮಂಗಳೂರು ಜಂಕ್ಷನ್ ನಿಲ್ದಾಣ ತಲುಪುತ್ತದೆ.
ಇಂದಿನಿಂದ ರಾಜ್ಯವು ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಾಕ್ಷಿಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಕಾರ್ಯಾಚರಣೆ ನಡೆಸುವ ಈ ರೈಲು, ಸೆಪ್ಟೆಂಬರ್ 25 (ಭಾನುವಾರ) ದಿಂದ ಅಧಿಕೃತವಾಗಿ ಓಡಾಟವನ್ನು ಆರಂಭಿಸಲಿದ್ದು, ದಕ್ಷಿಣ ಮಧ್ಯ ರೈಲ್ವೆ (SCR) ಈ ರೈಲನ್ನು ನಿರ್ವಹಣೆ ಮಾಡಲಿದೆ.
ಈಗಾಗಲೇ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಮುಗಿದಿದೆ. ಸದ್ಯ ಲಭ್ಯವಾಗಿರುವ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ಬೆಳಗ್ಗೆ 5.30ಕ್ಕೆ ಕಾಚಿಗುಡ ರೈಲು ನಿಲ್ದಾಣದಿಂದ ಹೊರಡುವ ರೈಲು (ಸಂಖ್ಯೆ - 20703), ಮಧ್ಯಾಹ್ನ 2 ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಇಲ್ಲಿಂದ ಮಧ್ಯಾಹ್ನ 2.45ಕ್ಕೆ ಪುನಃ ಸಂಚಾರ ಆರಂಭಿಸುವ ರೈಲು (ಸಂಖ್ಯೆ - 20704), ರಾತ್ರಿ 11.15ಕ್ಕೆ ಕಾಚಿಗುಡವನ್ನು ಮುಟ್ಟಲಿದೆ.
ಬೆಂಗಳೂರು ಹಾಗೂ ಹೈದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನೊಂದಿಗೆ ಉದಯಪುರ - ಜೈಪುರ, ತಿರುನೆಲ್ವೇಲಿ - ಮಧುರೈ - ಚೆನ್ನೈ, ಹೈದರಾಬಾದ್ - ಬೆಂಗಳೂರು, ವಿಜಯವಾಡ - ಚೆನ್ನೈ ಪಾಟ್ನಾ - ಹೌರಾ, ಕಾಸರಗೋಡು - ತಿರುವನಂತಪುರ; ರೂರ್ಕೆಲಾ - ಭುವನೇಶ್ವರ - ಪುರಿ, ರಾಂಚಿ - ಹೌರಾ, ಮತ್ತು ಜಾಮ್‌ನಗರ - ಅಹಮದಾಬಾದ್ ರೈಲುಗಳು ಕಾರ್ಯಾಚರಣೆ ಶುರು ಮಾಡಲಿವೆ.
ಪ್ರಸ್ತುತ, ಕರ್ನಾಟಕದ ಎರಡು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಒಂದು ರೈಲು ಓಡಾಟ ಮಾಡುತ್ತಿದೆ. ಮತ್ತೊಂದು, ಬೆಂಗಳೂರು - ಹುಬ್ಬಳ್ಳಿ - ಧಾರವಾಡ ಮಧ್ಯೆ ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿ ಸಂಚಾರ ನಡೆಸುತ್ತಿದೆ. ಪ್ರಯಾಣದ ಅವಧಿ ಕೇವಲ 7 ಗಂಟೆ ಮಾತ್ರವಿದೆ.
ಇನ್ನು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರೀಮಿಯಂ ಹೈಸ್ವೀಡ್ ರೈಲುಗಳಾಗಿದ್ದು, ಸಾಕಷ್ಟು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿವೆ. ಪ್ರಮುಖವಾಗಿ ಸಂಪೂರ್ಣವಾಗಿ ಎಸಿ ವ್ಯವಸ್ಥೆ ಇದ್ದು, ಸ್ವಯಂಚಾಲಿತ ಬಾಗಿಲು, ವೈಫೈ ವ್ಯವಸ್ಥೆ ಹಾಗೂ ಅಗ್ನಿ ನಿರೋಧಕ ಸಾಧನಗಳನ್ನು ಒಳಗೊಂಡಿದೆ. ರೈಲ್ವೆ ಇಲಾಖೆಯೂ ದೂರದ ಪ್ರಯಾಣಗಳಿಗೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications