Vande Bharat: ಮಧ್ಯಮ ವರ್ಗದವರ ಐರಾವತ.. ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಹೊಸ ಮೈಲಿಗಲ್ಲು ನಿರ್ಮಾಣ!
ದೇಶಾದ್ಯಂತ ಅತಿವೇಗದ ರೈಲುಗಳಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಭಾರತೀಯ ರೈಲ್ವೆ (Indian Railway) ನಿರ್ವಹಿಸುತ್ತಿರುವ ಈ ರೈಲುಗಳು, ಪ್ರಯಾಣಿಕರ ಓಡಾಟದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಾಣ ಮಾಡಿವೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಆರಂಭವಾದಾಗಿನಿಂದ ಈ ವರ್ಷದ ಮಾರ್ಚ್ 31ರ ಅಂತ್ಯದವರೆಗೆ 2 ಕೋಟಿಗೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ. ನವದೆಹಲಿ (New Delhi) ಮತ್ತು ವಾರಣಾಸಿ (Varanasi) ನಡುವೆ ಫೆಬ್ರವರಿ 15, 2019ರಂದು ಮೊದಲ ವಂದೇ ಭಾರತ್ ರೈಲು ತನ್ನ ಓಡಾಟವನ್ನು ಶುರು ಮಾಡಿತ್ತು.

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು, ಭಾರತೀಯ ರೈಲ್ವೆ ಇಲಾಖೆಯು ಆಧುನೀಕರಣವಾಗುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ದೇಶದ ನಾನಾ ಭಾಗಗಳ 100 ಮಾರ್ಗದಲ್ಲಿ 102 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡಾಟವನ್ನು ನಡೆಸುತ್ತಿದ್ದು, 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 284 ಜಿಲ್ಲೆಗಳನ್ನು ಸಂಪರ್ಕಿಸುತ್ತಿವೆ.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, 2023 - 24ರ ಹಣಕಾಸು ವರ್ಷದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕ್ರಮಿಸಿದ ದೂರವು ನಮ್ಮ ಭೂಮಿಗೆ 310 ಸುತ್ತುಗಳನ್ನು ಹಾಕಿರುವುದಕ್ಕೆ ಸಮನಾಗಿದೆ. ಈ ರೈಲುಗಳು ಸಾಕಷ್ಟು ಅತ್ಯಾಧುನಿಕ ಸೌಕರ್ಯವನ್ನು ಹೊಂದಿದ್ದು, ಗರಿಷ್ಠ ವೇಗದಲ್ಲಿ ಸಂಚರಿಸಿ ಪ್ರಯಾಣಿಕರನ್ನು ಕಡಿಮೆ ಸಮಯದಲ್ಲಿ ನಿರ್ದಿಷ್ಟ ಗಮ್ಯ ಸ್ಥಾನಕ್ಕೆ ತಲುಪಿಸುತ್ತವೆ.

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸೀಟುಗಳು ಹೆಚ್ಚು ಆರಾಮದಾಯಕವಾಗಿವೆ. ಸಂಪೂರ್ಣ ಹವಾ ನಿಯಂತ್ರಣ ಬೋಗಿಗಳು, ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒಳಗೊಂಡಿವೆ. ಕರ್ನಾಟಕದ ವಿವಿಧ ಮಾರ್ಗದಲ್ಲಿಯೂ ವಂದೇ ಭಾರತ್ ರೈಲುಗಳು ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿವೆ.
ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ನವೆಂಬರ್ 2022ರಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚಾರವನ್ನು ಆರಂಭಿಸಿತ್ತು. ಈಗ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಇನ್ನೊಂದು ವಂದೇ ಭಾರತ್ ರೈಲು ಕೂಡ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ, ಕಲಬುರಗಿ-ಬೆಂಗಳೂರು, ಕಾಚಿಗುಡ (ಹೈದರಾಬಾದ್) ಮತ್ತು ಯಶವಂತಪುರ (ಬೆಂಗಳೂರು), ಕೊಯಮತ್ತೂರು-ಬೆಂಗಳೂರು ಕಂಟೋನ್ಮೆಂಟ್, ಮಂಗಳೂರು-ಮಡಗಾಂವ್ ಮಧ್ಯೆಯೂ ಈ ರೈಲುಗಳು ಓಡಾಟವನ್ನು ಮಾಡುತ್ತಿವೆ.
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಂದೇ ಭಾರತ್ ಸ್ಲೀಪರ್ (Vande Bharat sleeper) ಮತ್ತು ವಂದೇ ಮೆಟ್ರೋ (Vande Metro) ರೈಲುಗಳನ್ನು ಅಭಿವೃದ್ಧಿಪಡೆಸುತ್ತಿದೆ. ಈ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರದಲ್ಲಿಯೇ ಸಂಚಾರವನ್ನು ಆರಂಭಿಸುವ ಸಾಧ್ಯತೆಯಿದೆ. ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದೆ. ಅದರಲ್ಲಿ 823 ಬರ್ತ್‌ಗಳನ್ನು ಒಳಗೊಂಡಿರಲಿದ್ದು, ಪ್ರಯಾಣಿಕರಿಗೆ ವಿಮಾನದಂತಹ ಸೌಕರ್ಯವನ್ನು ಒದಗಿಸಲಿದೆ.
ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಮೆಟ್ರೋ ರೈಲನ್ನು ತಯಾರಿಸಲಾಗುತ್ತಿದ್ದು, 16 ಕೋಚ್‌ಗಳನ್ನು ಪಡೆದಿರುವ ಮೊದಲ ವಂದೇ ಮೆಟ್ರೋ ರೈಲು ಮೇ ತಿಂಗಳೊಳಗೆ ಸಿದ್ದವಾಗಲಿದೆ ಎಂದು ವರದಿಯಾಗಿದೆ. ಈ ರೈಲುಗಳನ್ನು ಪ್ರಯಾಣಿಕರು, 250 ಕಿಲೋಮೀಟರ್ ದೂರವನ್ನು ಆರಾಮದಾಯಕವಾಗಿ ಕ್ರಮಿಸುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ನೂತನ ವಂದೇ ಮೆಟ್ರೋ ರೈಲುಗಳಲ್ಲಿ ಒಟ್ಟು 4,364 ಜನರು ಏಕಕಾಲದಲ್ಲಿ ಪ್ರಯಾಣಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications