ಮದುರೈ ಮೀನಾಕ್ಷಿ ದರ್ಶನಕ್ಕೆ ಹೋಗುವವರಿಗೆ ಗುಡ್‌ನ್ಯೂಸ್: ಕೆಲವೇ ದಿನಗಳಲ್ಲಿ ವಂದೇ ಭಾರತ್ ರೈಲು ಸಂಚಾರ!
ಕರ್ನಾಟಕದಿಂದ ಮದುರೈ ಮೀನಾಕ್ಷಿ ತಾಯಿಯ ದರ್ಶಕ್ಕೆ ತೆರಳುವವರಿಗೆ ಭರ್ಜರಿ ಸಿಹಿಸುದ್ದಿಯೊಂದು ದೊರೆತಿದೆ. ಕೆಲವೇ ದಿನಗಳಲ್ಲಿ ಬೆಂಗಳೂರು (Bengaluru) - ಮಧುರೈ (Madurai) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸಂಚಾರವನ್ನು ನಡೆಸಲಿದೆ. ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ. ನೂತನ ವಂದೇ ಭಾರತ್ ರೈಲಿನ ಕಾರ್ಯಚರಣೆಯಿಂದ ಇವೆರೆಡು ನಗರಗಳ ಮಧ್ಯೆ ಪ್ರಯಾಣದ ಅವಧಿಯು ಮತ್ತಷ್ಟು ಇಳಿಕೆಯಾಗಲಿದ್ದು, ಸಾರ್ವಜನಿಕರು ಆರಾಮದಾಯಕವಾಗಿ ಓಡಾಟವನ್ನು ನಡೆಸಬಹುದು.
ದಕ್ಷಿಣ ರೈಲ್ವೆ (Southern Railway) ಇಂದು (ಸೋಮವಾರ) ಮದುರೈ ಹಾಗೂ ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟವನ್ನು ನಡೆಸುತ್ತಿದೆ. ಬೆಳಗ್ಗೆ 5:15ಕ್ಕೆ ಸಂಚಾರ ಆರಂಭಿಸಿದ್ದು, ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1:15ಕ್ಕೆ ತಲುಪಲಿದೆ. ಇಲ್ಲಿಂದ ಮಧ್ಯಾಹ್ನ 1:45ಕ್ಕೆ ಹೊರಡಲಿದ್ದು, ರಾತ್ರಿ 10:25ರ ಸುಮಾರಿಗೆ ಮದುರೈಯನ್ನು ತಲುಪಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜೂನ್ 20) ಚೆನ್ನೈಗೆ ಭೇಟಿ ನೀಡಲಿದ್ದಾರೆ. ಅಂದು ವಿವಿಧ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದು, ಬೆಂಗಳೂರು - ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಚಾಲನೆ ನೀಡಲಿದ್ದಾರೆ ಎಂದು ದಕ್ಷಿಣ ರೈಲ್ವೆ ಮೂಲಗಳು ಹೇಳಿವೆ. ಆದರೆ ಖಚಿತತೆ ಇಲ್ಲ.
ಬೆಂಗಳೂರು - ಮದುರೈ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇಸರಿ (ಆರೆಂಜ್) ಬಣ್ಣವನ್ನು ಹೊಂದಿರುವ ನಿರೀಕ್ಷೆಯಿದೆ. ಪ್ರಸ್ತುತ ಇವೆರೆಡು ನಗರಗಳ ಮಧ್ಯೆ 435 ಕಿಲೋಮೀಟರ್ ಅಂತರವನ್ನು ಕ್ರಮಿಸಲು ಸಾಮಾನ್ಯ ಎಕ್ಸ್‌ಪ್ರೆಸ್‌ಗಳು 7 ಗಂಟೆ ತೆಗೆದುಕೊಳ್ಳುತ್ತವೆ. ಹೊಸ ವಂದೇ ಭಾರತ್ ರೈಲು ಈ ದೂರವನ್ನು ಕೇವಲ 6 ಅಥವಾ 5.30 ಗಂಟೆಗಳಲ್ಲಿ ತಲುಪಲಿದೆ ಎನ್ನಲಾಗಿದೆ.

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಹಗಲಿನಲ್ಲಿ (Daytime) ಮಾತ್ರ ಓಡಾಟವನ್ನು ಮಾಡಲಿದ್ದು, 8 ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣಿಕರ ದಟ್ಟಣೆ ಅಧಿಕಗೊಂಡಂತೆ ಹೆಚ್ಚುವರಿ ಬೋಗಿಗಳನ್ನು ಸೇರಿಸಬಹುದು. ಮದುರೈ - ಬೆಂಗಳೂರು ಮಾರ್ಗ ನಡುವೆ ದಿಂಡಗಲ್, ಕರೂರ್, ಸೇಲಂ, ಧರ್ಮಪುರಿ ಮತ್ತು ಹೊಸೂರಿನಲ್ಲಿ ನಿಲುಗಡೆಯಾಗುತ್ತದೆ ಎಂದು ಹೇಳಲಾಗಿದ್ದು, ಮದುರೈ ಮೀನಾಕ್ಷಿ ತಾಯಿಯ ದರ್ಶನಕ್ಕೆ ಹೋಗುವ ಯಾತ್ರಿಕರಿಗೂ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ.
ಬೆಂಗಳೂರು - ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಮತ್ತು ಟಿಕೆಟ್ ದರದ ಕುರಿತಂತೆ ಯಾವುದೇ ಮಾಹಿತಿಯಿಲ್ಲ. ಬಹುತೇಕ 400 ಕಿಲೋಮೀಟರ್ ಹೆಚ್ಚು ದೂರ ಕ್ರಮಿಸುವ ಹೊಸ ವಂದೇ ಭಾರತ್ ರೈಲುಗಳ ಎಸಿ ಚೇರ್ ಕ್ಲಾಸ್‌ನಲ್ಲಿ ರೂ.1,300, ಎಕ್ಸಿಕ್ಯೂಟಿವ್ ಚೇರ್ ಕ್ಲಾಸ್‌ನಲ್ಲಿ ರೂ.2,300 ಟಿಕೆಟ್ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಅದೇ ರೀತಿಯ ದರವನ್ನು ಈ ರೈಲು ಕೂಡ ಹೊಂದಿರಬಹುದು ಎನ್ನಲಾಗಿದೆ.
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವು 18,423 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದು, ಈ ರೈಲುಗಳ ಸೀಟುಗಳು ಶೇಕಡ 105.57% ಭರ್ತಿಯಾಗಿವೆ. 26 ರಿಂದ 45 ವರ್ಷ ವಯಸ್ಸಿನ ಶೇಕಡ 45.9% ಜನರು ಪ್ರಯಾಣಿಸಿದ್ದಾರೆ. 2024ರ ಮಾರ್ಚ್ 31ರವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಒಟ್ಟು 1,24,87,540 ಕಿ.ಮೀ ದೂರದವರೆಗೂ ಕಾರ್ಯಾಚರಣೆಯನ್ನು ನಡೆಸಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications