ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
ಭಾರತೀಯ ರೈಲ್ವೆ (Indian Railway) 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಬಳಿಕ, 100 ದಿನಗಳಲ್ಲಿ ಜಾರಿಗೊಳಿಸಬೇಕಾದ ಯೋಜನೆಗಳ ಕುರಿತ ಕಾರ್ಯತಂತ್ರವನ್ನು ರೂಪಿಸಿದೆ. ಅದರ ಭಾಗವಾಗಿ ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ಸರಣಿ ರೈಲುಗಳನ್ನು ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಇವುಗಳ ವಿಶೇಷತೆಯನ್ನು ತಿಳಿಯೋಣ.
ರೈಲ್ವೆ ಇಲಾಖೆಯು 100 ಕಿಲೋಮೀಟರ್‌ನೊಳಗಿನ ಮಾರ್ಗದಲ್ಲಿ ವಂದೇ ಮೆಟ್ರೋ (Vande Metro), 550 ಕಿಲೋಮೀಟರ್‌ಗಿಂತ ದೂರದ ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ಹಾಗೂ 100 ರಿಂದ 550 ಕಿಲೋಮೀಟರ್‌ನೊಳಗೆ ಇನ್ನಷ್ಟು ಚೇರ್ ಕಾರ್ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ.

ವಂದೇ ಭಾರತ್ ಸ್ಲೀಪರ್, ಐಷಾರಾಮಿ ವಿಮಾನಗಳಂತೆ ವಿಶ್ವದರ್ಜೆಯ ಸೌಕರ್ಯವನ್ನು ಹೊಂದಿರಲಿದ್ದು, ರಾಜಧಾನಿ ಎಕ್ಸ್‌ಪ್ರೆಸ್ ಗಳಿಗೆ ಪರ್ಯಾಯವಾಗಲಿವೆ ಎಂದು ವಿಶ್ಲೇಷಿಸಲಾಗಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಜೊತೆಗೂಡಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಕ ಘಟಕದಲ್ಲಿ ಈ ರೈಲನ್ನು ಅಭಿವೃದ್ಧಿಪಡಲಾಗುತ್ತದೆ.
ಈ ವಂದೇ ಭಾರತ್ ಸ್ಲೀಪರ್ ದೂರದ ಪ್ರಯಾಣಗಳಿಗೆ ಹೆಚ್ಚು ಸೂಕ್ತವಾಗಿದೆ ಎನ್ನಲಾಗಿದೆ. 16 ಕೋಚ್‌ಗಳನ್ನು ಒಳಗೊಂಡಿರಲಿದ್ದು, ಮೊದಲ ದರ್ಜೆ ಎಸಿಯ 1 ಕೋಚ್, ದ್ವಿತೀಯ ದರ್ಜೆ ಎಸಿಯ 4 ಕೋಚ್, ಉಳಿದಂತೆ ಮೂರನೇ ದರ್ಜೆಯ ಎಸಿ ಕೋಚ್‌ಗಳು ಇರಲಿವೆ ಎಂದು ತಿಳಿದುಬಂದಿದೆ. ಒಟ್ಟು 823 ಬರ್ತ್‌ಗಳನ್ನು ಹೊಂದಿರಲಿದ್ದು, ಸಾರ್ವಜನಿಕರು ಆರಾಮದಾಯಕವಾಗಿ ನಿದ್ರಿಸುತ್ತ ಪ್ರಯಾಣಿಸಬಹುದಾಗಿದೆ.

ಮುಂಬರುವ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚಾರಿಸಬಹುದು ಎಂದು ಹೇಳಲಾಗಿದೆ. ಸ್ವಯಂ ಚಾಲಿತ ಬಾಗಿಲು, ವಾಸನೆ ಮುಕ್ತ ಶೌಚಾಲಯ, ಮೊದಲ ದರ್ಜೆಯ ಎಸಿ ಕೋಚ್ ಪ್ರಯಾಣಿಕರಿಗೆ ಬಿಸಿನೀರಿನ ವ್ಯವಸ್ಥೆ ಲಭ್ಯವಿರಲಿದೆ. ಇದರೊಂದಿಗೆ ಅನೇಕ ಸೌಲಭ್ಯಗಳನ್ನು ಹೊಂದಿರುವುದರಿಂದ ಟಿಕಟ್ ದರ ಕೂಡ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ.
ಹತ್ತಿರದ ನಗರಗಳ ನಡುವೆ ಸಂಪರ್ಕವನ್ನು ಕಲ್ಪಿಸಲು ರೈಲ್ವೆ ಇಲಾಖೆಯು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದೆ. 16 ಕೋಚ್‌ಗಳನ್ನು ಹೊಂದಿರುವ ಮೊದಲ ರೈಲು, ಮೇ ತಿಂಗಳೊಳಗೆ ಸಿದ್ಧಗೊಳ್ಳಲಿದೆ. ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವರದಿಯಾಗಿದೆ.

ಈ ವಂದೇ ಮೆಟ್ರೋ 16 ಕೋಚ್‌ಗಳನ್ನು ಹೊಂದಿರಲಿದ್ದು, ಪ್ರತಿ ಕೋಚ್‌ನಲ್ಲಿ 280 ಜನರು ಓಡಾಡಬಹುದು. ಅದರಲ್ಲಿ 100 ಜನರಿಗೆ ಆಸನ ವ್ಯವಸ್ಥೆಯಿದ್ದು, 180 ಮಂದಿ ನಿಂತುಕೊಂಡು ಪ್ರಯಾಣಿಸಬಹುದು. ಒಟ್ಟಾರೆ 4,364 ಜನರು ಒಮ್ಮೆಲೇ ಸಂಚರಿಸಬಹುದು. ಈ ರೈಲು ಸಾಕಷ್ಟು ಸುರಕ್ಷಿತವಾಗಿದ್ದು, ವೀಶೇಷ ಚೇತನರ ಪ್ರಯಾಣಿಕರಿಗೂ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯಗಳನ್ನು ಪಡೆದಿರಲಿದೆ ಎನ್ನಲಾಗಿದೆ.
ಕರ್ನಾಟಕವು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡಾಟವನ್ನು ನಡೆಸುತ್ತಿವೆ. ಹೊಸ ಸರ್ಕಾರ ರಚನೆಯಾದ ಬಳಿಕ ಮತ್ತಷ್ಟು ರೈಲುಗಳು ಕಾರ್ಯಾಚರಣೆ ಮಾಡುವ ಸಾಧ್ಯತೆಯಿದೆ. ಇವು ಸುರಕ್ಷತೆಯ ಸಲುವಾಗಿ ಗಂಟೆಗೆ 130 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸುತ್ತಿದ್ದು, ಆರಾಮದಾಯ ಆಸನ ವ್ಯವಸ್ಥೆ, ಹವಾನಿಯಂತ್ರಿತ ಬೋಗಿ, ವೈಫೈ, ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನಗಳು ಹಾಗೂ ಸ್ವಯಂ ಚಾಲಿತ ಬಾಗಿಲುಗಳನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








