ವಿದೇಶಿ ರೈಲುಗಳಿಗೆ ವಂದೇ ಭಾರತ್ ಸೆಡ್ಡು! 180 ಕಿ.ಮೀ ವೇಗದಲ್ಲಿ ಅಚ್ಚರಿಗೊಳಿಸುವ ದೃಶ್ಯ ಸೆರೆ!
ಭಾರತೀಯ ರೈಲ್ವೆಗೆ ಹೊಸ ಅಂದವನ್ನು ತಂದುಕೊಟ್ಟಿರುವ ವಂದೇ ಭಾರತ್ ರೈಲುಗಳು ಜನರ ದೂರದ ಪ್ರಯಾಣವನ್ನು ನೋಡುವ ವಿಧಾನವನ್ನೇ ಬದಲಾಯಿಸಿವೆ. ಇಲ್ಲಿಯವರೆಗೆ ರೈಲ್ವೆ ಇಲಾಖೆ ವಂದೇ ಭಾರತ್ ರೈಲುಗಳಲ್ಲಿ ಚೇರ್ ಕಾರುಗಳನ್ನು ಮಾತ್ರ ಪರಿಚಯಿಸಿದ್ದು, ಹಂತ ಹಂತವಾಗಿ ಹೊಸ ಬದಲಾವಣೆಗಳನ್ನು ತರುತ್ತಿದೆ. ಈ ಬದಲಾವಣೆಯ ಭಾಗವಾಗಿ ಸದ್ಯ ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಪರೀಕ್ಷೆಗಳು ವೇಗವನ್ನು ಪಡೆಯುತ್ತಿವೆ. ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
180 ಕಿ.ಮೀ ವೇಗದಲ್ಲಿ ವಂದೇ ಭಾರತ್ (ಸ್ಲೀಪರ್) ಪರೀಕ್ಷೆ" ಎಂಬ ಶೀರ್ಷಿಕೆಯನ್ನು ಬರೆದು ಸಚಿವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ನೀರಿನಿಂದ ತುಂಬಿದ ಲೋಟವನ್ನು ರೈಲಿನೊಳಗಿನ ಟ್ರೇ ಟೇಬಲ್ ಮೇಲೆ ಇರಿಸಲಾಗಿದ್ದು, ಅದರ ಪಕ್ಕದಲ್ಲೇ ಮೊಬೈಲ್ ಫೋನ್ ಸಹ ನೋಡಬಹುದು. ಮೊಬೈಲ್‌ನಲ್ಲಿ ರೈಲಿನ ವೇಗವು ಗೋಚರಿಸುತ್ತಿದ್ದು, ನೋಡುಗರಿಗೆ ವೇಗ ತಿಳಿಯಲು ಹೀಗೆ ಮಾಡಲಾಗಿದೆ.

ವೀಡಿಯೊ ಪ್ರಾರಂಭವಾದಾಗ ರೈಲು 178 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿತ್ತು, ಆದರೆ ವೇಗವು ಕ್ರಮೇಣ ಹೆಚ್ಚಾಗಿ ರೈಲು 180 ಕಿ.ಮೀ ವೇಗವನ್ನು ಮುಟ್ಟುತ್ತದೆ. ಇದೇ ಸಮಯದಲ್ಲಿ ಲೋಟದೊಳಗಿನ ನೀರು ಸ್ಥಿರವಾಗಿದ್ದು, ರೈಲು ಹೆಚ್ಚಿನ ವೇಗದಲ್ಲಿಯೂ ಎಷ್ಟು ಸುಗಮ ಪ್ರಯಾಣ ಅನುಭವ ನೀಡುತ್ತದೆ ಎಂಬುದನ್ನು ತೋರಿಸುತ್ತದೆ.
ರಾಜಸ್ಥಾನದ ಬುಂಡಿ ಜಿಲ್ಲೆಯ ಕೋಟಾ ಮತ್ತು ಲಾಬಾನ್ ನಡುವಿನ 30 ಕಿ.ಮೀ ಉದ್ದದ ಓಟದಲ್ಲಿ ರೈಲು 180 ಕಿ.ಮೀ ಗರಿಷ್ಠ ವೇಗವನ್ನು ತಲುಪಿದೆ. ನಡೆಯುತ್ತಿರುವ ಪರೀಕ್ಷೆಯ ಭಾಗವಾಗಿ ರೈಲು 180 ಕಿ.ಮೀ ವೇಗವನ್ನು ಮುಟ್ಟಿದೆ. ರೈಲು ಅಂತಿಮ ಅನುಮೋದನೆ ಪಡೆಯುವ ಮೊದಲು ಜನವರಿ ಅಂತ್ಯದವರೆಗೆ ಪರೀಕ್ಷೆ ಮುಂದುವರಿಯುತ್ತದೆ. ಲಕ್ನೋದ ಆರ್‌ಡಿಎಸ್ಒ ಮೇಲ್ವಿಚಾರಣೆಯಲ್ಲಿ ಈ ಪ್ರಯೋಗಗಳು ಜನವರಿಯಾದ್ಯಂತ ಮುಂದುವರಿಯುತ್ತವೆ.

ಕಳೆದ ಎರಡು ದಿನಗಳಲ್ಲಿ ರೈಲ್ವೆ ಸಚಿವಾಲಯವು ಅನೇಕ ಪರೀಕ್ಷೆಗಳನ್ನು ನಡೆಸಿದೆ. ಈ ಹಿಂದೆ ರೋಹಲ್ ಖುರ್ದ್ ಮತ್ತು ಕೋಟಾ ನಡುವಿನ 40 ಕಿ.ಮೀ ಓಟದಲ್ಲಿ ರೈಲು 180 ಕಿ.ಮೀ ವೇಗವನ್ನು ಮುಟ್ಟಿತ್ತು. ಪ್ರಯೋಗಗಳು ಮುಗಿದ ನಂತರ, ರೈಲ್ವೆ ಸುರಕ್ಷತಾ ಆಯುಕ್ತರು ಗರಿಷ್ಠ ವೇಗದಲ್ಲಿ ರೈಲನ್ನು ಮೌಲ್ಯಮಾಪನ ಮಾಡುತ್ತಾರೆ. ಈ ಅಂತಿಮ ಮೌಲ್ಯಮಾಪನದ ನಂತರ ಭಾರತೀಯ ರೈಲ್ವೆಗೆ ಸೇರಿಸಲಾಗುತ್ತದೆ.
ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ನವದೆಹಲಿ ಮತ್ತು ಶ್ರೀನಗರ ನಡುವೆ ಚಲಿಸುವ ಸಾಧ್ಯತೆಯಿದೆ. ನಂತರ ಇತರ ಮಾರ್ಗಗಳಿಗೂ ವಿಸ್ತರಿಸಲಾಗುವುದು. ಈ ಯಶಸ್ವಿ ಪ್ರಯೋಗಗಳೊಂದಿಗೆ, ರೈಲು ಪ್ರಯಾಣಿಕರು ಕಾಶ್ಮೀರದಿಂದ ಕನ್ಯಾಕುಮಾರಿ, ದೆಹಲಿಯಿಂದ ಮುಂಬೈ, ಹೌರಾದಿಂದ ಚೆನ್ನೈ ಮತ್ತು ಇತರ ಅನೇಕ ಮಾರ್ಗಗಳಂತಹ ದೂರದ ಪ್ರಯಾಣದಲ್ಲಿ ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ಎದುರು ನೋಡಬಹುದು ಎಂದು ಸಚಿವಾಲಯ ತಿಳಿಸಿದೆ.
ಒಟ್ಟಾರೆ ಈ ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಭಾರತೀಯ ರೈಲ್ವೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತೀಯ ರೈಲ್ವೆ ನಿರ್ವಹಿಸುವ ಈ ದೂರದ ಸೂಪರ್‌ಫಾಸ್ಟ್ ಎಕ್ಸ್ಪ್ರೆಸ್ ಸೇವೆಯು ಬಹಳ ಕಡಿಮೆ ಅವಧಿಯಲ್ಲಿ ಪ್ರಯಾಣಿಕರಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಇಲ್ಲಿಯವರೆಗೆ, ನಾವು ವಂದೇ ಭಾರತ್ ರೈಲುಗಳಲ್ಲಿ ಚೇರ್ ಕಾರುಗಳನ್ನು ಮಾತ್ರ ಹೊಂದಿದ್ದೆವು, ಶೀಘ್ರದಲ್ಲೇ ಸ್ಲೀಪರ್ ಆವೃತ್ತಿಗಳು ಬರಲಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications