Vande Bharat ಗೆ ವಿರೋಧವೇಕೆ? ದಾವಣಗೆರೆಯಲ್ಲಿ ಹೊಸ ರೈಲಿಗೆ ಕಲ್ಲು ತೂರಾಟ
ವಂದೇ ಭಾರತ್ ದೇಶದ ರೈಲ್ವೆ ವಲಯದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಮುಂದಿನ ವರ್ಷಗಳಲ್ಲಿ ಈ ರೈಲುಗಳು ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸೇವೆ ಸಲ್ಲಿಸಲಿವೆ. ಈ ಸೆಮಿ ಹೈಸ್ಪೀಡ್ ರೈಲುಗಳು ಪ್ರಯಾಣದ ಸಮಯವನ್ನು ತಗ್ಗಿಸಿ ಸೌಕರ್ಯಯುತ ಪ್ರಯಾಣವನ್ನು ಒದಗಿಸುವಲ್ಲಿ ತುಂಬಾ ನಿರ್ಣಾಯಕವಾಗಲಿವೆ. ಆದ್ರೆ ಆರಂಭದಲ್ಲೇ ರೈಲುಗಳು ತೀರ್ವ ಅಗ್ನಿ ಪರೀಕ್ಷೆಗಳನ್ನು ಎದುರಿಸುತ್ತಿವೆ.
ಯಾವುದೇ ಯೋಜನೆಯಾಗಿರಲಿ ಸಾರ್ವಜನಿಕರ ಕ್ಷೇಮಾವೃದ್ಧಿಗಾಗಿ ತರಲಾಗುತ್ತದೆ. ಇವು ಯಶಸ್ವಿಯಾಗಲು ಸಾರ್ವಜನಿಕರ ಬೆಂಬಲ ಕೂಡ ಅಷ್ಟೇ ಮುಖ್ಯ, ಸಾರ್ವಜನಿಕರ ವಿರೋಧದ ನಡುವೆ ಯಾವುದೇ ಯೋಜನೆಯಾಗಿರಲಿ ಮೂಲೆ ಗುಂಪಾಗುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಈಗ ವಂದೇ ಭಾರತ್‌ಗೂ ಸಾರ್ವಜನಿಕರ ಬೆಂಬಲ ತುಂಬಾ ಮುಖ್ಯ. ಹಲವೆಡೆ ಈ ರೈಲುಗಳನ್ನು ಟ್ರೋಲ್ ಮಾಡಲಾಗುತ್ತಿದೆ.

ಇತ್ತೀಚೆಗೆ ರೈಲಿನೊಳಗೆ ಮಳೆ ನೀರು ಸೋರಿಕೆಯಾಗಿರುವ ವಿಡಿಯೋ ಭಾರೀ ಚರ್ಚೆಯಾಗಿತ್ತು. ಆದ್ರೆ ಈ ರೈಲು ವಂದೇ ಭಾರತ್ ಅಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿತ್ತು. ಇದಾದ ಬಳಿಕ ವಂದೇ ಭಾರತ್ ರೈಲನ್ನು ಸಾಮಾನ್ಯ ರೈಲಿನ ಎಂಜಿನ್ ಎಳೆದೊಯ್ಯುವ ವಿಡಿಯೋ ಕೂಡ ವೈರಲ್ ಆಗಿ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿತ್ತು. ಇದಕ್ಕೂ ಸ್ಪಷ್ಟನೆ ನೀಡಿದ್ದ ಇಲಾಖೆ, ಟ್ರೈಯಲ್ ರನ್ ಸಂದರ್ಭದಲ್ಲಿ ಇದರ ವಿಡಿಯೋ ಮಾಡಲಾಗಿದೆ ಎಂದು ಹೇಳಿತ್ತು.
ಹೊಸ ವಂದೇ ಭಾರತ್ ರೈಲನ್ನು ಟ್ರಾಕ್‌ಗೆ ತರಲು ಮತ್ತು ಅದರ ಹಳಿಗಳನ್ನು ಪರಿಶೀಲಿಸಲು ಹೀಗೆ ಮಾಡಲಾಗುತ್ತದೆ. ಆ ವೇಳೆ ಅದರಲ್ಲಿ ಪ್ರಯಾಣಿಕರಿರಲಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು. ಇವು ಸಾಲದೆಂಬಂತೆ ಟ್ರಾಕ್‌ಗಳಲ್ಲಿ ಪ್ರಾಣಿಗಳು ಅಡ್ಡಬಂದು ರೈಲು ಹಾನಿಯಾದ ಘಟನೆಗಳು ಕೂಡ ವಂದೇ ಭಾರತ್‌ಗೆ ತೀರ್ವ ಹಿನ್ನಡೆಗೆ ಕಾರಣವಾಗಿತ್ತು. ಇವೆಲ್ಲದರ ನಡುವೆ ರೈಲ್ವೆ ಇಲಾಖೆ ಎಲ್ಲದಕ್ಕೂ ಪ್ರತಿಕ್ರಿಯಿಸಿ ವಿವರಣೆ ನೀಡಿತ್ತು.

ದಾವಣಗೆರೆಯಲ್ಲಿ ಕಲ್ಲು ತೂರಾಟ: ಜೂನ್ 27 ರಂದು ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದಾವಣಗೆರೆ ರೈಲು ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಸಿ4 ಕಿಟಕಿಗೆ ಹಾನಿಯಾಗಿದ್ದು, ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣಕ್ಕೆ ಹೋರಟಿದ್ದ ರೈಲು ದಾವಣಗೆರೆ ರೈಲು ನಿಲ್ದಾಣದಿಂದ ಮಧ್ಯಾಹ್ನ 3.30 ರ ಸುಮಾರಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ನಲ್ಲಿ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ವಂದೇ ಭಾರತ್ ರೈಲಿಗೆ ಈ ಹಿಂದೆಯೂ ಹಲವಾರು ಬಾರಿ ಕಲ್ಲು ತೂರಾಟ ನಡೆಸಲಾಗಿದೆ.

ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಜನವರಿಯಲ್ಲಿ ಸುಮಾರು 21 ಪ್ರಕರಣಗಳು ಹಾಗೂ ಫೆಬ್ರವರಿಯಲ್ಲಿ 13 ಪ್ರಕರಣಗಳನ್ನು ದಾಖಲಿಸಿದೆ. ಫೆಬ್ರವರಿ 25 ರಂದು ಮೈಸೂರು-ಚೆನ್ನೈ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ಎರಡು ರೈಲಿನ ಗಾಜುಗಳಿಗೆ ತೀವ್ರ ಹಾನಿಯಾಗಿತ್ತಾದರೂ ಗಾಜು ಮತ್ತು ಕೋಚ್‌ನ ಗುಣಮಟ್ಟದಿಂದಾಗಿ ಪ್ರಾಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ.
ಕರ್ನಾಟಕ ಮಾತ್ರವಲ್ಲದೆ ಡೆಹ್ರಾಡೂನ್-ದೆಹಲಿ ವಂದೇ ಭಾರತ್ ಮುಜಾಫರ್‌ನಗರ ನಿಲ್ದಾಣದತ್ತ ಸಾಗುತ್ತಿದ್ದಾಗಲೂ ಕಲ್ಲು ತೂರಾಟ ನಡೆದಿದೆ. ಹಾಗೆಯೇ ಭೋಪಾಲ್-ದೆಹಲಿ ವಂದೇ ಭಾರತ್ ರೈಲು ಕೂಡ ಕಲ್ಲು ತೂರಾಟಕ್ಕೆ ಗುರಿಯಾಗಿತ್ತು. ಈಗ ನೈಋತ್ಯ ರೈಲ್ವೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇಂತಹ ಕೃತ್ಯಗಳನ್ನು ತಡೆಯಲು ರೈಲಿನಲ್ಲಿ ಅನೇಕ ಆರ್‌ಪಿಎಫ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.


Click it and Unblock the Notifications