Vande Metro: ವಂದೇ ಮೆಟ್ರೋ ಶೀಘ್ರ ಹಳಿಗೆ.. ಏನಿದರ ವಿಶೇಷತೆ.. ಕೆಲಸಕ್ಕೆ ಬೇಗ ಹೋಗಬಹುದು!
ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ದೂರದ ವಿವಿಧ ನಗರಗಳಿಗೆ ಸಂಪರ್ಕ ಕೊಂಡಿಯಾಗಿದೆ. ಕೆಲವೇ ದಿನಗಳಲ್ಲಿ ಹತ್ತಿರದ ನಗರ ಹಾಗೂ ಪಟ್ಟಣಗಳನ್ನು ಬೆಸೆಯಲು ವಂದೇ ಮೆಟ್ರೋ ಕೂಡ ಹಳಿಗೆ ಬರಲಿದೆ. ಇತ್ತೀಚೆಗೆ, ಮೊದಲ ವಂದೇ ಮೆಟ್ರೋ (Vande Metro) ರೈಲು ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿದೆ ಎಂದು ವರದಿಯಾಗಿದೆ. ನೂತನ ರೈಲು ಗಾಂಧಿನಗರ ಮತ್ತು ಭುಜ್ ನಡುವೆ ಸಂಚರಿಸುವ ನಿರೀಕ್ಷೆಯಿದ್ದು, ಸೂರತ್ ಹಾಗೂ ಗಾಂಧಿನಗರ ಮಧ್ಯೆಯೂ ಈ ರೈಲನ್ನು ಓಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ನಂತರದ ದಿನಗಳಲ್ಲಿ ದೇಶದ ಹಲವು ಭಾಗಗಳಿಗೂ ವಂದೇ ಮೆಟ್ರೋ ಸೇವೆಯನ್ನು ವಿಸ್ತರಿಸುವ ನಿರೀಕ್ಷೆಯಿದೆ.
ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ (ಆರ್‌ಸಿಎಫ್) ವಂದೇ ಮೆಟ್ರೋ ಕೋಚ್‌ಗಳನ್ನು ಅಧಿವೃದ್ಧಿಪಡಿಸುತ್ತಿದೆ. ಇದು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿನ್ಯಾಸವನ್ನು ಆಧರಿಸಿದ್ದು, ಪ್ರಯಾಣಿಕರು 250 ಕಿಲೋಮೀಟರ್ ದೂರವನ್ನು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಸಿದ್ದಪಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡುವಂತೆ ತಯಾರಿಸಲಾಗಿದೆ ಎನ್ನಲಾಗಿದೆ.

ನೂತನ ವಂದೇ ಮೆಟ್ರೋ 6 ಕೋಚ್‌ಗಳನ್ನು ಹೊಂದಿದ್ದು, ಪ್ರತಿ ಕೋಚ್‌ನಲ್ಲಿ 280 ಜನರು ಸಂಚರಿಸಬಹುದು. 100 ಜನರಿಗೆ ಆಸನ ವ್ಯವಸ್ಥೆಯಿದ್ದು, 180 ಮಂದಿ ನಿಂತುಕೊಂಡು ಓಡಾಟ ನಡೆಸಬಹುದು. ಒಟ್ಟು 4,364 ಜನರು ಏಕಕಾಲದಲ್ಲಿ ವಂದೇ ಮೆಟ್ರೋದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ಹೊಸ ವಂದೇ ಮೆಟ್ರೋ ರೈಲು ಅತ್ಯುತ್ತಮ ಶೌಚಾಲಯಗಳನ್ನು ಹೊಂದಿರಲಿದೆ. ಲೋಕೋ ಪೈಲೆಟ್ ಜೊತೆಯಲ್ಲಿ ಪ್ರಯಾಣಿಕರು ಮಾತನಾಡಲು ಸಹ ಅಗತ್ಯವಾಗಿರುವ ತಾಂತ್ರಿಕ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ರೈಲಿನ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಗ್ನಿ ಪತ್ತೆ ವ್ಯವಸ್ಥೆ (ಫೇರ್-ಸ್ಮೋಕ್ ಡಿಟೆಕ್ಷನ್ ಸಿಸ್ಟಮ್) ಹಾಗೂ ಕವಚ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕ್ಕೂಲಕ್ಕಾಗಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮುಂಬರುವ ತಿಂಗಳಲ್ಲಿ ಈ ರೈಲು ಹಳಿಗೆ ಬರುವ ನಿರೀಕ್ಷೆಯಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಗಲಿವೆ ಎಂದು ಅಂದಾಜಿಸಲಾಗಿದೆ. ಈ ವಂದೇ ಭಾರತ್ ಸ್ಲೀಪರ್‌ನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತಿದೆ.
ಸಂಪೂರ್ಣ ಹವಾನಿಯಂತ್ರಿತವಾಗಿರುವ ನೂತನ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರಲಿದೆ. ಸುಮಾರು 823 ಬರ್ತ್‌ಗಳನ್ನು ಹೊಂದಿರಲಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ವಾಸನೆ ಮುಕ್ತ ಶೌಚಾಲಯಗಳು ಮತ್ತು ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲುಗಳನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.
ಸದ್ಯ ದೇಶಾದ್ಯಂತ ಕಾರ್ಯಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಸಾಕಷ್ಟು ಅತ್ಯಾಧುನಿಕವಾಗಿದೆ. ಗರಿಷ್ಠ ವೇಗದಲ್ಲಿ ಓಡಾಟ ನಡೆಸುವ ಈ ರೈಲಿನ ಸೀಟುಗಳು ಹೆಚ್ಚು ಆರಾಮದಯವಾಗಿವೆ. ಎಲ್ಲ ಕೋಚ್‌ಗಳು ಹವಾನಿಯಂತ್ರಿತವಾಗಿದ್ದು, ವೈಫೈ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ ಹಾಗೂ ಜೈವಿಕ ಶೌಚಾಲಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications