ಕಡಿಮೆ ಖರ್ಚಿನ ವಂದೇ ಸಾಧಾರಣ್ 130 ಕಿ.ಮೀ ವೇಗದಲ್ಲಿ ಪ್ರಾಯೋಗಿಕ ಸಂಚಾರ: ಕರ್ನಾಟಕದಲ್ಲಿ ಯಾವ ಊರಿಗೆ?
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ - ಹೈಸ್ವೀಡ್ ರೈಲುಗಳಾಗಿ ಖ್ಯಾತಿಗಳಿಸಿವೆ. ಸದ್ಯ ರೈಲ್ವೆ ಇಲಾಖೆಯು ರಾತ್ರಿ ಪ್ರಯಾಣದ ಅನುಕೂಲಕ್ಕಾಗಿ ವಂದೇ ಭಾರತ್ ಸ್ಲೀಪರ್ ಹಾಗೂ ಹತ್ತಿರದ ನಗರದ ಸಂಚಾರಕ್ಕೆ ವಂದೇ ಮೆಟ್ರೋಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ.
ಕೆಲವೇ ದಿನಗಳಲ್ಲಿ ಜನರಿಗೆ ಆರಾಮದಾಯಕ ಪ್ರಯಾಣ ಒದಗಿಸಲು ಕಡಿಮೆ ಖರ್ಚಿನಲ್ಲಿ ವಂದೇ ಸಾಧಾರಣ್ (Vande Sadharan) ಎಕ್ಸ್‌ಪ್ರೆಸ್‌ನ್ನು ರೈಲ್ವೆ ಇಲಾಖೆಯು ಲೋಕಾರ್ಪಣೆಗೊಳಿಸಲಿದೆ. ಹೊಸ ವಂದೇ ಸಾಧಾರಣ್, ಅ.29 ರಂದು ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿದ್ದು, ನವೆಂಬರ್ 8ರಂದು (ಬುಧವಾರ) ಅಹಮದಾಬಾದ್ (Ahmedabad) ಮತ್ತು ಮುಂಬೈ (Mumbai) ನಡುವೆ ಪ್ರಾಯೋಗಿಕ ಸಂಚಾರ ನಡೆಸಿದೆ.

ಆ ವೇಳೆ, ನೂತನ ವಂದೇ ಸಾಧಾರಣ್ ಗಂಟೆಗೆ 130 ಕಿ.ಮೀ ವೇಗದಲ್ಲಿ ಇವೆರೆಡು ನಗರಗಳ ನಡುವೆ ಸಂಚರಿಸಿದೆ. ಪರೀಕ್ಷಾರ್ಥ ಓಡಾಟ ನಡೆಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ವೈರಲ್ ಆಗಿವೆ. ಈ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಜನರು ಬೇಗನೇ ಗಮ್ಯ ಸ್ಥಾನವನ್ನು ತಲುಪಲಿದ್ದಾರೆ. ಹೆಚ್ಚಿನ ಹಣ ಖರ್ಚು ಮಾಡದೇ ಸುಲಭ ಪ್ರಯಾಣ ಸಾದ್ಯವಾಗುವುದರಿಂದ ಬಹುತೇಕರು ಈ ರೈಲನ್ನು ತಮ್ಮ ಸಾರಿಗೆಯಾಗಿ ಪರಿಗಣಿಸಬಹುದು.
ಈ ರೈಲುಗಳನ್ನು 500 ಕಿಲೋಮೀಟರ್‌ಗಿಂತಲೂ ಹೆಚ್ಚಿನ ಸುದೀರ್ಘ ಮಾರ್ಗಗಳಲ್ಲಿ ಕ್ರಮಿಸುಲು ಸೂಕ್ತವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ವಂದೇ ಸಾಧಾರಣ್ ರೈಲಿನಲ್ಲಿ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಆದರೆ, ಸಿಸಿಟಿವಿ ಒಳಗೊಂಡಿರಲಿದ್ದು, ಪ್ರಯಾಣಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನುಳಿದಂತೆ ಈ ರೈಲಿನಲ್ಲಿ ಯಾವೆಲ್ಲ ಸೌಕರ್ಯಗಳಿರಲಿವೆ ಎಂಬುದರ ಬಗ್ಗೆ ವಿವರಗಳಿಲ್ಲ.

ವಂದೇ ಸಾಧಾರಣ್ ರೈಲಿನಲ್ಲಿ ಒಟ್ಟು 22 ಬೋಗಿಗಳು ಇರಲಿದೆ. ಅವುಗಳಲ್ಲಿ 8 ಕಾಯ್ದಿರಿಸದ ಬೋಗಿಗಳು, 14 ಸ್ಲೀಪರ್ ಬೋಗಿಗಳು, ಉಳಿದೆರಡು ಲೋಕೋಮೋಟಿವ್(ಎಂಜಿನ್). ಇದರಲ್ಲಿ 1800 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಮುಂಬೈ - ಅಹಮದಾಬಾದ್ ಮಾರ್ಗದ ಹೊರತಾಗಿ, ಮುಂಬೈ-ನವದೆಹಲಿ, ಪಾಟ್ನಾ-ನವದೆಹಲಿ, ಹೌರಾ-ನವದೆಹಲಿ, ಹೈದರಾಬಾದ್-ನವದೆಹಲಿ, ಮತ್ತು ಎರ್ನಾಕುಲಂ-ಗುವಾಹಟಿ ಮಾರ್ಗದಲ್ಲಿ ರೈಲು ಸಂಚರಿಸುವ ನೀರಿಕ್ಷೆಯಿದೆ.
ಒಂದು ಮಾಹಿತಿ ಪ್ರಕಾರ, ದೇಶಾದ್ಯಂತ 30 ಮಾರ್ಗಗಳಲ್ಲಿ ವಂದೇ ಸಾಧಾರಣ್ ರೈಲು ಓಡಾಟವನ್ನು ಆರಂಭಿಸಲಿದೆ. ಸುಮಾರು 400 ರೈಲುಗಳನ್ನು ಚೆನ್ನೈ ಕೋಚ್ ಇಂಟಿಗ್ರೇಟೆಡ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. ಕರ್ನಾಟಕದ ಯಾವ ಮಾರ್ಗದಲ್ಲಿ ಈ ರೈಲು ಸಂಚಾರಲಿದೆ ಎಂಬುದರ ಬಗ್ಗೆ ತಿಳಿದಿಲ್ಲ. ಆದರೂ, ಕಲಬುರಗಿ-ಬೆಂಗಳೂರು, ಬೆಳಗಾವಿ-ಬೆಂಗಳೂರು, ಶಿವಮೊಗ್ಗ-ಬೆಂಗಳೂರು, ಮಂಗಳೂರು-ಬೆಂಗಳೂರು ನಡುವೆ ಓಡಾಟ ನಡೆಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹಲವರ ಅಭಿಪ್ರಾಯವಾಗಿದೆ.
ಸದ್ಯ, ದೇಶದಲ್ಲಿ ಕಾರ್ಯಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರಾತ್ರಿ ಪ್ರಯಾಣ ಅಸಾಧ್ಯ. ಇದರಿಂದಾಗಿ ರೈಲ್ವೆ ಇಲಾಖೆ 'ವಂದೇ ಭಾರತ್ ಸ್ಲೀಪರ್' ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 2024ರ ಫೆಬ್ರವರಿ ವೇಳೆಗೆ ಸಂಚಾರ ಆರಂಭಿಸುವ ನೀರಿಕ್ಷೆಯಿದೆ. ಈ ರೈಲು, 857 ಬರ್ತ್‌ಗಳನ್ನು ಒಳಗೊಂಡಿರುತ್ತದೆ. ಇದರೊಟ್ಟಿಗೆ ಹತ್ತಿರದ ನಗರಗಳ ಪ್ರಯಾಣಕ್ಕೆ ವಂದೇ ಮೆಟ್ರೋ ಕೂಡ ತಯಾರಿಸುತ್ತಿದ್ದು, ಇದು 12 ಬೋಗಿಗಳನ್ನು ಹೊಂದಿರಲಿದೆ.
ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 2019ರ ಫೆಬ್ರವರಿಯಲ್ಲಿ ನವದೆಹಲಿ - ವಾರಣಾಸಿ ನಡುವೆ ಸಂಚಾರವನ್ನು ಶುರು ಮಾಡಿತ್ತು. ವಿವಿಧ ರಾಜ್ಯಗಳಲ್ಲಿ ಪ್ರಸ್ತುತ 34 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯಚರಣೆ ನಡೆಸುತ್ತಿದ್ದು, ಹಲವು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ಸಂಪೂರ್ಣ ಎಸಿ ವ್ಯವಸ್ಥೆ, ಆರಾಮದಾಯಕ ಸೀಟುಗಳು, ದೊಡ್ಡದಾದ ಕಿಟಕಿ, ವೈಫೈ ಸೌಲಭ್ಯ, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನವನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications