ಗಂಟೆಗೆ 14000 ಕಿ.ಮೀಗಳಿಗಿಂತ ಹೆಚ್ಚು ವೇಗದಲ್ಲಿ ಹಾರಾಟ ನಡೆಸಲಿದೆ ಈ ಹೈಪರ್ ಸೋನಿಕ್ ವಿಮಾನ
ವಿಮಾನಯಾನ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಒಂದಾದ ವೀನಸ್ ಏರೋಸ್ಪೇಸ್ ಕಾರ್ಪೊರೇಶನ್ ಹೈಪರ್ ಸೋನಿಕ್ ವಿಮಾನಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಈ ವಿಮಾನಗಳ ಮೂಲಕ ವಿಶ್ವದ ಯಾವುದೇ ಭಾಗಕ್ಕೆ ಕೇವಲ ಒಂದು ಗಂಟೆಯಲ್ಲಿ ಸಂಚರಿಸಬಹುದು.

ಈ ಹೈಪರ್ ಸೋನಿಕ್ ವಿಮಾನದಲ್ಲಿ ಪ್ರಯಾಣಿಕರು ಲಾಸ್ ಏಂಜಲೀಸ್‌ನಿಂದ ಟೋಕಿಯೊಗೆ ಕೇವಲ 1 ಗಂಟೆಯಲ್ಲಿ ಪ್ರಯಾಣಿಸಬಹುದು. ಸಾಮಾನ್ಯ ವಿಮಾನಗಳಲ್ಲಿ ಈ ಎರಡು ನಗರಗಳ ನಡುವಿನ ಪ್ರಯಾಣಕ್ಕೆ 11ರಿಂದ 13 ಗಂಟೆ ಬೇಕಾಗುತ್ತದೆ. ಈ ಹೈಪರ್ ಸೋನಿಕ್ ವಿಮಾನವು ಪ್ರಯಾಣವನ್ನು ಇನ್ನಷ್ಟು ವೇಗಗೊಳಿಸುತ್ತದೆ.

ವರ್ಜಿನ್ ಆರ್ಬಿಟ್ ಎಲ್ಎಲ್‌ಸಿಯ ಮಾಜಿ ಉದ್ಯೋಗಿ ಶರಾ ಡೌಗ್ಲಾಸ್ ಹಾಗೂ ಅವರ ಪತಿ ಆಂಡ್ರ್ಯೂ ಡೌಗ್ಲಾಸ್ ಅವರು ವೀನಸ್ ಏರೋಸ್ಪೇಸ್ ಕಾರ್ಪೊರೇಶನ್ ಅನ್ನು ಸ್ಥಾಪಿಸಿದ್ದಾರೆ. ದೀರ್ಘ ಪ್ರಯಾಣದ ಕಾರಣಕ್ಕೆ ಈ ದಂಪತಿಗಳು ಶರಾ ಡೌಗ್ಲಾಸ್'ರವರ ಅಜ್ಜಿಯ 95ನೇ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಇದೇ ಕಾರಣಕ್ಕೆ ಈ ದಂಪತಿಗಳು ಹೆಚ್ಚಿನ ವೇಗದ ಹೈಪರ್ ಸೋನಿಕ್ ವಿಮಾನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಆರಂಭಿಸಿದರು. ಸೂಪರ್ ಸಾನಿಕ್ ವಿಮಾನಗಳು ಶಬ್ದಕ್ಕಿಂತ ವೇಗವಾಗಿ ಚಲಿಸುತ್ತವೆ.

ವೀನಸ್ ಏರೋಸ್ಪೇಸ್ ಕಾರ್ಪೊರೇಷನ್ ಹೈಪರ್ ಸೋನಿಕ್ ವಿಮಾನಗಳನ್ನು ನಿರ್ಮಿಸಲು ಮುಂದಾಗಿದೆ. ಹೈಪರ್ ಸೋನಿಕ್ ವಿಮಾನಗಳು ಸೂಪರ್ ಸಾನಿಕ್ ವಿಮಾನಗಳಿಗಿಂತ ವೇಗವಾಗಿ ಹಾರಾಟ ನಡೆಸುತ್ತವೆ.

ಪ್ರತಿ ಗಂಟೆಗೆ 9,000 ಮೈಲುಗಳಷ್ಟು ವೇಗದಲ್ಲಿ ಚಲಿಸಬಲ್ಲ ಹೈಪರ್ ಸೋನಿಕ್ ವಿಮಾನವನ್ನು ನಿರ್ಮಿಸಲು ವೀನಸ್ ಏರೋಸ್ಪೇಸ್ ಕಾರ್ಪೊರೇಶನ್ ನಿರ್ಧರಿಸಿದೆ. ಅಂದರೆ ಈ ಹೈಪರ್ ಸೋನಿಕ್ ವಿಮಾನಗಳು ಗಂಟೆಗೆ 14,484 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತವೆ.

ಈ ವೇಗವು ಶಬ್ದದ ವೇಗಕ್ಕಿಂತ ಸುಮಾರು 12 ಪಟ್ಟು ಹೆಚ್ಚು. ಶಬ್ದದ ವೇಗ ಪ್ರತಿ ಗಂಟೆಗೆ 1,234 ಕಿ.ಮೀನಷ್ಟು ಮಾತ್ರ. ವೀನಸ್ ಏರೋಸ್ಪೇಸ್ ಕಾರ್ಪೊರೇಶನ್ ಈ ಯೋಜನೆಗಾಗಿ 15 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಈ ಎಲ್ಲಾ ಉದ್ಯೋಗಿಗಳು ವಾಯುಯಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಈ ಹಿಂದೆ ಹೈಪರ್ ಸೋನಿಕ್ ವಿಮಾನಗಳನ್ನು ರಚಿಸುವ ಪ್ರಯತ್ನದಲ್ಲಿ ಹಲವು ಕಂಪನಿಗಳು ಭಾಗಿಯಾಗಿದ್ದವು. ಆದರೆ ನಮ್ಮ ಪ್ರಯತ್ನವು ಆ ಕಂಪನಿಗಳ ಪ್ರಯತ್ನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಶರಾ ಡೌಗ್ಲಾಸ್ ಹಾಗೂ ಅವರ ಪತಿ ಆಂಡ್ರ್ಯೂ ಡೌಗ್ಲಾಸ್ ಹೇಳಿದ್ದಾರೆ.

ಕಳೆದ ಕೆಲವು ದಶಕಗಳಿಂದ ಈ ವಿಮಾನಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ. ಆದರೆ ಈ ಬಾರಿ ನಾವು ಯಶಸ್ವಿಯಾಗಲಿದ್ದೇವೆ ಎಂದು ಆಂಡ್ರ್ಯೂ ಡೌಗ್ಲಾಸ್ ತಿಳಿಸಿದರು. ಈ ಹೈಪರ್ ಸೋನಿಕ್ ವಿಮಾನದ ಆಕಾರವನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಈ ವಿಮಾನವನ್ನು ಮೂರು ಮಾದರಿಗಳೊಂದಿಗೆ ಪರೀಕ್ಷಿಸಲು ನಿರ್ಧರಿಸಲಾಗಿದೆ.

ಈ ಯೋಜನೆಯು ಕಾರ್ಯರೂಪಕ್ಕೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಿಖರವಾಗಿ ತಿಳಿದಿಲ್ಲ. ಆದರೆ ವರದಿಗಳ ಪ್ರಕಾರ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿ ಬೇಕಾಗಬಹುದು ಎಂದು ಹೇಳಲಾಗಿದೆ. ಈ ಹೈಪರ್ ಸೋನಿಕ್ ವಿಮಾನಗಳು ಬಳಕೆಗೆ ಬಂದರೆ ವಾಯುಯಾನ ಉದ್ಯಮದಲ್ಲಿ ದೊಡ್ಡ ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.


Click it and Unblock the Notifications