Video: ಲ್ಯಾಂಡ್ ರೋವರ್ ಕಾರಿನಲ್ಲಿ ಕಾಣಿಸಿಕೊಂಡ ಬಾಬಾ ರಾಮದೇವ್: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಪತಂಜಲಿ ಸಮೂಹದ ನೇತೃತ್ವ ವಹಿಸಿರುವ ಯೋಗ ಗುರು ಬಾಬಾ ರಾಮದೇವ್ ಯಾವಾಗಲೂ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ, ದುಬಾರಿ ಬೆಲೆಯ ಐಷಾರಾಮಿ, 'ಲ್ಯಾಂಡ್ ರೋವರ್ ಡಿಫೆಂಡರ್ 130' ಕಾರನ್ನು ಚಾಲನೆ ಮಾಡುವಾಗ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ (Video)ವನ್ನು ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಪೋಸ್ಟ್ ಮಾಡಲಾಗಿದೆ.
ಬಾಬಾ ರಾಮದೇವ್ (Baba Ramdev) ಕಳೆದ ವರ್ಷ ಹೊಚ್ಚ ಹೊಸ ಮಹೀಂದ್ರಾ XUV700 ಅನ್ನು ಖರೀದಿಸಿದ್ದರು. ನಿನ್ನೆಯಷ್ಟೇ ಆಟೋವಾರ್ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರು, ಲ್ಯಾಂಡ್ ರೋವರ್ ಡಿಫೆಂಡರ್ 130 (Land Rover Defender 130) ಕಾರನ್ನು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಈ ಎಸ್‌ಯುವಿ ಸೆಡೋನಾ ರೆಡ್ ಪೇಂಟ್ ಬಣ್ಣದ ಆಯ್ಕೆಯನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ 130 ಎಸ್‌ಯುವಿಯನ್ನು ಬಾಬಾ ರಾಮದೇವ್ ಖರೀದಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದು, ಟಾಪ್ ಎಂಡ್ ಮಾದರಿಯಾಗಿರುವುದರಿಂದ ಭಾರತದ ಮಾರುಕಟ್ಟೆಯಲ್ಲಿ ರೂ.1.41 ಕೋಟಿ ಬೆಲೆಯನ್ನು ಹೊಂದಿದೆ. ಜೊತೆಗೆ 6 ಆಸನ ಆಯ್ಕೆಯಲ್ಲಿ ಲಭ್ಯವಿದೆ.
ನೂತನ ಲ್ಯಾಂಡ್ ರೋವರ್ ಡಿಫೆಂಡರ್ 130 ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು, 2998 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದು, 394 Bhp ಗರಿಷ್ಠ ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಆಟೋಮೆಟೆಕ್ ಟ್ರಾನ್ಸ್‌ಮಿಷನ್ ಆಯ್ಕೆಯಲ್ಲಿ ಲಭ್ಯವಿದ್ದು, AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.
ಈ ಕಾರು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 11.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 4 ಜೋನ್ ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಅಲಾಯ್ ವೀಲ್ಸ್, ಫಾಗ್ ಲೈಟ್ಸ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬಾಬಾ ರಾಮದೇವ್ ಅವರು, ಮಹೀಂದ್ರಾ XUV700ಯನ್ನು ಖರೀದಿಸಿದ್ದರು ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ರೂಪಾಂತರಗಳ ಬಗ್ಗೆ ವಿವರಗಳು ಲಭ್ಯವಾಗಿರಲಿಲ್ಲ. ಆಕರ್ಷಕ ಸನ್‌ರೂಫ್ ಹೊಂದಿದ್ದರಿಂದ ಇದು, ಟಾಪ್ ಎಂಡ್ ಮಾದರಿಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ XUV700 ರೂ.14.01 ರಿಂದ ರೂ.26.18 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಬಾಬಾ ರಾಮದೇವ್ ಅವರಿಗೆ ಬೈಕ್ ಹಾಗೂ ಕಾರುಗಳೆಂದರೆ, ಸಖತ್ ಕ್ರೇಜ್. ಈ ಹಿಂದೆ, ಜಾಗ್ವಾರ್ ಎಕ್ಸ್‌ಜೆ ಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಹೀರೋ ಇಂಪಲ್ಸ್ ಬೈಕ್ ನಲ್ಲಿ ರೈಡ್ ಮಾಡಿದ್ದರು. ಒಮ್ಮೆ, ಡುಕಾಟಿ ಸ್ಕ್ರ್ಯಾಂಬ್ಲರ್ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಕುಳಿತು ಪ್ರಯಾಣಿಸಿದ್ದರು. ಸದ್ಯ, ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ 130 ಎಸ್‌ಯುವಿಯನ್ನು ಡ್ರೈವ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications