Video: ಪ್ರವಾಹಕ್ಕೂ ಜಗ್ಗದೇ ಚಲಿಸಿದ ಮಾರುತಿ ಸುಜುಕಿ ಜಿಮ್ನಿ, ಧಮ್ ಅಂದ್ರೆ ಇದೇ ಅಲ್ವಾ!
ಮಾರುತಿ ಸುಜುಕಿ (Maruti Suzuki) ಜಿಮ್ನಿ 5 ಡೋರ್ ಎಸ್‌ಯುವಿ ಆಫ್-ರೋಡ್ ಪ್ರಿಯರ ನೆಚ್ಚಿನ ವಾಹನವಾಗಿದೆ. ಎಂತಹ ಗುಡ್ಡಗಾಡಿನ ರಸ್ತೆಯಿರಲಿ, ಯಾವುದೇ ಅಡೆತಡೆ ಇಲ್ಲದೇ ಜಿಮ್ನಿ ಸರಾಗವಾಗಿ ಚಲಿಸಬಲ್ಲದು. ಇದೇ ಕಾರಣಕ್ಕೆ ಬಹುತೇಕ ಯುವ ಜನರು ಈ ಎಸ್‌ಯುವಿಯನ್ನು ಖರೀದಿಸಲು ಇಷ್ಟಪಡುತ್ತಾರೆ.
ಆಫ್-ರೋಡ್ ವೆಹಿಕಲ್ ಖರೀದಿಸುವವರೂ ಯಾವಾಗಲೂ ಆ ವಾಹನದಲ್ಲಿ ವಾಟರ್ ವೇಡಿಂಗ್ ಕ್ಯಾಪಾಸಿಟಿ (ನೀರು ತಡೆಯುವ ಸಾಮರ್ಥ್ಯ) ಎಷ್ಟಿದೆ ಎಂಬುದರ ಆಧಾರದ ಮೇಲೆ ಕೊಂಡುಕೊಳ್ಳಬೇಕೇ, ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಆಫ್-ರೋಡ್ ಚಾಲನೆಯೆಂದರೆ ಕೇವಲ ಬೆಟ್ಟ, ಗುಡ್ಡದಲ್ಲಿ ವಾಹನ ಚಲಾಯಿಸುವುದಲ್ಲ. ಕೆಲವೊಮ್ಮೆ, ನದಿ ಸೇರಿದಂತೆ ಸಣ್ಣ ಹಳ್ಳಗಳನ್ನು ದಾಟಬೇಕು. ಅಂತಹ ಸಂದರ್ಭದಲ್ಲಿ ವಾಟರ್ ವೇಡಿಂಗ್ ಕ್ಯಾಪಾಸಿಟಿ ನಿರ್ಣಾಯಕವಾಗುತ್ತದೆ.

ಇತ್ತೀಚೆಗೆ ಹೊಚ್ಚ ಹೊಸ ಮಾರುತಿ ಸುಜುಕಿ ಜಿಮ್ನಿಯ ವಾಟರ್ ವೇಡಿಂಗ್ ಕ್ಯಾಪಾಸಿಟಿ ಪರೀಕ್ಷೆಯನ್ನು ಮಾಡಲು ಅದರ ಮಾಲೀಕರು ಮುಂದಾಗುತ್ತಾರೆ. ಅದಕ್ಕಾಗಿ ಭಾರೀ ಮಳೆಯಿಂದ ನೀರು ತುಂಬಿ, ಪ್ರವಾಹ ಪರಿಸ್ಥಿತಿ ಉಂಟಾದಂತೆ ಭಾಸವಾಗುತ್ತಿದ್ದ ಅಂಡರ್‌ಪಾಸ್‌ಗೆ ಜಿಮ್ನಿಯನ್ನು ತೆಗೆದುಕೊಂಡು ಹೋಗಿ, ಒಂದೆರಡು ಬಾರಿ ಚಲಿಸುತ್ತಾರೆ. ಸದ್ಯ, ಆ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಹಂಚಿಕೊಳ್ಳಲಾಗಿದೆ.
ಮಾರುತಿ ಸುಜುಕಿ ಜಿಮ್ನಿಯನ್ನು ಅದರ ಚಾಲಕ, ನೀರು ತುಂಬಿದ ದೆಹಲಿಯ ಅಂಡರ್‌ಪಾಸ್‌ನಲ್ಲಿ ಯಾವುದೇ ರೀತಿಯ ಅಡೆ - ತಡೆಯಿಲ್ಲದೇ ಸುಲಭವಾಗಿ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇತರೆ ಸವಾರರು, ಆ ನೀರಿನಲ್ಲಿ ತಮ್ಮ ವಾಹನವನ್ನು ಚಲಿಸಿಕೊಂಡು ಬಂದು ಅಲ್ಲಿಯೇ ಸರಿಪಡಿಸುತ್ತಿರುವದನ್ನು ನೋಡಬಹುದು. ಈ ಪರೀಕ್ಷೆ ಮುಖಾಂತರ ಜಿಮ್ನಿಯ ವಾಟರ್ ವೇಡಿಂಗ್ ಕ್ಯಾಪಾಸಿಟಿ ಎಷ್ಟಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ.
ಯಾರೇ ಆಗಲಿ.. ಈ ರೀತಿಯ ವಾಟರ್ ವೇಡಿಂಗ್ ಕ್ಯಾಪಾಸಿಟಿ ಪರೀಕ್ಷೆ ಮಾಡುವ ಮೊದಲು ತಮ್ಮ ವಾಹನಗಳನ್ನು ಪರಿಶೀಲಿಸಬೇಕು. ಎಲೆಕ್ಟ್ರಿಕ್ ಪರಿಕರಗಳು ಜಲನಿರೋಧಕವಾಗಿವೆ ಎಂಬುದನ್ನು ನೋಡಿಕೊಂಡು, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ರೀತಿಯ ಸಾಹಸಕ್ಕೆ ಕೈ ಹಾಕುವ ಮೊದಲು ನೀರಿನ ಹರಿವಿನ ವೇಗದ ಬಗ್ಗೆ ತಿಳಿದುಕೊಳ್ಳಿ. ನೀರು ವೇಗವಾಗಿ ಹರಿಯುತ್ತಿದ್ದರೆ, ಅಲ್ಲೇ ಸಿಲುಕಿಕೊಳ್ಳಬಹುದು. ಇಲ್ಲವೇ, ವಾಹನವೇ ಕೊಚ್ಚಿಕೊಂಡು ಹೋಗಬಹುದು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‌ಯುವಿ ಬಗ್ಗೆ ಒಂದಿಷ್ಟು ವಿಚಾರವನ್ನು ತಿಳಿಯುವುದಾದರೆ, ಇದು, ರೂಪಾಂತರಗಳಿಗೆ ಅನುಗುಣವಾಗಿ ರೂ.1,274,000 ದಿಂದ ರೂ.1,505,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ 31 ಸಾವಿರಕ್ಕೂ ಹೆಚ್ಚಿನ ಬುಕ್ಕಿಂಗ್ ಪಡೆದುಕೊಳ್ಳುವ ಈಗಾಗಲೇ ದೇಶೀಯ ಯುವ ಗ್ರಾಹಕರಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿದೆ.
ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಪವರ್ ಫುಲ್ ಎಂಜಿನ್ ಪಡೆದಿದೆ. ಇದರ, 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್104.8 Ps ಗರಿಷ್ಠ ಪವರ್ ಹಾಗೂ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಮತ್ತು 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
ಜಿಮ್ನಿಯ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಕಂಟ್ರೋಲ್ ಒಳಗೊಂಡಂತೆ ಬಗೆ ಬಗೆಯ ಫೀಚರ್ಸ್ ಪಡೆದಿದೆ.


Click it and Unblock the Notifications