Video: ಮಿಂಚಿನ ವೇಗದಲ್ಲಿ ವಿದ್ಯಾರ್ಥಿನಿಯನ್ನು ಟೊಯೊಟಾ ಇನೋವಾದಲ್ಲಿ Exam ಸೆಂಟರ್ ತಲುಪಿಸಿದ ಪೊಲೀಸರು
ಪೊಲೀಸರು ಮಾಡುವ ಕೆಲಸವನ್ನು 'ಥಾಂಕ್ ಲೆಸ್ ಜಾಬ್' ಎನ್ನುತ್ತಾರೆ. ಆದರೆ, ಅವರ ಕೆಲವೊಂದು ಪರೋಪಕಾರಿ ಕೆಲಸಗಳಿಗೆ ಆಗಾಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ. ಇದೀಗ, ತಮಿಳುನಾಡು ಪೊಲೀಸರು ವಿದ್ಯಾರ್ಥಿಯೊಬ್ಬಳಿಗೆ ನೀಟ್ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವೈರಲ್ ಆಗಿದೆ. ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದಾರೆ.
ದೇಶಾದ್ಯಂತ ವೈದಕೀಯ ಪ್ರವೇಶಕ್ಕಾಗಿ ಮೇ 7ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಯನ್ನು ನಡೆಸಲಾಗಿತ್ತು. ಸರಿ ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಕ್ಸಾಮ್ ಗೆ ಹಾಜರಾಗಿದ್ದರು. ತಮಿಳುನಾಡಿನಲ್ಲಿ ತಪ್ಪು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಅಲ್ಲಿನ ಟ್ರಾಫಿಕ್ ಪೊಲೀಸರು ಕೆಲವೇ ನಿಮಿಷದಲ್ಲಿ ಸರಿಯಾದ ಸೆಂಟರ್ ಗೆ ತಲುಪಿಸಿದ್ದಾರೆ. ಆ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದೊಳಗೆ ಓಡಿಹೋಗುತ್ತಿವುದನ್ನು ಕಾಣಬಹುದು. ಪೊಲೀಸರ ಪ್ರಕಾರ, ತಿತ್ತೂರಿನ ಬಿಆರ್ ಶಾಲೆಯ ವಿ.ಆನಂದಿ ಎಂಬ ವಿದ್ಯಾರ್ಥಿನಿ, ಆವಡಿಯ ಜಯಗೋಪಾಲ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು. ಆದರೆ, ಅಲ್ಲಿನ ಸಿಬ್ಬಂದಿ ಆಕೆಯ ಪ್ರವೇಶ ಪತ್ರವನ್ನು ಪರಿಶೀಲಿಸಿದ್ದು, ತಪ್ಪು ಕೇಂದ್ರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಗೊಂದಲಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಗೆ ಅಲ್ಲೇ ಇದ್ದ ಟ್ರಾಫಿಕ್ ಪೊಲೀಸರು ನೆರವಾಗಿದ್ದಾರೆ.
ತಕ್ಷಣ ಆ ವಿದ್ಯಾರ್ಥಿನಿಯನ್ನು ಭದ್ರತೆಗೆ ನಿಯೋಜಿಸಿದ್ದ ಕಾರಿನಲ್ಲಿ ಕೂರಿಸಿಕೊಂಡು, ತಿರುಮುಲ್ಲೈವೊಯಲ್‌ನ ಸರಿಯಾದ ಪರೀಕ್ಷಾ ಕೇಂದ್ರಕ್ಕೆ ಕೆಲವೇ ನಿಮಿಷಗಳಲ್ಲಿ ತಲುಪಿಸಿದ್ದಾರೆ. ಇದನ್ನು ನೆಟ್ಟಿಗರು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ. ಅದ್ಬುತ ಕೆಲಸವೆಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವಿಬ್ಬರು ರೋಲ್ ಮಾಡೆಲ್ ಆಗಿದ್ದೀರಿ. ವಿದ್ಯಾರ್ಥಿನಿಗೆ ಸಹಾಯ ಮಾಡಿರುವ ನಿಮ್ಮ ಕಾರ್ಯವನ್ನು ಮೆಚ್ಚಲೇಬೇಕು ಎಂದು ಬರೆದುಕೊಂಡಿದ್ದಾರೆ.
ವಿದ್ಯಾರ್ಥಿನಿಯನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿಸಲು ಪೊಲೀಸರು, ಟೊಯೊಟಾ ಇನೋವಾ ಕ್ರಿಸ್ಟಾವನ್ನು ಬಳಕೆ ಮಾಡಿದ್ದಾರೆ. ಈಗಾಗಲೇ ತಮಿಳುನಾಡು, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದಲ್ಲಿ ಇನೋವಾ ಪೊಲೀಸ್ ಇಲಾಖೆಯ ಮೆಚ್ಚಿನ ವಾಹನವಾಗಿದೆ. ದೊಡ್ಡ ಕಾರ್ಯಾಚರಣೆ ಹಾಗೂ ಬೆಂಗಾವಲು ವಾಹನವಾಗಿ ಇದನ್ನೇ ಉಪಯೋಗ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಇದು ವಿಶ್ವಾಸಾರ್ಹ ವೆಹಿಕಲ್ ಆಗಿದೆ.
ಸದ್ಯ, ಟೊಯೊಟಾ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಡೀಸೆಲ್ ಆವೃತ್ತಿಯನ್ನು ರೀ-ಲಾಂಚ್ ಮಾಡಿದೆ. ಇದು ರೂ.19.99 ಲಕ್ಷದಿಂದ 25.43 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 2.4 ಲೀಟರ್ ಡೀಸೆಲ್ ಎಂಜಿನ್ 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ವಿದ್ಯಾರ್ಥಿನಿಯನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿಸಿದ ಪೊಲೀಸರು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಕೆಲವೊಮ್ಮೆ ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಈ ರೀತಿಯ ಎಡವಟ್ಟು ಮಾಡಿಕೊಳ್ಳುವುದು ಸಹಜ. ಅದಕ್ಕಾಗಿ ಪರೀಕ್ಷೆಯ ಹಿಂದಿನ ದಿನ ಅಥವಾ ಪ್ರವೇಶ ಪತ್ರ ದೊರೆತ ಕೊಡಲೇ ಎಕ್ಸಾಮ್ ಸೆಂಟರ್ ಯಾವುದೆಂದು ಖಚಿತಪಡಿಸಿಕೊಳ್ಳಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications