70ರ ವಯಸ್ಸಲ್ಲೂ ಯುವಕರು ನಾಚುವಂತೆ ಸ್ಪೋರ್ಟ್ಸ್ ಕಾರನ್ನು ಓಡಿಸಿದ ವೃದ್ಧೆ
ಇತ್ತೀಚೆಗೆ ಕೇರಳದ ಅಜ್ಜಿಯೊಬ್ಬರು ಸ್ಪೋರ್ಟ್ಸ್ ಕಾರ್ ಓಡಿಸುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಸ್ಪೋರ್ಟ್ಸ್ ಕಾರು ಓಡಿಸುತ್ತಾ ಕಾಣಿಸಿಕೊಂಡಿರುವ ಅಜ್ಜಿಯ ಹೆಸರು ರಾಧಾಮಣಿ, ಈ ವೃದ್ಧೆ ಸಾಮಾನ್ಯ ಅಜ್ಜಿಯಲ್ಲ. 70 ರ ವಯಸ್ಸಲ್ಲೂ ಪ್ರೊಫೆಷನಲ್ ಡ್ರೈವರ್‌ಗಳಂತೆ ಕಾರುಗಳನ್ನು ಓಡಿಸುವ ಚಾಣಾಕ್ಷತನವನ್ನು ಹೊಂದಿದ್ದಾರೆ.
ವಿಡಿಯೋದಲ್ಲಿ ಏನಿದೆ: ರಾಧಾಮಣಿ BMW Z4 ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರನ್ನು ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ವಿಡಿಯೋ ಆರಂಭವಾಗುತ್ತಿದ್ದಂತೆ ಮಹೀಂದ್ರಾ ಥಾರ್‌ನಲ್ಲಿ ಬರುತ್ತಾರೆ. ಬಳಿಕ ಒಂದೆಡೆ ಮಹೀಂದ್ರಾ ಥಾರ್ ನಿಲ್ಲಿಸಿ, ನಂತರ BMW Z4 ಸ್ಪೋರ್ಟ್ಸ್ ಕಾರ್ ಕಡೆ ಹೋಗಿ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರನ್ನೇ ಓಡಿಸಲಿದ್ದೇನೆ ನೋಡಿ ಎಂದು ಹೇಳುತ್ತಾರೆ.

ಬಳಿಕ ರಾಧಾಮಣಿ ಡ್ರೈವರ್ ಸೀಟಿನಲ್ಲಿ ಕುಳಿತು ಕಾರನ್ನು ಓಡಿಸಲು ಪ್ರಾರಂಭಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಸಾಮಾನ್ಯ ದೃಶ್ಯವಾಗಿದ್ದರೂ, ರಾಧಾಮಣಿ ಅವರ ವಯಸ್ಸು ಸುಮಾರು 73 ವರ್ಷ ಮತ್ತು ಭಾರತದಲ್ಲಿ ಇಷ್ಟು ವಯಸ್ಸಿನ ಜನರು, ವಿಶೇಷವಾಗಿ ಮಹಿಳೆಯರು ಕಾರುಗಳನ್ನು ಓಡಿಸುವುದನ್ನು ನಾವು ನೋಡುವುದಿಲ್ಲ. ಯಾವುದೇ ಸಮಸ್ಯೆಗಳಿಲ್ಲದೆ ಆತ್ಮವಿಶ್ವಾಸದಿಂದ Z4 ಕಾರನ್ನು ಈ ವೃದ್ದೆ ಚಾಲನೆ ಮಾಡಿ ವೈರಲ್ ಆಗಿದ್ದಾರೆ.
ಡ್ರೈವಿಂಗ್ ಸ್ಕೂಲ್‌ನ ಓನರ್: ರಾಧಾಮಣಿ ಕೇರಳದ ಕೊಚ್ಚಿಯಲ್ಲಿರುವ A2Z ಡ್ರೈವಿಂಗ್ ಸ್ಕೂಲ್‌ನ ಮಾಲೀಕರಾಗಿದ್ದಾರೆ. ಡ್ರೈವಿಂಗ್ ಸ್ಕೂಲ್ ಅನ್ನು 1970 ರಲ್ಲಿ ಅವರ ಪತಿ ಸ್ಥಾಪಿಸಿದರು. ರಾಧಾಮಣಿ ಅವರು 30 ವರ್ಷದವರಾಗಿದ್ದಾಗ ಮೊದಲು ಕಾರು ಓಡಿಸುವುದನ್ನು ಕಲಿತರು. ಆಕೆಯ ಪತಿಯೇ ಡ್ರೈವಿಂಗ್ ಕಲಿಯಲು ಒತ್ತಾಯಿಸಿದ್ದರಂತೆ. ಪ್ರಸ್ತುತ 11 ವಿವಿಧ ವರ್ಗಗಳ ವಾಹನಗಳನ್ನು ಓಡಿಸಲು ಪರವಾನಗಿಗಳನ್ನು ಹೊಂದಿದ್ದಾರೆ.

ಅಗೆಯುವ ಯಂತ್ರ, ಫೋರ್ಕ್‌ಲಿಫ್ಟ್, ಕ್ರೇನ್, ರೋಡ್ ರೋಲರ್, ಟ್ರಾಕ್ಟರ್, ಕಂಟೈನರ್ ಟ್ರೈಲರ್ ಟ್ರಕ್, ಬಸ್, ಲಾರಿ ಮತ್ತು ಇನ್ನೂ ಹೆಚ್ಚಿನ ವಾಹನಗಳನ್ನು ಓಡಿಸಲು ಅಜ್ಜಿ ಪರವಾನಗಿಯನ್ನು ಹೊಂದಿದ್ದಾಳೆ. ಕೇರಳದಲ್ಲಿ ಭಾರೀ ವಾಹನ ಪರವಾನಗಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ರಾಧಾಮಣಿ ಪಾತ್ರರಾಗಿದ್ದಾರೆ. 2021 ರಲ್ಲಿ ಅವರು ಅಪಾಯಕಾರಿ ಸರಕುಗಳನ್ನು ಸಾಗಿಸಲು ಕೂಡ ಪರವಾನಗಿ ಪಡೆದರು.
ಅವರು 1988 ರಲ್ಲಿ ಬಸ್ ಮತ್ತು ಲಾರಿ ಎರಡಕ್ಕೂ ಮೊದಲ ಪರವಾನಗಿ ಪಡೆದರು. ಈ ಪರವಾನಗಿಗಳನ್ನು ಪಡೆಯಲು ಕಾರಣ ಅವರು 2004 ರಲ್ಲಿ ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ನಂತರ ಡ್ರೈವಿಂಗ್ ಸ್ಕೂಲ್ ವ್ಯವಹಾರವನ್ನು ಸ್ವತಃ ನಡೆಸಬೇಕಾಗಿತ್ತು. ಡ್ರೈವಿಂಗ್ ಸ್ಕೂಲ್ ನಡೆಸಲು, ಮಾಲೀಕರು ಅಥವಾ ಬೋಧಕರು ಅವರು ಕಲಿಸುವ ವಾಹನಗಳಿಗೆ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದೆ.

ಒಂದು ಕುತೂಹಲಕಾರಿ ಸಂಗತಿಯೆಂದರೆ, ರಾಧಾಮಣಿ ಈ ಎಲ್ಲಾ ಭಾರೀ ವಾಹನಗಳು ಮತ್ತು ಕಾರುಗಳನ್ನು ಓಡಿಸಲು ಪರವಾನಗಿ ಹೊಂದಿದ್ದರೂ, ಆಕೆಯ ಅತ್ಯಂತ ನೆಚ್ಚಿನ ವಾಹನವೆಂದರೆ ದ್ವಿಚಕ್ರ ವಾಹನ. ಅವರು 1993 ರಲ್ಲಿ ತಮ್ಮ ದ್ವಿಚಕ್ರ ವಾಹನ ಪರವಾನಗಿಯನ್ನು ಪಡೆದರು. ಅವರು 2020 ರಲ್ಲಿ ಮಾಧ್ಯಮ ಪ್ರಕಟಣೆಗೆ ನೀಡಿದ ಸಂದರ್ಶನದಲ್ಲಿ, ಅವರ ಪತಿ ತನಗಾಗಿ ಸ್ಕೂಟರ್ ಕೊಡಿಸಿದ್ದರು. ಅಂದಿನಿಂದ ತನ್ನ ಸ್ಕೂಟರ್‌ನಲ್ಲೇ ಓಡಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತೀರಾ ಅಗತ್ಯವಿದ್ದಾಗ ಮಾತ್ರ ಕಾರು ಅಥವಾ ಇತರ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಭಾರತದಲ್ಲಿ 73 ವರ್ಷದ ಮಹಿಳೆಯೊಬ್ಬರು ಸ್ಪೋರ್ಟ್ಸ್ ಕಾರನ್ನು ಓಡಿಸುವುದು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ರಾಧಾಮಣಿ ಇನ್ನೂ ಅನೇಕರಿಗೆ ಸ್ಫೂರ್ತಿಯಾಗಲಿ ಎಂದು ನಾವು ಭಾವಿಸುತ್ತೇವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications