ಪಾದಚಾರಿ ಮೇಲ್ಸೇತುವೆ ಮೆಟ್ಟಿಲಿನ ಮೇಲೆ ಆಟೋ ಓಡಿಸಿದ, ಮುಂದಿತ್ತು 'ಮಾರಿಹಬ್ಬ'.. ವಿಡಿಯೋ ಫುಲ್ ವೈರಲ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಸಂಚಾರ ದಟ್ಟಣೆ ಎಂಬುದು ದಿನನಿತ್ಯದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಬೆಳಗ್ಗೆ, ಸಂಜೆ ವಾಹನ ಸವಾರರು ಗಂಟೆ ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ನಿಂತುಕೊಂಡು ಮನೆ ಅಥವಾ ಕಚೇರಿಗೆ ತಲುಪಲು ತಡವಾಗುತ್ತದೆ. ಮಳೆ ಬಂದರೆ ಪರಿಸ್ಥಿತಿಯೂ ಇನ್ನೂ ಕಷ್ಟವಾಗುತ್ತದೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಯೊಂದು ಭಾರೀ ವೈರಲ್ ಆಗಿದೆ. ಸಂಚಾರ ದಟ್ಟಣೆಯಿಂದ ಪಾರಾಗಲು ಚಾಲಕನೊಬ್ಬ ತನ್ನ ಆಟೋವನ್ನು ಸಾರ್ವಜನಿಕರು ಓಡಾಡುವ ಪಾದಚಾರಿ ಮೇಲ್ಸೇತುವೆ (foot over bridge) ಮೆಟ್ಟಿಲಿನ ಮೇಲೆ ಓಡಿಸಿದ್ದಾನೆ. ಈ ಘಟನೆ ದೆಹಲಿಯ ಹಮ್ದರ್ದ್ ನಗರದ ಸಂಗಮ್ ವಿಹಾರ್ ಟ್ರಾಫಿಕ್ ಸರ್ಕಲ್ ನಲ್ಲಿ ವರದಿಯಾಗಿದೆ.

ಆಟೋ ಚಾಲಕ, ಪಾದಚಾರಿ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾನೆ. ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಿಕೊಂಡು ಬೇಗ ಹೋಗಲು ಈ ಕೆಲಸ ಮಾಡಿದ್ದಾನೆ. ಈ ಚಾಲಕನನ್ನು 25 ವರ್ಷದ ಮುನ್ನಾ ಎಂದು ಗುರುತಿಸಲಾಗಿದೆ. ಈತ, ಮೊದಲಿಗೆ ಆಟೋವನ್ನು ರಸ್ತೆಯಿಂದ ಫುಟ್‌ಪಾತ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಮೇಲ್ಸೇತುವೆ ಮೆಟ್ಟಿಲುಗಳ ಮೇಲೆ ಹತ್ತಿಸಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ದೃಶ್ಯಗಳನ್ನು ಗಮನಿಸಿದಾಗ, ಆ ಚಾಲಕ ಮೇಲ್ಸೇತುವೆ ಮೇಲೆ ಆಟೋ ಓಡಿಸುವುದನ್ನು ಆರಂಭಿಸಿದಾಗ ಯಾವುದೇ ಪ್ರಯಾಣಿಕರು ಇರುವುದಿಲ್ಲ ಆದರೆ, ಕೆಲವೇ ಸೆಕೆಂಡುಗಳ ಅಂತರದಲ್ಲಿ ಮತ್ತೊಬ್ಬ ವ್ಯಕ್ತಿ ಆಟೋವನ್ನು ಹತ್ತಿದ್ದಾನೆ. ಬಹುಶಃ ಆಟೋ ಚಾಲಕನ ಸ್ನೇಹಿತನಿರಬೇಕು. ಈತ ಆಟೋವನ್ನು ಮೆಟ್ಟಿಲುಗಳ ಮೇಲೆ ಓಡಿಸಲು ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಪಾದಚಾರಿ ಮೇಲ್ಸೇತುವೆ ಮೇಲೆ ನಡೆದುಕೊಂಡು ಬರುತ್ತಿದ್ದ ಜನರು, ಆಟೋ ಚಾಲಕನ ಕೆಲಸವನ್ನು ಕಂಡು ಗಾಬರಿಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ, ದೆಹಲಿ ಪೊಲೀಸರು ಆಟೋವನ್ನು ವಶಪಡಿಸಿಕೊಂಡಿದ್ದು, ಚಾಲಕ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ಇವರೊಬ್ಬರು ಸಂಗಮ್ ವಿಹಾರ್ ನಿವಾಸಿಗಳೆಂದು ತಿಳಿದುಬಂದಿದೆ.
ದೆಹಲಿ ಸೇರಿದಂತೆ ಬಹುತೇಕ ಸಂಚಾರ ದಟ್ಟಣೆ ಹೆಚ್ಚಿರುವ ನಗರಗಳ ಯಾವುದೇ ಆಟೋ ಚಾಲಕರು ಇಂತಹ ಕೆಲಸಗಳಿಗೆ ಕೈ ಹಾಕುವುದಿಲ್ಲ. ಕೊಂಚ ನಿಧಾನವಾದರೂ ತಮ್ಮ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನವನ್ನು ಸುರಕ್ಷಿತವಾಗಿ ತಲುಪಿಸುತ್ತಾರೆ. ಆದರೆ, ಈ ಚಾಲಕ, ಯಾವ ಕಾರಣಕ್ಕೆ ಈ ರೀತಿಯಾಗಿ ಪಾದಚಾರಿ ಮೇಲ್ಸೇತುವೆ ಮೇಲೆ ಆಟೋ ಓಡಿಸಿದ ಎಂಬುದು ಗೊತ್ತಾಗಿಲ್ಲ.
ಇನ್ನು, ರಸ್ತೆ ಅಥವಾ ಹೆದ್ದಾರಿಯಲ್ಲಿ ವಾಹನ ಚಲಿಸುವ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದರಿಂದ ನಡೆಯಬಹುದಾದ ಅಪಘಾತವನ್ನು ತಪ್ಪಿಸಬಹುದು. ನಿಮ್ಮ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ನಿಗದಿತ ಲೈನ್ ನಲ್ಲಿ ಓಡಿಸಿ, ಒನ್ ವೇಗಳಲ್ಲಿ ಯಾವ ಕಾರಣಕ್ಕೂ ಸಂಚರಿಸಬೇಡಿ. ಟ್ರಾಫಿಕ್ ನಿಯಮಗಳನ್ನು ಪಾಲಿಸಿರಿ. ನಿರ್ದಿಷ್ಟ ವೇಗ ಮಿತಿಗಲ್ಲಿ ವಾಹನಗಳನ್ನು ಡ್ರೈವ್ ಮಾಡಿರಿ.
ಮದ್ಯಪಾನ ಮಾಡಿ, ಎಂದಿಗೂ ವಾಹನಗಳನ್ನು ಓಡಿಸಬೇಡಿ. ಜೊತೆಗೆ, ಕಾರು/ ದ್ವಿಚಕ್ರ ವಾಹನ ಚಲಿಸುವ ಫೋನ್ ನಲ್ಲಿ ಮಾತನಾಡಬೇಡಿ. ಕಾರುಗಳಲ್ಲಿ ಕಡ್ಡಾಯಾಗಿ ಸೀಟ್ ಬೆಲ್ಟ್ ಧರಿಸಿ, ಬೈಕ್ ಅಥವಾ ಸ್ಕೂಟರ್ ಗಳಲ್ಲಿ ಹೋಗುವಾಗ ತಲೆಗೆ ಹೆಲ್ಮೆಟ್ ಧರಿಸುವುದನ್ನು ಮರೆಯದಿರಿ. ಈ ಮೂಲಕ ಸಂಭವಿಸಬಹುದಾದ ದೊಡ್ಡ ಅಪಾಯವನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications