Viral Video: ಕಾರ್ ಡ್ರೈವಿಂಗ್‌ನಲ್ಲಿ ಪಂಟನಿರಬೇಕು... ವೇಗದ ಬಸ್ ಡಿಕ್ಕಿ ಹೊಡೆದ್ರೂ ಖತರ್ನಾಕ್ ಎಸ್ಕೇಪ್
ಕಾರ್ ಡ್ರೈವಿಂಗ್ ಎಲ್ಲರೂ ಮಾಡುತ್ತಾರೆ, ಆದ್ರೆ ಸಮಯ ಪ್ರಜ್ಞೆಯಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ವಿಶೇಷ ಚಾಲನಾ ಕೌಶಲ್ಯವಿರಬೇಕು. ಇದಕ್ಕೆ ಉದಾಹರಣೆ ಎಂಬಂತೆ ಮಹೀಂದ್ರಾ XUV300 ಚಾಲಕರೊಬ್ಬರು ತನ್ನಿಂದಾಗುವ ಅಪಘಾತಗಳನ್ನು ಕ್ಷಣಾರ್ಧದಲ್ಲಿ ತಪ್ಪಿಸಿರುವ ದೃಶ್ಯಗಳು ವೈರಲ್ ಆಗಿವೆ.
ಕೇರಳದಲ್ಲಿ ನಡೆದ ಇತ್ತೀಚಿನ ಘಟನೆಯು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಗ್ನಲ್ ಬೀಳುವ ವೇಳೆ ತುಸು ವೇಗದಲ್ಲಿ ಬಂದು ನಿಲ್ಲುವ XUV300 ಕಾರಿಗೆ ಹಿಂದೆಯೇ ಅತಿ ವೇಗದಲ್ಲಿ ಬಂದ ಬಸ್ ಡಿಕ್ಕಿ ಹೊಡೆಯುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿಕ್ಕಿಯ ಬಳಿಕ ಆಗಿದ್ದೇ ಎಲ್ಲರನ್ನು ತುಂಬಾ ರೋಮಾಂಚನಗೊಳಿಸುತ್ತದೆ. ಕಾರು ಚಾಲಕನ ಸಮಯ ಪ್ರಜ್ಞಾ ಚಾಲನೆಗೆ ಎಂಥವರು ಫಿದಾ ಆಗುತ್ತಾರೆ.

ನಿಯಂತ್ರಣ ಕಳೆದುಕೊಂಡ ಬಸ್ XUV300 ಎಸ್‌ಯುವಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಗ್ನಲ್‌ನಲ್ಲಿ ನಿಂತಿದ್ದ ಕಾರು, ರಸ್ತೆಯ ಎದುರು ಭಾಗಕ್ಕೆ ಎಸೆಯಲ್ಪಟ್ಟಿದೆ. ಈ ವೇಳೆ ಎಂಥವರಿಗಾಗಲಿ ಕಾರುಗಳು ನಿಯಂತ್ರಣಕ್ಕೆ ಸಿಗುವುದು ತುಂಬಾ ಕಷ್ಟ. ಅದರಲ್ಲು ಎದುರುಗಡೆ ವಾಹನಗಳಿದ್ದರೇ ಹೇಳುವುದೇ ಬೇಡ ಅಪಘಾತದ ತೀವ್ರತೆ ಇನ್ನೂ ಹೆಚ್ಚಾಗುತ್ತದೆ. ಆದ್ರೆ ಇಲ್ಲಿ ಹಾಗಾಗಿಲ್ಲ.
XUV300 ಕಾರು ಚಾಲಕ ಇತರ ವಾಹನಗಳಿಗೆ ಡಿಕ್ಕಿಯಾಗದಂತೆ ರಕ್ಷಿಸಿದ್ದಾರೆ. ನಿಜಕ್ಕೆ ಇದೊಂದು ದೊಡ್ಡ ಜಂಕ್ಷನ್‌ನಂತೆ ಕಾಣುತ್ತಿದ್ದು ಒಂದೆಡೆ ಸಿಗ್ನಲ್ ಬಿಟ್ಟು ವಾಹನಗಳು ಸಂಚರಿಸುತ್ತಿದ್ದರೆ, ಇನ್ನೊಂದೆಡೆ ಸಿಗ್ನಲ್‌ನಲ್ಲಿ ವಾಹನಗಳು ಕಾಯುತ್ತಿವೆ. ಇಂತಹ ಸನ್ನಿವೇಶದಲ್ಲು ಯಾವುದೇ ವಾಹನಕ್ಕೂ ಡಿಕ್ಕಿಯಾಗದೇ ಕಾರು ಚಾಲಕ ಸೇಫ್ ಆಗಿದ್ದಾನೆಂದರೆ ಆತ ಡ್ರೈವಿಂಗ್‌ನಲ್ಲಿ ಪಂಟನಿರಬೇಕು.

ಇತರ ಕಾರುಗಳೊಂದಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ತನ್ನ SUV ಅನ್ನು ಆ ಜಂಕ್ಷನ್ ಸುತ್ತಾ ಒಂದು ತಿರುವು ತೆಗೆದುಕೊಂಡಿದ್ದಾನೆ. ಬಳಿಕ ಯಾರಿಗೂ ಡಿಕ್ಕಿ ಹೊಡೆಯದೆ ಸಂಪೂರ್ಣವಾಗಿ ಕಾರನ್ನು ನಿಲ್ಲಿಸಿದ್ದಾನೆ. ನಿಯಂತ್ರಣ ತಪ್ಪಿದ ಬಸ್ ಕೂಡ ಕಾರಿಗೆ ಡಿಕ್ಕಿ ಹೊಡೆದು ವೇಗ ಕಡಿಮೆ ಮಾಡಿ ಸಂಪೂರ್ಣ ನಿಂತಿದೆ. ಬಸ್ ನಿಯಂತ್ರಣವನ್ನು ಕಳೆದುಕೊಂಡಿರಬಹುದು ಅಥವಾ ಬ್ರೇಕ್ ಫೇಲ್ ಆಗಿರುವ ಸಾಧ್ಯತೆಯೂ ಇದೆ.
ಕಾರು ಮತ್ತು ಬಸ್ ಎರಡಕ್ಕೂ ಹಾನಿಯಾಗಿದೆ. ಆದರೆ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಮತ್ತು ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಪಘಾತದ ಕುರಿತು ಕಾರಿನ ಮಾಲೀಕ ಮಾತನಾಡಿ, ಹಿಂಬದಿಯ ಕನ್ನಡಿಯಲ್ಲಿ ಬಸ್ ಬರುವುದನ್ನು ಮೊದಲೇ ಗುರುತಿಸಿದ್ದೆ. ಇದೇ ವೇಳೆ ಡಿಕ್ಕಿಯನ್ನು ತಪ್ಪಿಸಲು ಪ್ರಯತ್ನಿಸಿದೆ, ಆದರೆ ಅಷ್ಟೊತ್ತಿಗಾಗಲೇ ಬಸ್ ಅಪ್ಪಳಿಸಿದೆ ಎಂದು ತಿಳಿಸಿದರು.
ಅಲ್ಲದೇ ಸೀಟ್ ಬೆಲ್ಟ್ ಮಹತ್ವವನ್ನು ಕೂಡ ತಿಳಿಸಿದರು, ನಾನು ಸೀಟ್ ಬೆಲ್ಟ್ ಧರಿಸಿದ್ದರಿಂದ ಆಗಬಹುದಾದ ಹೆಚ್ಚಿನ ಹಾನಿಯನ್ನು ತಡೆದಿದ್ದೇನೆ. ಒಂದು ವೇಲೆ ಸೀಟ್ ಬೆಲ್ಟ್ ಹಾಕಿಲ್ಲದಿದ್ದರೇ ನನಗೆ ಹಾನಿಯಾಗುವುದಲ್ಲದೇ ಕಾರನ್ನು ನಿಯಂತ್ರಿಸುವ ಸಮಯ ಕೂಡ ಸಿಗುತ್ತಿರಲಿಲ್ಲ. ಈ ಅಪಘಾತದಲ್ಲಿ ಸೀಟ್ ಬೆಲ್ಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು XUV300 ಮಾಲೀಕ ಹೇಳಿದರು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇಂತಹ ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೂ, ನಿಮ್ಮ ಜಾಗರೂಕತೆಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳಿವೆ. ಟ್ರಾಫಿಕ್ ಸಿಗ್ನಲ್‌ಗಳು ಅಥವಾ ಟೋಲ್ ಗೇಟ್‌ಗಳಲ್ಲಿ ಕಾಯುತ್ತಿರುವಾಗ, ಎಡಭಾಗದಲ್ಲಿರುವ ಲೇನ್‌ಗಳನ್ನು ಆಯ್ಕೆ ಮಾಡಲು ಸಲಹೆ ನೀಡುತ್ತೇವೆ. ಏಕೆಂದರೆ ಭಾರೀ ವಾಹನಗಳು ಹೆಚ್ಚಾಗಿ ಬಲಭಾಗದಲ್ಲಿರುವ ಲೇನ್‌ಗಳನ್ನು ಬಯಸುತ್ತವೆ. ಇದನ್ನು ಪರಿಗಣಿಸಿ ಅವುಗಳಿಗೆ ಸ್ಥಳ ಮಾಡಿಕೊಟ್ಟರೆ ಒಂದಷ್ಟರ ಮಟ್ಟಿಗೆ ಸೇಫ್ ಆಗಬಹುದು.


Click it and Unblock the Notifications