Viral video: ಡ್ಯಾಷ್ ಕ್ಯಾಮ್‌ನಿಂದ ಬಚಾವ್... ಇಲ್ಲದಿದ್ರೆ ಅನ್ಯಾಯವಾಗಿ ಕುಟುಂಬಕ್ಕೆ ಮೋಸ!
ಇತ್ತೀಚೆಗೆ ಹಣ ಸುಳಿಗೆ ಮಾಡುವ ಹೊಸ ಟ್ರಿಕ್ ಅನ್ನು ದರೋಡೆಕೊರರು ಕಂಡುಕೊಂಡಿದ್ದಾರೆ. ಸುಖಾಸುಮ್ಮನೆ ವಾಹನಗಳಿಗೆ ಅಡ್ಡಬಂದು ಅಪಘಾತವಾದಂತೆ ನಟನೆ ಮಾಡಿ ಅವರಿಂದ ಹಣ ಸುಳಿಗೆ ಮಾಡುವುದು ಇವರ ಪ್ಲಾನ್. ಆದ್ರೆ ಇಲ್ಲಿ ಬಹುತೇಕ ಹೀಗೆ ಆಗಿದೆ. ಆದ್ರೆ ಇವರು ದರೋಡೆಕೋರರಲ್ಲ, ಬದಲಾಗಿ ತಪ್ಪಾಗಿ ವಾಹನ ಚಲಾಯಿಸಿ ದಬಾಯಿಸಲು ಹೋರಟವರು.
ನಮ್ಮೆಲ್ಲರಿಗೂ ಇಂಥವರೊಬ್ಬರು ಖಂಡಿತ ಎದುರಾಗಿರುತ್ತಾರೆ, ಹೌದು ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಸವಾರರು ಅಜಾಗರೂಕತೆಯಿಂದ ಸವಾರಿ ಮಾಡುವುದು ಭಾರತದಲ್ಲಿ ಹೊಸ ವಿದ್ಯಮಾನವೇನಲ್ಲ. ಈ ದ್ವಿಚಕ್ರ ವಾಹನ ಸವಾರರ ಅಜಾಗರೂಕತೆಯಿಂದಾಗಿ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ತಮ್ಮ ತಪ್ಪಿಗೆ ಬೇರೆಯವರ ಮೇಲೆ ಆರೋಪ ಮಾಡಿ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನಿದರ್ಶನಗಳೂ ಇವೆ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನಡೆದ ಇಂತಹ ಘಟನೆಯೊಂದು ಇಲ್ಲಿದೆ. ಈ ವೀಡಿಯೋವನ್ನು ಶೇರ್ ಮಾಡಿದ ವ್ಯಕ್ತಿ ಕೂಡ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ತನ್ನ ಕುಟುಂಬದೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ ಎನ್‌ನಲ್ಲಿ ಪ್ರಯಾಣ ಆರಂಭಿಸಿ ಅದನ್ನು ವಿಡಿಯೋ ಮಾಡುತ್ತಾ ಸಾಗಿದ್ದರು. ತನ್ನ ಪತ್ನಿ ಮತ್ತು ಮಗುವಿನೊಂದಿಗೆ ತಮಿಳುನಾಡಿನ ಸೇಲಂನಲ್ಲಿರುವ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು.
ಪ್ರಯಾಣದ ಮಾರ್ಗವು ಅಂಕುಡೊಂಕಾದ ರಸ್ತೆಗಳೊಂದಿಗೆ ಕೂಡಿದ್ದು, ಗ್ರಾಮೀಣ ಪ್ರದೇಶದ ಕಿರಿದಾದ ರಸ್ತೆಯಲ್ಲಿ ಪ್ರಯಾಣ ಬೆಳೆಸಿದ್ದರು. ಈ ರಸ್ತೆಗಳನ್ನು ನೋಡಿದ್ರೆ ಇನ್ನೊಂದು ಬದಿಯಿಂದ ಏನು ಬರುತ್ತಿದೆ ಎಂಬುದೇ ಗೊತ್ತಾಗೊದಿಲ್ಲ. ರಸ್ತೆಯು ಹೆಚ್ಚು ಜನನಿಬಿಡವಾಗಿಲ್ಲ, ಚಾಲಕ ಸಹ ಯೋಗ್ಯವಾದ ವೇಗದಲ್ಲಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶವಾದ್ದರಿಂದ ಜಾಗರೂಕರಾಗಿ ಪ್ರತಿ ಮೂಲೆಯಲ್ಲಿ ಹಾರ್ನ್ ಮಾಡುತ್ತಿದ್ದರು.

ಹೀಗೇ ಪ್ರಯಾಣ ಸಾಗುತ್ತಿದ್ದ ವೇಳೆ ಒಂದು ತಿರುವಿನಲ್ಲಿ ಎಂದಿನಂತೆ ಹಾರ್ನ್ ಒತ್ತಿ ತಿರುವು ಪಡೆಯಲು ಮುಂದಾಗಿದ್ದಾರೆ. ಇದೇ ವೇಳೆ ಅತ್ತಕಡೆಯಿಂದ ರಾಂಗ್ ಸೈಡ್ ನಿಂದ ಬೈಕ್ ಸವಾರನೊಬ್ಬ ತನ್ನ ವಾಹನದ ಕಡೆಗೆ ಬರುತ್ತಿರುವುದು ಕಂಡಿತು. ಸ್ಕಾರ್ಪಿಯೋ ಎನ್ ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದು, ಬೈಕ್ ಸವಾರ ಬೈಕ್ ಅನ್ನು ಕಾರಿನಿಂದ ದೂರಕ್ಕೆ ತಿರುಗಿಸಿದ್ದಾನೆ. ಆದರೆ, ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.
ಇಬ್ಬರೂ ಸ್ಥಳೀಯರಾಗಿದ್ದು, ಹೆಲ್ಮೆಟ್ ಧರಿಸಿರಲಿಲ್ಲ. ಅದೃಷ್ಟವಶಾತ್, ಅವರು SUV ಗೆ ಅಪ್ಪಳಿಸಲಿಲ್ಲ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ನಡೆದಿವೆ. ಆದ್ರೆ ಇಲ್ಲಿಂದ ಆರಂಭವಾಯ್ತು ನೋಡಿ ಅಸಲಿ ಆಟ. ಆ ಇಬ್ಬರು ಬೈಕ್ ಸವಾರರು ಬಂದದ್ದೇ ರಾಂಗ್ ರೂಟ್, ಅಲ್ಲದೇ ಕಾರು ಚಾಲಕನೇ ತಪ್ಪಾಗಿ ಬಂದಿದ್ದಾನೆ ಎಂದು ಆರೋಪಿಸಿ ಅಲ್ಲಿ ಜಗಳ ತೆಗೆದಿದ್ದಾರೆ.

ತಿರುಗಿಬಿದ್ದ ಬೈಕರ್‌ಗಳು: ಸ್ಕಾರ್ಪಿಯೋ ಡ್ರೈವರ್ ಬೈಕ್ ಸವಾರರನ್ನು ಗಾಯಗಳಾಗಿವೆ ಎಂದು ವಿಚಾರಿಸಲು ನೋಡಿದ್ರೆ ತಕ್ಷಣ ಸವಾರರು ಎದ್ದು ನಿಂತು ವಾಗ್ವಾದ ನಡೆಸಿದ್ದಾರೆ. ಕಾರಿನಲ್ಲಿದ್ದವರು ಸ್ಥಳೀಯರಲ್ಲ ಎಂದು ಅರಿತುಕೊಂಡ ಅವರು ದೊಡ್ಡ ಜಗಳ ಮಾಡಲು ಪ್ರಾರಂಭಿಸಿದರು. ಬೈಕ್ ಸವಾರರೇ ರಾಂಗ್ ಸೈಡ್ ನಿಂದ ಬರುತ್ತಿದ್ದರು ತಮ್ಮ ತಪ್ಪಲ್ಲ ಎಂದು ಅಲ್ಲಿದ್ದವರಿಗೆ ತಿಳಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.
ಏಕೆಂದರೆ ಕಾರು ಪ್ರಯಾಣಿಕರು ಹೊರರಾಜ್ಯದವರಾದ್ದರಿಂದ ಸ್ಥಳೀಯರಿಗೆ ಅವರ ಭಾಷೆ ಅರ್ಥವಾಗದೇ ಗೊಂದಲಕ್ಕೊಳಗಾಗಿದ್ದು ದ್ವಿಚಕ್ರ ವಾಹನ ಸವಾರರ ಪರವಾಗಿ ನಿಂತಿದ್ದರು. ಅಪಘಾತಕ್ಕೆ ಸ್ಕಾರ್ಪಿಯೋ ಎನ್ ಚಾಲಕನ ಮೇಲೆ ಆರೋಪ ಹೊರಿಸಲು ಬೈಕ್ ಸವಾರರು ಯತ್ನಿಸುತ್ತಿದ್ದರು. ಆದರೆ, ಬೈಕ್ ಸವಾರನದ್ದೇ ತಪ್ಪು ಎಂಬುದಕ್ಕೆ ತನ್ನ ಬಳಿ ವಿಡಿಯೋ ಸಾಕ್ಷಿ ಇದೆ ಎಂದು ಅವರು ಹೇಳಿದ್ದಾರೆ.
ಕಾಪಾಡಿದ್ದೇ ಡ್ಯಾಷ್‌ಕ್ಯಾಮ್: ಡ್ಯಾಶ್ ಕ್ಯಾಮ್ ಬಹುತೇಕ ಎಲ್ಲವನ್ನೂ ರೆಕಾರ್ಡ್ ಮಾಡಿದೆ ಎಂದು ಸ್ಥಳೀಯರು ಅರಿತುಕೊಂಡಿದ್ದರಿಂದ ಸುದೀರ್ಘ ವಾಗ್ವಾದದ ನಂತರ ಸ್ಥಳೀಯರು ಸ್ಥಳದಿಂದ ತೆರಳಿದರು. ಕಾರಿನಲ್ಲಿ ಡ್ಯಾಶ್‌ಕ್ಯಾಮ್ ಇಲ್ಲದಿದ್ದಲ್ಲಿ ಸ್ಥಳೀಯರು ಹಣ ಪೀಕುವುದಲ್ಲದೇ ಅಜಾಗರೂಕತೆಯಿಂದ ಚಾಲನೆ ಮಾಡಿದ್ದ ಎಂದ ಆರೋಪ ಹೊರೆಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಡ್ಯಾಶ್ ಕ್ಯಾಮ್ ಎಷ್ಟು ಮುಖ್ಯ ಎಂಬುದನ್ನು ಈ ವೀಡಿಯೊ ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.


Click it and Unblock the Notifications