ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕಿನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿಗೆ ಸಂಕಷ್ಟ?
ಸದ್ಯ ಜಗತ್ತಿನ ಅತಿ ದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು ಕಳೆದ ವರ್ಷ ತನ್ನ ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಆರ್ ಬೈಕ್ ಬಿಡುಗಡೆ ಮಾಡಿತ್ತು. ಹೀಗಾಗಿ ಹೊಸ ಬೈಕ್ ಉತ್ಪನ್ನದ ಜಾಹೀರಾತಿಗಾಗಿ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದ ಹೀರೋ ಸಂಸ್ಥೆಗೆ ಇದೀಗ ಸಂಕಷ್ಟ ಎದುರಾಗಿದೆ.

ವಾಹನ ಉತ್ಪಾದನಾ ಸಂಸ್ಥೆಗಳು ಹೆಚ್ಚಾಗಿ ಕ್ರಿಡಾ ದಿಗ್ಗಜರನ್ನೇ ಆಯ್ಕೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಯತ್ನ ಮಾಡುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಗ್ರಾಹಕರನ್ನು ಸೆಳೆಯುವ ಒಂದೇ ಉದ್ದೇಶದಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಜಾಹೀರಾತುಗಳ ಹಾವಳಿ ಹೆಚ್ಚುತ್ತಿದ್ದು, ಇದೀಗ ಕೊಹ್ಲಿ ಅವರ ಹೀರೋ ಎಕ್ಸ್‌ಟ್ರಿಮ್ 200ಆರ್ ಬೈಕ್ ಸ್ಟಂಟ್ ಜಾಹೀರಾತು ಕೂಡಾ ಟೀಕೆಗೆ ಗುರಿಯಾಗಿದೆ.

ಈ ಹಿಂದೆ ತನ್ನ ಹೊಸ ಬೈಕ್ ಉತ್ಪನ್ನಗಳಿಗಾಗಿ ಕ್ರಿಕೆಟ್ ದಿಗ್ಗಜರಾದ ವಿರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ಮತ್ತು ಜಹೀರ್ ಖಾನ್ ಅವರನ್ನ ಆಯ್ಕೆ ಮಾಡಿದ್ದ ಹೀರೋ ಮೋಟೋಕಾರ್ಪ್ ಸಂಸ್ಥೆಯು ಈ ಬಾರಿ ತನ್ನ ಹೊಸ ಉತ್ಪನ್ನವಾದ ಎಕ್ಸ್‌ಟ್ರಿಮ್200ಆರ್ ಜಾಹೀರಾತಿಗಾಗಿ ವಿರಾಟ್ ಕೊಹ್ಲಿ ಆಯ್ಕೆ ಮಾಡಿಕೊಂಡಿತ್ತು.

ಎಕ್ಸ್‌ಟ್ರಿಮ್ 200ಆರ್ ಬೈಕಿನ ಟಿವಿ ಜಾಹೀರಾತಿನಲ್ಲಿ ಬೈಕ್ ರೈಡ್ ಮಾಡುತ್ತಿರುವ ವಿರಾಟ್ ಕೊಹ್ಲಿ ಅಪಾಯಕಾರಿ ಸ್ಟಂಟ್ ಮಾಡುವ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಅಪಾದನೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ಎಎಸ್‌ಸಿಎ ಸಂಸ್ಥೆಯು ಹೀರೋ ಸಂಸ್ಥೆಗೆ ನೋಟಿಸ್ ನೀಡಿದೆ.

ಸಾರ್ವಜನಿಕರ ದೂರುಗಳ ಅನ್ವಯ ಭಾರತೀಯ ಜಾಹೀರಾತು ಸ್ವಯಂ ನಿಯಂತ್ರಣ ಸಂಸ್ಥೆಯು(ASCI) ಹೀರೋ ಸಂಸ್ಥೆಗೆ ನೋಟಿಸ್ ನೀಡಿದ್ದು, ಸಾರ್ವಜನಿಕ ಸ್ಥಳಗಲ್ಲಿ ಅಪಾಯಕಾರಿ ಸ್ಟಂಟ್, ಪಾದಾಚಾರಿಗಳ ಸುರಕ್ಷತೆಗೆ ಧಕ್ಕೆ ಮತ್ತು ಚಲಿಸುತ್ತಿರುವ ಟ್ರಕ್‌ಗಳ ಮಧ್ಯೆ ಅಪಾಯಕಾರಿ ರೈಡಿಂಗ್ ಮಾಡುತ್ತಿರುವುದು ಸಾರಿಗೆ ನಿಯಮಗಳಿಗೆ ವಿರುದ್ದವಾಗಿದೆ.

ಸೆಲೆಬ್ರಿಟಿಗಳು ಮಾಡುವ ಅಪಾಯಕಾರಿ ಸ್ಟಂಟ್‌ಗಳನ್ನು ಅವರ ಅಭಿಮಾನಿಗಳು ಫಾಲೋ ಮಾಡುವ ಸಾಧ್ಯತೆಗಳಿದ್ದು, ಇದು ಸಾರ್ವಜನಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಅವಕಾಶಗಳಿರುತ್ತವೆ. ಹೀಗಾಗಿ ಈ ಕೂಡಲೇ ಪ್ರಸಾರವಾಗುತ್ತಿರುವ ಅಪಾಯಕಾರಿ ಜಾಹೀರಾತು ನಿಲ್ಲಿಸುವಂತೆ ಖಡಕ್ ಸೂಚನೆ ನೀಡಲಾಗಿದೆ.

ರ‍್ಯಾಪ್ ಸಾಂಗ್ ಒಂದರ ಮೂಲಕ ಆರಂಭವಾಗುವ ವಿರಾಟ್ ಕೊಹ್ಲಿ ಬೈಕ್ ರೈಡ್ ಜಾಹೀರಾತು ತದನಂತರ ಡ್ರ್ಯಾಗ್ ರೇಸ್ ಮಾಡುವುದಲ್ಲದೇ ಅಪಾಯಕಾರಿ ಸ್ಟಂಟ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದ್ದು, ವಿಡಿಯೋ ಕೊನೆಯ ಭಾಗದಲ್ಲಿ ಟ್ರಕ್‌ಗಳ ಮಧ್ಯೆ ಬೈಕ್ ರೈಡ್ ಮಾಡುವ ದೃಶ್ಯವು ಸಹ ಅಪಾಯಕಾರಿಯಾಗಿದೆ.
ಆದ್ರೆ ಮಾಡಿದ ತಪ್ಪಿಗೆ ತೆಪೆ ಹಚ್ಚುವ ಕೆಲಸಕ್ಕೆ ಮುಂದಾಗಿರುವ ಹೀರೋ ಸಂಸ್ಥೆಯು ವಿಡಿಯೋದಲ್ಲಿ ಸ್ಟಂಟ್ ಮಾಡಿರುವುದು ಕೊಹ್ಲಿ ಅವರು ಅಲ್ಲ, ಬದಲಿಗೆ ಅವರಂತೆ ಬಿಂಬಿಸಲಾಗಿದೆ ಎಂದಿದೆ. ಆದರೂ ವಿರಾಟ್ ಕೊಹ್ಲಿ ರೂಪದಲ್ಲಿರುವುದು ಅವರ ಅಭಿಮಾನಿ ಕೆಟ್ಟ ಸಂದೇಶ ಹೋಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಸಿಐ ನೋಟಿಸ್‌ಗೆ ಉತ್ತರ ನೀಡಿರುವ ಹೀರೋ ಸಂಸ್ಥೆಯು ವಿಡಿಯೋದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದಾಗಿ ಒಪ್ಪಿಗೆ ಸೂಚಿಸಿದ್ದು, ಮತ್ತೆ ಅದೇ ದಾಟಿಯನ್ನು ಮುಂದುವರಿಸಿದ್ದಲ್ಲಿ ಕೊಹ್ಲಿಗೂ ಸಂಕಷ್ಟ ತಪ್ಪಿದ್ದಲ್ಲ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇನ್ನು ದೇಶದಲ್ಲಿ ಪ್ರಸಾರವಾಗುವ ಜಾಹೀರಾತುಗಳ ಮೇಲೆ ನಿಯಂತ್ರಣ ಹೊಂದಿರುವ ASCI ಸಂಸ್ಥೆಯ ಗ್ರಾಹಕರ ದೂರುಗಳ ಕೌನಿಲ್ಸ್ (CCC)ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೆ. ಈ ಮೂಲಕ ಹದ್ದು ಮೀರಿ ಪ್ರಚಾರ ಗಿಟ್ಟಿಸಿಕೊಳ್ಳುವ ಜಾಹೀರಾತುಗಳಿಗೆ ಕಡಿವಾಣ ಹಾಕುತ್ತಿದೆ.

ಒಂದು ವೇಳೆ ನಿಮಗೂ ಕೂಡಾ ಯಾವುದಾದರೂ ಜಾಹೀರಾತಿನಲ್ಲಿ ತಪ್ಪು ಸಂದೇಶ ಬಿತ್ತರವಾಗುತ್ತಿರುವುದು, ಅಸಭ್ಯವಾಗಿ ಕಂಡುಬಂದಲ್ಲಿ ಇಲ್ಲವೇ ಇದು ಅಕ್ರಮ, ಸುಳ್ಳು ಎಂದು ಕಂಡುಬಂದಲ್ಲಿ ನೀವು ಕೂಡಾ ದೂರು ದಾಖಲಿಸಿ ತಕ್ಕ ಪಾಠ ಕಲಿಸಬಹುದು.
MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಇದಲ್ಲದೇ ಸುರಕ್ಷಿತ ಬೈಕ್ ಚಾಲನೆಗೆ ಪ್ರೋತ್ಸಾಹಿಸಬೇಕಾದ ಸೆಲೆಬ್ರಿಟಿಗಳೇ ಹೀಗೆ ಸ್ಟಂಟ್ ಮಾಡುವುದನ್ನು ಉತ್ತೇಜನೆ ಮಾಡುತ್ತಿರುವುದು ಕಳವಳಕಾರಿ ಅಂಶವಾಗಿದ್ದು, ಕೇವಲ ಹಣದಾಸೆಗಾಗಿ ಅಪಾಯಕಾರಿ ಸ್ಟಂಟ್ ಮಾಡಿ ಜನತೆಗೆ ತಪ್ಪು ಸಂದೇಶ ನೀಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಹಲವರ ಪ್ರಶ್ನೆಯಾಗಿದೆ.


Click it and Unblock the Notifications