ಭಾರತೀಯ ಲೈಸನ್ಸ್ ಇಟ್ಟುಕೊಂಡು ವಿದೇಶಗಳಲ್ಲಿ ಗಾಡಿ ಓಡಿಸಲು ಸಾಧ್ಯವೇ?
ದುಡ್ಡಿದ್ದರೆ ಸಾಕು ಭಾರತದಲ್ಲಿ ಡ್ರೈವಿಂಗ್ ಲೈಸನ್ಸ್ ಗಿಟ್ಟಿಸಿಕೊಳ್ಳುವುದು ಅತ್ಯಂತ ಸುಲಭ ಎಂಬ ಮಾತಿದೆ. ಅಧಿಕಾರಿಗಳಿಗೆ ಗಿಂಬಳ ಕೊಡಲು ತಯಾರಾದ್ದಲ್ಲಿ ಟು ವೀಲರ್ ಯಾಕೆ ಫೋರ್ ವೀಲರ್ ಡ್ರೈವಿಂಗ್ ಲೈಸನ್ಸ್ ಸಹ ನಿಮ್ಮ ಜೇಬಿಗೆ ಬಂದು ಸೇರಲಿದೆ. ಅದೇ ಹೊತ್ತಿಗೆ ವಿದೇಶಗಳಲ್ಲಿ ರಸ್ತೆ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಚಾಲನಾ ಪರವಾನಗಿ ಪರೀಕ್ಷೆಯ ವೇಳೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತದೆ.
ನೀವು ಅಂದುಕೊಂಡ ಹಾಗೆ ವಿದೇಶಗಳಲ್ಲಿ ಗಾಡಿ ಓಡಿಸುವುದು ಅಷ್ಟು ಸುಲಭವಲ್ಲ. ಸಿಗ್ನಲ್ ಜಂಪ್, ಲೇನ್ ತಪ್ಪಿದ್ದಲ್ಲಿ ದಂಡ ಕಟ್ಟಿಟ್ಟ ಬುತ್ತಿ. ಆದರೆ ನಯವಾಗಿರುವ ಆಗಿರುವ ರೋಡ್ ಗಳು ಪ್ರತಿಯೋರ್ವನಿಗೂ ಒಮ್ಮೆ ಗಾಡಿ ಓಡಿಸುವಂತೆ ಪ್ರೋತ್ಸಾಹಿಸುತ್ತದೆ. ಹೀಗೆ ಭಾರತೀಯ ಲೈಸನ್ಸ್ ಇಟ್ಟುಕೊಂಡು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಗಾಡಿ ಓಡಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವೊಂದು ಅಂಶಗಳ ಬಗ್ಗೆ ಇಲ್ಲಿ ವಿವರಣೆಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

01. ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ಕಾಡು ಪ್ರದೇಶಗಳಲ್ಲಿ ನಿರ್ಜನವಾಗಿ ಹರಡಿರುವ ರಸ್ತೆಗಳಲ್ಲಿ ಸಂಚರಿಸುವಾಗ ಕಾರಿನಲ್ಲಿ ಬೇಕಾದಷ್ಟು ಇಂಧನವಿದೆ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ಪಂಚರ್ ಆದಾಗ ಬದಲಾಯಿಸಲು ಹೆಚ್ಚುವರಿ ಚಕ್ರವನ್ನು ಜೋಪಾನವಾಗಿಟ್ಟುಕೊಳ್ಳಿರಿ. ಇನ್ನು ಅಗತ್ಯಕ್ಕೆ ಬೇಕಾದಷ್ಟು ನೀರು ಹಾಗೂ ಆಹಾರದ ಪೊಟ್ಟಣ ಜೊತೆಗಿರಲಿ. ಆಸ್ಟ್ರೇಲಿಯಾದಲ್ಲಿ ಅಂತರಾಷ್ಟ್ರೀಯ ಚಾಲನಾ ಪರವಾನಗಿ ಇಟ್ಟುಕೊಂಡು ಭಾರತೀಯರಿಗೆ ಕಾರು ಓಡಿಸಬಹುದಾಗಿದೆ.

02. ನ್ಯೂಜಿಲೆಂಡ್
ನ್ಯೂಜಿಲೆಂಡ್ ನಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಮಾನಂತರವಾಗಿ ಕಾರು ಪಾರ್ಕಿಂಗ್ ಮಾಡಿದ್ದಲ್ಲಿ ದಂಡ ಕಟ್ಟಬೇಕಾದಿತು. ಹಾಗಾಗಿ ಟ್ರಾಫಿಕ್ ಹರಿಯುವ ಕಡೆಗೆ ವಾಹನ ಪಾರ್ಕಿಂಗ್ ಮಾಡಿದ್ದಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ. ನ್ಯೂಜಿಲೆಂಡ್ ನಲ್ಲೂ ಒಂದು ವರ್ಷದ ಅವಧಿಯ ವರೆಗೆ ಭಾರತೀಯ ಚಾಲನಾ ಪರವಾನಗಿ ಇಟ್ಟುಕೊಂಡು ವಾಹನ ಚಾಲನೆ ಮಾಡಬಹುದಾಗಿದೆ.

03. ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದ ದಟ್ಟಾರಣ್ಯದಲ್ಲಿ ಚಾರಣಕ್ಕೆ ತೆರಳುವವರು ಅಗತ್ಯಕ್ಕೆ ತಕ್ಕಷ್ಟು ಇಂಧನವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳತಕ್ಕದ್ದು. ಆದರೆ ವನ್ಯಜೀವಿಗಳ ಆಕ್ರಮಣ ಭೀತಿಯೂ ಇರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಅಂತರಾಷ್ಟ್ರೀಯ ಚಾಲನಾ ಪರವಾನಗಿ ಮೇಲೆ ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.

04. ಸೌದಿ ಅರೇಬಿಯಾ
ವರದಿಗಳ ಪ್ರಕಾರ ಸೌದಿ ಅರೇಬಿಯಾದಲ್ಲಿ ಪ್ರತಿ ನಾಲ್ವರಲ್ಲಿ ಓರ್ವರಿಗೆ ಕಾರಿದೆ. ಆದರೆ ಮಹಿಳೆಯರಿಗೆ ಚಾಲನೆಯನ್ನು ನಿಷೇಧಿಸಲಾಗಿದೆ. ಇನ್ನು ಭಾರತೀಯ ಚಾಲನಾ ಪರವಾನಗಿ ಹೊಂದಿರುವವರಿಗೆ ಅನೇಕ ಷರತ್ತುಗಳನ್ನು ಹೇರಲಾಗಿದೆ.

05. ಚೀನಾ
ಹಗಲು ಹೊತ್ತಿನಲ್ಲಿ ತಿಳಿಯದೆಯೋ ಹೆಡ್ ಲೈಟ್ ಆನ್ ನಲ್ಲಿಟ್ಟುಕೊಂಡರೆ ದಂಡ ತೆರಬೇಕಾದಿತು. ಚೀನಾದಲ್ಲಿ ಭಾರತೀಯ ಡೈವಿಂಗ್ ಲೈಸನ್ಸ್ ಗೆ ಮಾನ್ಯ ವಿನಿಮಯ ಇರುವುದಿಲ್ಲ.

06. ಹಾಂಕಾಂಗ್
ಹಾಂಕಾಂಗ್ ನಲ್ಲಿ ಆರು ವರ್ಷ ತಲುಪಿದಾಗಲೇ ಮಕ್ಕಳಿಗೆ ವಾರ್ಷಿಕ ರಸ್ತೆ ಅರ್ಹತಾ ಪರೀಕ್ಷೆಯನ್ನು ಏರ್ಪಡಿಸಲಾಗುತ್ತದೆ. 12 ತಿಂಗಳುಗಳಿಗೆ ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.

07. ಜಪಾನ್
ಮನೆಯ ಹತ್ತಿರ ಪಾರ್ಕಿಂಗ್ ಜಾಗ ಸರ್ಟಿಫಿಕೇಟ್ ಹಾಜರುಪಡಿಸಿದ್ದಲ್ಲಿ ಮಾತ್ರ ಜಪಾನ್ ನಲ್ಲಿ ಕಾರು ಖರೀದಿಸಬಹುದಾಗಿದೆ. ಇಲ್ಲೂ 12 ತಿಂಗಳುಗಳಿಗೆ ಮಾತ್ರ ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುವುದು.

08. ರಷ್ಯಾ
ರಷ್ಯಾದಲ್ಲಿ ಕೊಳಕು ಕಾರನ್ನು ಓಡಿಸುವುದು ಅಪರಾಧವಾಗಿದೆ. ಹಾಗಾಗಿ ನಿಮ್ಮ ಕಾರಿನ ನಂಬರ್ ಪ್ಲೇಟ್ ಶುಚಿತ್ವವನ್ನು ಕಾಪಾಡಿಕೊಳ್ಳಿ. ಆರು ತಿಂಗಳುಗಳ ಕಾಲ ಭಾರತೀಯ ಲೈಸನ್ಸ್ ನಲ್ಲಿ ಕಾರು ಓಡಿಸಬಹುದಾಗಿದೆ.

09. ಫಿನ್ ಲ್ಯಾಂಡ್
ಫಿನ್ ಲ್ಯಾಂಡ್ ನಲ್ಲಿ ಹೆಡ್ ಲೈಟ್ ಕಡ್ಡಾಯವಾಗಿ ಆನ್ ಮಾಡಿಟ್ಟುಕೊಳ್ಳತಕ್ಕದ್ದು. ಇಲ್ಲಿ 12 ತಿಂಗಳುಗಳ ಕಾಲ ಭಾರತೀಯ ಡ್ರೈವಿಂಗ್ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.

10. ಸ್ವೀಡನ್
ಸ್ವೀಡನ್ ನಲ್ಲಿ ಹಗಲು ಹೊತ್ತಿನಲ್ಲೂ ಹೆಡ್ ಲೈಟ್ ಆನ್ ಮಾಡಿಟ್ಟುಕೊಳ್ಳತಕ್ಕದ್ದು. 1967ರ ಇಸವಿಯ ವರೆಗೆ ಎಡಭಾಗದ ಚಾಲನೆಯನ್ನು ಹಿಂಬಾಲಿಸುತ್ತಿದ್ದ ಸ್ವೀಡನ್ ಬಳಿಕ ಬಲಭಾಗಕ್ಕೆ ತಿರುಗಿತ್ತು. ಅಂತರಾಷ್ಟ್ರೀಯ ಚಾಲನಾ ಪರವಾನಗಿಯ ನೆರವಿನೊಂದಿಗೆ ಭಾರತೀಯರು ಗಾಡಿ ಓಡಿಸಬಹುದಾಗಿದೆ.

11. ಜರ್ಮನಿ
ವಿಶ್ವ ಪ್ರಸಿದ್ಧ ಆಟೋಬಾನ್ ಹೆದ್ದಾರಿಯಲ್ಲಿ ಇಂಧನ ಖಾಲಿಯಾದ್ದಲ್ಲಿ ನಿಮ್ಮ ಚಾಲನಾ ಪರವಾನಗಿ ಆರು ತಿಂಗಳುಗಳ ಕಾಲ ನಿಷೇಧಿಸುವ ಭೀತಿಯಿರುತ್ತದೆ. ಆರು ತಿಂಗಳುಗಳ ಕಾಲ ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.

12. ಬೆಲ್ಜಿಯಂ
ಅತ್ಯಂತ ಸುಂದರ ಹಾಗೂ ಆಕರ್ಷಕ ರಸ್ತೆ ವ್ಯವಸ್ಥೆಯನ್ನು ಬೆಲ್ಜಿಯಂ ಒದಗಿಸುತ್ತದೆ. ಇಲ್ಲೂ ಆರು ತಿಂಗಳುಗಳ ವರೆಗೆ ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.

13. ಫ್ರಾನ್ಸ್
ಫ್ರಾನ್ಸ್ ನಲ್ಲಿ ವಾಹನ ಓಡಿಸುವಾಗ ಉಸಿರುನೋಡುಕ ಅತ್ಯಗತ್ಯವಾಗಿದ್ದು, ತಪ್ಪಿದ್ದಲ್ಲಿ ದಂಡ ತೆರಬೇಕು. ಅಷ್ಟೇ ಯಾಕೆ ಸಂಪೂರ್ಣ ಪ್ಯಾರಿಸ್ ನಗರದಲ್ಲಿ ಒಂದೇ ಒಂದು 'ಸ್ಟಾಪ್' ಚಿಹ್ನೆ ಲಗತ್ತಿಸಿರುವುದು ಅಚ್ಚರಿ ಮೂಡಿಸುತ್ತದೆ. ಭಾರತೀಯ ಲೈಸನ್ಸ್ ಇಟ್ಟುಕೊಂಡು ಒಂದು ವರ್ಷದ ವರೆಗೆ ಗಾಡಿ ಓಡಿಸಬಹುದಾಗಿದೆ.

14. ಸ್ವಿಜರ್ಲೆಂಡ್
ಸ್ವಿಜರ್ಲೆಂಡ್ ನಲ್ಲಿ ಹಗಲು ಹೊತ್ತಿನಲ್ಲೂ ಮಂಕಾಗಿರುವ ಹೆಡ್ ಲೈಟ್ ಕಡ್ಡಾಯವಾಗಿದೆ. ಅಲ್ಲದೆ ಶಬ್ದ ಮಾಲಿನ್ಯದ ಹಿನ್ನಲೆಯಲ್ಲಿ ಭಾನುವಾರದಂದು ಕಾರು ಶುಚಿಗೊಳಿಸುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಭಾರತೀಯರು ಅಂತರಾಷ್ಟ್ರೀಯ ಚಾಲನಾ ಪರವಾನಗಿ ಇಟ್ಟುಕೊಂಡು ಗಾಡಿ ಓಡಿಸಬಹುದಾಗಿದೆ.

15. ಇಟಲಿ
ಬ್ರೇಕ್ ಫೇಲ್ ಆಗುವ ಭೀತಿ ಹಿನ್ನಲೆಯಲ್ಲಿ ಪ್ರತಿಯೊಂದು ವಾಹನದಲ್ಲೂ ಪ್ರತಿಫಲಿತ ಜಾಕೆಟ್ (ಕೆಂಪು ಅಥವಾ ಹಳದಿ) ಹಾಗೂ ವಾರ್ನಿಂಗ್ ಚಿಹ್ನೆಯನ್ನು ಹೊಂದಿರತಕ್ಕದ್ದು. ಇಲ್ಲೂ ಅಂತರಾಷ್ಟ್ರೀಯ ಚಾಲನಾ ಪರವಾನಗಿ ಆಧಾರವಾಗಿಟ್ಟುಕೊಂಡು ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.

16. ಸ್ಪೇನ್
ನೀವು ಕನ್ನಡಕ ಧರಿಸಿ ಗಾಡಿ ಓಡಿಸುವುದು ಅನಿವಾರ್ಯವಾದ್ದಲ್ಲಿ ಹೆಚ್ಚುವರಿ ಕನ್ನಡಕವನ್ನು ನಿಮ್ಮ ಜೊತೆ ಒಯ್ಯತಕ್ಕದ್ದು. ಅಂತರಾಷ್ಟ್ರೀಯ ಪರವಾನಗಿ ಬೆಂಬಲದಲ್ಲಿ ಭಾರತೀಯರು ಗಾಡಿ ಓಡಿಸಬಹುದಾಗಿದೆ.

17. ಬ್ರಿಟನ್
ಬ್ರಿಟನ್ ನಲ್ಲಿ ಭಾರತೀಯ ಪರವಾನಗಿ ಇಟ್ಟುಕೊಂಡೇ ವಾಹನ ಚಾಲನೆ ಮಾಡಬಹುದಾಗಿದೆ. ಆದರೆ ಒಂದು ಷರತ್ತಿದೆ. ಗರಿಷ್ಠ ಒಂದು ವರ್ಷದ ಅವಧಿಯ ತನಕ ನೀವಿದರ ಪ್ರಯೋಜನ ಪಡೆಯಬಹುದಾಗಿದೆ.

18. ಕೆನಡಾ
1971ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಟ್ರಾನ್ಸ್-ಕೆನಡಾ ಹೆದ್ದಾರಿಯು ಜಗತ್ತಿನ ಅತಿ ಉದ್ದದ ಹೈವೇಗಳಲ್ಲಿ ಒಂದಾಗಿದ್ದು, 10 ಪ್ರಾಂತ್ಯಗಳನ್ನು ಸಂಪರ್ಕಿಸುತ್ತದೆ. ಭಾರತೀಯ ಲೈಸನ್ಸ್ ಇಟ್ಟುಕೊಂಡು ಆರು ತಿಂಗಳುಗಳ ವರೆಗೆ ವಾಹನ ಓಡಿಸಬಹುದಾಗಿದೆ.

19. ಅಮೆರಿಕ
ಅಮೆರಿಕದಲ್ಲೂ ಭಾರತೀಯ ಪರವಾನಗಿ ಇಟ್ಟುಕೊಂಡು ವಾಹನ ಚಾಲನೆ ಮಾಡಲು ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ಡ್ರೈವಿಂಗ್ ಲೈಸನ್ಸ್ ಮಾತ್ರ ಇಂಗ್ಲಿಂಷ್ ನಲ್ಲಿ ಮುದ್ರಿತವಾಗಿರಬೇಕು. ಹಾಗೊಂದು ವೇಳೆ ಪ್ರಾದೇಶಿಕ ಭಾಷೆಗಳಲ್ಲಿ ಮುದ್ರಿತವಾದ್ದಲ್ಲಿ ಅಂತರಾಷ್ಟ್ರೀಯ ಚಾಲನಾ ಪರವಾನಗಿ ಕಡ್ಡಾಯವಾಗಿ ಹಾಜರುಪಡಿಸಬೇಕು.

20. ಮೆಕ್ಸಿಕೊ
ಮೆಕ್ಸಿಕೊದಲ್ಲಿ ರಾತ್ರಿ ವೇಳೆಯಲ್ಲಿ ವನ್ಯಜೀವಿಗಳ ಕಾಟ ಎದುರಾಗುವುದರಿಂದ ನಿಧಾನವಾಗಿ ಚಾಲನೆ ಮಾಡಲು ಸೂಚಿಸಲಾಗಿದೆ. ಇಲ್ಲಿ ಭಾರತೀಯ ಲೈಸನ್ಸ್ ಇಟ್ಟುಕೊಂಡು 12 ತಿಂಗಳುಗಳ ವರೆಗೆ ವಾಹನ ಓಡಿಸಬಹುದಾಗಿದೆ.

21. ಬ್ರೆಜಿಲ್
ಸಾಮಾನ್ಯವಾಗಿ ಮಾರ್ಗ ಬದಲಾವಣೆಯ ಹೊರತಾಗಿ ಬ್ರೆಜಿಲ್ ನಲ್ಲಿ ಇನ್ನಿತರ ಅಗತ್ಯಗಳಿಗಾಗಿಯೂ ಇಂಡಿಕೇಟರ್ ಗಳನ್ನು ಬಳಕೆ ಮಾಡಲಾಗುತ್ತದೆ. ಇಲ್ಲಿ ಎಡ ಬದಿಯ ಇಂಡಿಕೇಟರ್ ಮುಂದಕ್ಕೆ ಹೋಗಲು ಅಸುರಕ್ಷಿತ ಹಾಗೂ ಬಲ ಬದಿಯ ಇಂಡಿಕೇಟರ್ ಸುರಕ್ಷಿತ ಎಂಬುದನ್ನು ಸೂಚಿಸುತ್ತದೆ. ಬ್ರೆಜಿಲ್ ನಲ್ಲಿ ಆರು ತಿಂಗುಳಗಳ ವರೆಗೆ ಭಾರತೀಯ ಲೈಸನ್ಸ್ ಮಾನ್ಯ ಮಾಡಲಾಗುತ್ತದೆ.


Click it and Unblock the Notifications








