Uber ಕ್ಯಾಬ್ ರೇಟ್ ನೋಡಿ ಮಹಿಳೆ ಶಾಕ್: ಹೆಚ್ಚುಕಮ್ಮಿ ವಿಮಾನದ ಟಿಕೆಟ್‌ನಷ್ಟೇ..! ಬಿಎಂಟಿಸಿ ಬಳಸಿ ಎಂದ ನೆಟ್ಟಿಗರು
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದ ಜನರು ಹೈರಾಣಾಗಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಿಂದ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಒಲಾ ಮತ್ತು ಉಬರ್‌ನಂತಹ ಖಾಸಗಿ ಕ್ಯಾಬ್‌ಗಳ ಮೊರೆಹೋಗುತ್ತಾರೆ. ಇವು ಆರಾಮದಾಯಕ ಪ್ರಯಾಣವನ್ನು ಒದಗಿಸುವುದರೊಂದಿಗೆ ಬೇಗನೆ ಗಮ್ಯ ಸ್ಥಾನವನ್ನು ತಲುಪಿಸುತ್ತವೆ. ಆ ಕಾರಣಕ್ಕೆ ಬಹುತೇಕರು ತಮ್ಮ ಸಂಚಾರಕ್ಕೆ ಕ್ಯಾಬ್‌ಗಳನ್ನು ಆಯ್ಕೆ ಮಾಡುತ್ತಾರೆ.
ಈ ಕ್ಯಾಬ್ ಸೇವೆ ಕೊಂಚ ದುಬಾರಿಯೂ ಆಗಿದೆ. ಇತ್ತೀಚೆಗೆ, ಮನಸ್ವಿ ಶರ್ಮಾ ಎಂಬ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರಲು ಕ್ಯಾಬ್ ಬುಕ್ ಮಾಡಿದಾಗ ತಮಗಾದ ಅನುಭವದ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಪುಣೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ರೂ.3,500ಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಿದೆ. ಆದರೆ, ಬೆಂಗಳೂರು ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಕ್ಯಾಬ್ ದರ ರೂ.2,000' ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ತಮ್ಮ 'ಎಕ್ಸ್' ಖಾತೆಯಲ್ಲಿ ಉಬರ್ (Uber)ನ ಕ್ಯಾಬ್ ದರವಿರುವ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ನೆಟ್ಟಿಗರ ಗಮನಕ್ಕೂ ಬಂದಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಹಲವಾರು, ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದರೆ ಅತ್ಯಂತ ಕಡಿಮೆ ಬೆಲೆಗೆ ಹೋಗಬಹುದಿತ್ತು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ 'ಕಳೆದ ತಿಂಗಳು ನಾನು ಇದನ್ನು ಗಮನಿಸಿದ್ದೇನೆ. ಬೆಂಗಳೂರಿನಿಂದ ಚೆನ್ನೈಗೆ ವಿಮಾನದಲ್ಲಿ ರೂ.1799. ಆದರೆ, ಕ್ಯಾಬ್‌ನಲ್ಲಿ ಹೆಚ್ಎಸ್ಆರ್ ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೂ.2000ಕ್ಕಿಂತ ಹೆಚ್ಚಿನ ದರವಿತ್ತು. ನಾನು ಬಸ್ ನಲ್ಲಿ ಪ್ರಯಾಣಿಸಲು ನಿರ್ಧರಿಸಿದೆ. 4 ಗಂಟೆ 25 ನಿಮಿಷಗಳಲ್ಲಿ ತೆರಳಬಹುದಾಗಿರುವುದರಿಂದ ವಂದೇ ಭಾರತ್ ಕೂಡ ಉತ್ತಮ ಆಯ್ಕೆಯಾಗಿದೆ' ಎಂದು ಹೇಳಿದ್ದಾರೆ.

ಮತ್ತೊಬ್ಬ ನೆಟ್ಟಿಗ, ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. 'ನೀವು ವಿಮಾನ ಟಿಕೆಟ್ ಖರೀದಿಸಿ, ಪೈಲಟ್ ಅಣ್ಣನಿಗೆ ದಯವಿಟ್ಟು ನನ್ನನ್ನು ಮನೆಯ ಹತ್ತಿರ ಬಿಡಿ ಎಂದು ಹೇಳಬಹುದು. ಎಷ್ಟು ಹಣ ವ್ಯರ್ಥವಾಯಿತು' ಎಂದು ಹೇಳಿದ್ದಾರೆ. ಇನ್ನೊಬ್ಬರು, 'ಏರ್‌ಪೋರ್ಟ್‌ನಿಂದ ಮನೆಗೆ ವಿಮಾನವನ್ನು ಬುಕ್ ಮಾಡಿರಬೇಕು' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಒಮ್ಮೆ ನಾನು ಜೈಪುರದಿಂದ ದೆಹಲಿಗೆ ವಿಮಾನದಲ್ಲಿ ತೆರಳಲು ರೂ.1300 ಹಾಗೂ ಮನೆಗೆ ತಲುಪಲು ಉಬರ್‌ಗೆ ರೂ.1500 ಪಾವತಿಸಿದ್ದೇನೆ ಎಂದು ಹೇಳಿದ್ದಾರೆ.
ಬಹುತೇಕ ಸಾಮಾಜಿಕ ಜಾಲತಾಣ ಬಳಕೆದಾರರು ವಿಮಾನ ನಿಲ್ದಾಣದಿಂದ ನಗರದೊಳಗೆ ಪ್ರಯಾಣಿಸಲು ಬಿಎಂಟಿಸಿ ವೋಲ್ವೋ ಬಸ್ ಬಳಕೆ ಮಾಡುವಂತೆ ಸಲಹೆ ನೀಡಿದ್ದಾರೆ. ನೆಟ್ಟಿಗರೊಬ್ಬರು, 'ಬಿಬಿಎಂಟಿಸಿ ವೋಲ್ವೋ ಬಸ್ ತೆಗೆದುಕೊಂಡಿದ್ದರೆ ರೂ.250 ಟಿಕೆಟ್ ದರದಲ್ಲಿ ಪ್ರಯಾಣಿಸಬಹುದಿತ್ತು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಬೇಕು ಎಂದಿದ್ದಾರೆ.
ಇನ್ನು, ಬೆಂಗಳೂರು ವಿಮಾನ ನಿಲ್ದಾಣದಿಂದ ನಗರದ ವಿವಿಧ ಬಡಾವಣೆಗಳಿಗೆ ತಲುಪಲು ಬಿಎಂಟಿಸಿ ವೋಲ್ವೋ ಬಸ್ ಗಳು ಉತ್ತಮ ಆಯ್ಕೆಯಾಗಿವೆ. ಇವು ಕಡಿಮೆ ದರಕ್ಕೆ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನವನ್ನು ವೇಗ ಹಾಗೂ ಸುರಕ್ಷಿತವಾಗಿ ತಲುಪಿಸುತ್ತವೆ. ಕ್ಯಾಬ್ ಕಂಪನಿಗಳು ಸಹ ಕೈಗೆಟುಕುವ ದರದಲ್ಲಿ ಸೇವೆಯನ್ನು ಒದಗಿಸಿದರೆ, ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications