ಇಬ್ಬರು ಮಕ್ಕಳ ತಾಯಿಗೆ ಇವೆಲ್ಲಾ ಬೇಕಾ?... AI ಕ್ಯಾಮರಾಗಳಿಂದ ತಪ್ಪಿಸಿಕೊಂಡ್ರೂ ಮಾದ್ಯಮಗಳಿಂದ ವೈರಲ್ ಆದ್ರು
ಭಾರತದಲ್ಲಿನ ಪ್ರಮುಖ ನಗರಗಳು ಈಗ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ಮಾರ್ಟ್ ಸಿಟಿಗಳಾಗಿ ಬದಲಾಗುತ್ತಿವೆ. ಇದರ ಒಂದು ಭಾಗವಾಗಿ ಈಗ AI ಕ್ಯಾಮೆರಾಗಳು ನಗರಗಳಲ್ಲಿ ವಾಹನ ಸವಾರರಿಗೆ ನಿದ್ದೆಯಿಲ್ಲದಂತೆ ಮಾಡುತ್ತಿವೆ. ಮಹಿಳೆಯೊಬ್ಬರು AI ಕ್ಯಾಮೆರಾದಿಂದ ತ್ರಿಬಲ್ ರೈಡಿಂಗ್ ಅನ್ನು ತಪ್ಪಿಸಲು ಮಗುವನ್ನು ಸ್ಕೂಟರ್ ಫ್ಲೋರ್‌ಬೋರ್ಡ್‌ನಲ್ಲಿ ಅಡಗಿಸಿ ಕೂರಿಸಿರುವ ದೃಷ್ಯ ವೈರಲ್ ಆಗಿದೆ.
ಕೇರಳ ರಾಜ್ಯವು ಏಪ್ರಿಲ್ 20 ರಂದು ಸುರಕ್ಷಿತ ಕೇರಳ ಯೋಜನೆಯ ಭಾಗವಾಗಿ ರಾಜ್ಯದಾದ್ಯಂತ 726 AI ಕ್ಯಾಮೆರಾಗಳನ್ನು ಅಳವಡಿಸಿ ಕಾರ್ಯಗತಗೊಳಿಸಿದೆ. ಈ ಸಿಸ್ಟಮ್ ಮೇ 20, 2023 ರಿಂದ ಚಲನ್‌ಗಳನ್ನು ವಿತರಿಸಲು ಪ್ರಾರಂಭಿಸುತ್ತದೆ. ಈ ಕ್ಯಾಮರಾಗಳು ಸ್ವಯಂಚಾಲಿತವಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಗಿಸುವವರನ್ನು ಪತ್ತೆಹಚ್ಚಿ ವಾಹನದ ಫೋಟೋ ಜೊತೆಗೆ ವಾಹನದ ಸಂಖ್ಯೆಯನ್ನು ಕಂಟ್ರೋಲ್ ರೂಂಗೆ ಕಳುಹಿಸುತ್ತದೆ. ಹಾಗಾಗಿ ಕೇರಳದಲ್ಲಿ ಈ ಹಿಂದೆಗಿಂತ ಈಗ ಟ್ರಾಫಿಕ್ ನಿಯಮಗಳು ಬಿಗಿಯಾಗಿದೆ.

ಈ ಹಿಂದೆ ರಸ್ತೆಗಳಲ್ಲಿ ಪೊಲೀಸರನ್ನು ನೋಡಿ ನಿಯಮಗಳನ್ನು ಪಾಲನೆ ಮಾಡುತ್ತಿದ್ದವರು, ಈಗ ಕ್ಯಾಮರಾಗಳನ್ನು ನೋಡಿ ಹೆದರುತ್ತಿದ್ದಾರೆ. ಒಟ್ಟಾರೆಯಾಗಿ ಪೊಲೀಸರ ಅವಶ್ಯಕತೆಯೇ ಇಲ್ಲದೇ ರಸ್ತೆಗಳಲ್ಲಿ ವಾಹನಗಳನ್ನು ಗುರ್ತಿಸಿ ದಂಡ ವಿಧಿಸುತ್ತಿರುವುದರಿಂದ ಹಲವರು ನಿಯಮಗಳನ್ನು ಪಾಲನೆ ಮಾಡಿದ್ರೆ, ಇನ್ನೂ ಕೆಲವರು ನಿಯಮಗಳನ್ನು ಉಲ್ಲಂಘಿಸಿದರೂ ಎಐ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳಲು ಹೊಸ ದಾರಿಗಳನ್ನು ಕಂಡುಕೊಂಡಿದ್ದಾರೆ. ಎರಡು ಮಕ್ಕಳ ತಾಯಿ ಒಬ್ಬರು ಕ್ಯಾಮರಾಗಳಿಂದ ತಪ್ಪಿಸಿಕೊಳ್ಳಲು ಸ್ಕೂಟರ್‌ನಲ್ಲಿ ಮಗುವನ್ನು ಬಚ್ಚಿಟ್ಟ ದೃಷ್ಯ ವೈರಲ್ ಆಗಿದೆ.
ಹೌದು ಎಐ ಕ್ಯಾಮೆರಾದಿಂದ ಪಾರಾಗಲು ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸಲು ಹೊಸ ಮಾರ್ಗವನ್ನು ಕಂಡುಹಿಡಿದಿರುವ ಮಹಿಳೆಯ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಕೇರಳದ ಸ್ಥಳೀಯ ಮಾದ್ಯಮಗಳು ಹಂಚಿಕೊಂಡಿವೆ. ತನ್ನ ಇಬ್ಬರು ಮಕ್ಕಳನ್ನು ಹೋಂಡಾ ಆಕ್ಟಿವಾ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಬಾಲಕಿ ಹಿಂದೆ ಕುಳಿತಿದ್ದರೆ ಇನ್ನೊಂದು ಮಗು ಸ್ಕೂಟರ್ ಫ್ಲೋರ್‌ಬೋರ್ಡ್ ಮೇಲೆ ಕುಳಿತಿರುವುದನ್ನು ಕಾಣಬಹುದು.
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಘಟನೆ ವರದಿಯಾಗಿದೆ. ಕಾಲುಗಳ ನಡುವೆ ಅಡಗಿಕೊಂಡು, ರಸ್ತೆಯಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳನ್ನು ಮರುಳು ಮಾಡಲು ಮಹಿಳೆ ಮುಂದಾಗಿದ್ದಾರೆ. ಸ್ಕೂಟರ್ ನಲ್ಲಿರುವ ಮೂರನೇ ವ್ಯಕ್ತಿಯನ್ನು ಕ್ಯಾಮೆರಾ ಪತ್ತೆ ಮಾಡದ ಕಾರಣ, ಸವಾರ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ. ಇದು ಅನೇಕರಿಗೆ ತಮಾಷೆಯಾಗಿ ಕಾಣಿಸಬಹುದು, ಆದರೆ ಇದು ಅತ್ಯಂತ ಅಪಾಯಕಾರಿ. ರಸ್ತೆ ಉಬ್ಬುಗಳು, ತಿರುವುಗಳಲ್ಲಿ ತುಸು ವೇಗ ಹೆಚ್ಚಿಸಿದರೂ ಮಗು ಕೆಳಗೆ ಬೀಳುತ್ತದೆ.
ಆರಂಭದಲ್ಲಿ ಇದು ಸಾಮಾನ್ಯ ವಿಡಿಯೋದಂತೆ ಕಾಣುತ್ತದೆ, ಆದರೆ ನೀವು ಎಚ್ಚರಿಕೆಯಿಂದ ನೋಡಿದಾಗ ಸ್ಕೂಟರ್‌ನಲ್ಲಿ ಎರಡು ಬ್ಯಾಗ್‌ಗಳಿವೆ ಆದರೆ ಒಂದೇ ಮಗು ಇರುವುದು ಗಮನಕ್ಕೆ ಬರುತ್ತದೆ. ನೀವು ಇನ್ನೂ ಹತ್ತಿರದಿಂದ ನೋಡಿದ್ರೆ ತಾಯಿಯ ಕಾಲುಗಳ ನಡುವೆ ಎರಡನೇ ಮಗುವಿನ ಕಾಲುಗಳನ್ನು ನೋಡಬಹುದು. ಸ್ಕೂಟರ್‌ನ ಫ್ಲೋರ್‌ಬೋರ್ಡ್ ಪ್ರದೇಶದ ಮೇಲೆ ಕುಳಿತಿರುವ ಮಗು ಸಂಪೂರ್ಣ ಮುದಿರಿಕೊಂಡು ಸ್ವಲ್ಪವೂ ಆರಾಮದಾಯಕ ಸ್ಥಿತಿಯಲ್ಲಿಲ್ಲ ಎಂಬುದನ್ನು ಈ ವಿಡಿಯೋ ಸ್ಪಷ್ಟವಾಗಿ ತೋರುತ್ತದೆ.
ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಚಿತ್ರ ಹಾಗೂ ಚಾಲಕನ ಭಾವಚಿತ್ರವನ್ನು AI ಕ್ಯಾಮೆರಾಗಳು ಸೆರೆಹಿಡಿದು ಮೋಟಾರು ವಾಹನ ಇಲಾಖೆಯ ನಿಯಂತ್ರಣ ಕೊಠಡಿಗೆ ಕಳುಹಿಸಲಾಗುವುದು. ಈ ಕ್ಯಾಮೆರಾಗಳು ಸೌರಶಕ್ತಿ ಚಾಲಿತವಾಗಿದ್ದು, 4G ಕನೆಕ್ಟಿವಿಟಿ ಸಿಮ್ ಬಳಸಿ ಡೇಟಾವನ್ನು ವರ್ಗಾಯಿಸಲಾಗುತ್ತದೆ. ಆರು ತಿಂಗಳವರೆಗಿನ ಉಲ್ಲಂಘನೆ ದೃಶ್ಯಾವಳಿಗಳನ್ನು ಸಂಗ್ರಹಿಸುವ ವ್ಯವಸ್ಥೆ ಇದರಲ್ಲಿದೆ. ಒಂದು ದಿನದಲ್ಲಿ ಬರೋಬ್ಬರಿ 30,000 ದಂಡದ ನೋಟಿಸ್‌ಗಳನ್ನು ಕಳುಹಿಸಬಹುದು ಎಂದು ಕೇರಳ ಮೋಟಾರು ವಾಹನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ 7,000 AI ಕ್ಯಾಮರಾಗಳು:
ಬೆಂಗಳೂರಿನಲ್ಲಿ ಈ ಹಿಂದೆ 3,000 ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ (AI) ಚಾಲಿತ 7,000 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಹನಿವೆಲ್ ಕಂಪನಿ ಟೆಂಡರ್ ಪಡೆದು ಪೂರ್ಣಗೊಳಿಸಿತ್ತು. ಬೆಂಗಳೂರು ಸುರಕ್ಷಿತ ನಗರ ಯೋಜನೆಯ ಮೊದಲ ಹಂತದ ಭಾಗವಾಗಿ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಕೂಡ ಹೊಂದಿದೆ. ಸೀಟ್ ಬೆಲ್ಟ್ ಧರಿಸದೆ ಪ್ರಯಾಣಿಸುವುದು, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸುವುದು, ಸಿಗ್ನಲ್ ಜಂಪ್‌ನಂತಹ ಟ್ರಾಫಿಕ್ ನಿಯಮ ಉಲ್ಲಂಘಟನೆಗಳನ್ನು ಈ ಕ್ಯಾಮರಾಗಳು ಸೆರೆಹಿಡಿದು ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೋಂಗೆ ಕಳುಹಿಸುತ್ತವೆ.


Click it and Unblock the Notifications